ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಪತ್ನಿ ಪರ ಶಿವಣ್ಣ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಈ ನಡುವೆ ಬಿಜೆಪಿ ಚುನಾವಣಾ ಆಯೋಗಕ್ಕೆ ಶಿವರಾಜ್ ಕುಮಾರ್ ವಿರುದ್ಧ ದೂರು ನೀಡಿದೆ. ಪತ್ನಿ ಗೀತಾ ಪರ ಚುನಾವಣಾ ಪ್ರಚಾರ ನಡೆಸುತ್ತಿರುವುದಲ್ಲದೆ, ಕಾಂಗ್ರೆಸ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕಾರಣಕ್ಕೆ ಶಿವಣ್ಣ ಸಿನಿಮಾಗಳು, ಜಾಹೀರಾತುಗಳನ್ನು ಚುನಾವಣೆ ಮುಗಿಯುವವರೆಗೆ ಬ್ಯಾನ್ ಮಾಡಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಶಿವರಾಜ್ ಕುಮಾರ್ ನನ್ನ ವಿರುದ್ಧ ದೂರು ದಾಖಲಾಗಿದೆ ಎಂದು ತಾಯಾಣೆಗೂ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ನನಗೆ ತಾಯಾಣೆ ಈ ವಿಚಾರ ಗೊತ್ತಿಲ್ಲ. ಇದನ್ನು ಲೀಗಲ್ ಟೀಂ ನೋಡಿಕೊಳ್ಳುತ್ತದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು, ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ತೆರಳಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾದ ಬಗ್ಗೆ ಪ್ರಶ್ನಿಸಿದಾಗ ಯಾರು ಯಾರನ್ನು ಬೇಕಾದ್ರೂ ಭೇಟಿಯಾಗಬಹುದು. ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.