ಬೆಂಗಳೂರು: ರಾಜು ತಾಳಿಕೋಟೆಯವರನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟೆವು. ಆದರೆ ಆಗಲೇ ಇಲ್ಲ ಎಂದು ಕೊನೆಯ ಕ್ಷಣ ಏನಾಗಿತ್ತು ಎಂದು ಅವರ ಜೊತೆಗಿದ್ದ ನಟ ಶೈನ್ ಶೆಟ್ಟಿ ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ರಂಗಭೂಮಿ ನಟ, ಸ್ಯಾಂಡಲ್ ವುಡ್ ಪೋಷಕ ನಟ ರಾಜು ತಾಳಿಕೋಟೆ ಉಡುಪಿಗೆ ಚಿತ್ರೀಕರಣಕ್ಕೆಂದು ಬಂದಿದ್ದವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವು ಕನ್ನಡ ಚಿತ್ರರಂಗಕ್ಕೆ ಶಾಕ್ ಆಗಿದೆ. ಮೂರು ದಿನದ ಶೂಟಿಂಗ್ ಗೆ ಎಂದು ಬಂದವರು ಇಹಲೋಕದ ಪ್ರಯಾಣವನ್ನೇ ಮುಗಿಸಿದ್ದಾರೆ.
ಅವರ ಜೊತೆಗೆ ಕೊನೆಯ ಕ್ಷಣದಲ್ಲಿ ಜೊತೆಗಿದ್ದವರಲ್ಲಿ ನಟ ಶೈನ್ ಶೆಟ್ಟಿ ಕೂಡಾ ಒಬ್ಬರು. ಅವರು ನಾಯಕರಾಗಿರುವ ಸಿನಿಮಾದಲ್ಲೇ ರಾಜು ತಾಳಿಕೋಟೆ ಅಭಿನಯಿಸುತ್ತಿದ್ದರು. ಕೊನೆಯ ಕ್ಷಣದಲ್ಲಿ ಏನಾಯ್ತು ಎಂಬುದನ್ನು ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಬಿಗ್ ಬಾಸ್ ಸೀಸನ್ 7 ರಲ್ಲಿ ಜೊತೆಗೇ ಇದ್ದವರು ನಾವು. ಆ ಸೀಸನ್ ನಲ್ಲಿದ್ದವರೆಲ್ಲರ ಜೊತೆ ಒಂದು ಬಾಂಡಿಂಗ್ ಇದೆ. ರಾಜು ತಾಳಿಕೋಟೆ ಸರ್ ತುಂಬಾ ಸೀನಿಯರ್ ಆಗಿದ್ದರು. ಆಗಿಂದಲೇ ಅವರ ಜೊತೆ ಕೆಲಸ ಮಾಡಬೇಕು ಎಂದು ಆಸೆ ಇತ್ತು. ಈ ಒಂದು ಸಿನಿಮಾ ಆರು ತಿಂಗಳ ಹಿಂದೆ ಮಾಡಬೇಕು ಎಂದು ನಿರ್ಧಾರ ಮಾಡಿದಾಗ ಅವರನ್ನು ಅಪ್ರೋಚ್ ಮಾಡಿದ್ದೆ. ಆಗ ಅವರು ನಿಂದಿದ್ರೆ ಹೇಳು ಮಾಡ್ತೀನಿ ಎಂದಿದ್ದರು.
ಅಕ್ಟೋಬರ್ 10 ರಿಂದ 3 ದಿನ ಅವರ ಜೊತೆ ಶೂಟಿಂಗ್ ಮಾಡಿದ್ದೆವು. ನಿನ್ನೆ ಶೂಟಿಂಗ್ ಮುಗಿಸಿ ಊಟ ಮಾಡಿದ ಬಳಿಕವೂ ನಾಳೆ ಎಷ್ಟೊತ್ತಿಗೆ ಶೂಟಿಂಗ್ ಎಲ್ಲಾ ಕೇಳಿದ್ದಾರೆ. ಸುಮಾರು 11.59 ಕ್ಕೆ ನಮ್ಮ ಮ್ಯಾನೇಜರ್ ಗೆ ಕರೆ ಮಾಡಿ ನನಗೆ ಉಸಿರಾಡಕ್ಕೆ ಕಷ್ಟವಾಗ್ತಿದೆ ಎಂದರು. ನಾನು ಇದ್ದ ರೂಂನ ಪಕ್ಕವೇ ಅವರಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಷ್ಟರಲ್ಲೇ ಅವರ ಪಲ್ಸ್ ರೇಟ್ ಕಡಿಮೆಯಾಗಿತ್ತು. ತುರ್ತು ಚಿಕಿತ್ಸೆ ಮಾಡಿ ಪಲ್ಸ್ ಬಂತು. ಮತ್ತೆ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ನಂತರ ಕುಟುಂಬದವರಿಗೆ ಮಾಹಿತಿ ನೀಡಿದೆವು. ಸಂಜೆ ಅವರ ಮಗನೂ ಬಂದಿದ್ದ. ಆದರೆ ಅವರ ಮನೆಯವರು ಬರುವಷ್ಟರಲ್ಲಿ ಅವರು ಹೋಗಿದ್ದರು ಎಂದು ಶೈನ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ.