ಬೆಂಗಳೂರು: ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ವಿಶೇಷ ಸಮಿತಿ ರಚಿಸಿ ತನಿಖೆ ನಡೆಸುವಂತೆ ಇಂದು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ನೇತೃತ್ವದಲ್ಲಿ ಸಿನಿ ತಾರೆಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಸಾಕಷ್ಟು ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಇದೀಗ ಕನ್ನಡ ಚಿತ್ರರಂಗದಲ್ಲೂ ಮಹಿಳಾ ಕಲಾವಿದರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಬೆಳಕಿಗೆ ತರಬೇಕು ಎನ್ನುವ ಉದ್ದೇಶದಿಂದ ಇಂದು ಸಮಿತಿ ರಚಿಸುವಂತೆ ಫೈರ್ ಸಂಸ್ಥೆಯ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್ ನೇತೃತ್ವದ ಫೈರ್ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು. ಈ ವೇಳೆ ನಟಿಯರಾದ ಶ್ರುತಿ ಹರಿಹರನ್, ನೀತೂ ಕೂಡಾ ಉಪಸ್ಥಿತರಿದ್ದರು. ಇವರ ಮನವಿಗೆ ಸಿಎಂ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.