ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲೂ ಕೆಲವು ಬದಲಾವಣೆಗಳಾಗುವ ಸಾಧ‍್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಈ ಮೊದಲು ಯತೀಂದ್ರರನ್ನು ಲೋಸಕಭೆ ಚುನಾವಣೆಗೆ ಕಣಕ್ಕಿಳಿಸಲು ಒತ್ತಡಗಳಿತ್ತು. ಆದರೆ ಯತೀಂದ್ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ ಕಾಂಗ್ರೆಸ್ ಚಾಮರಾಜನಗರ ಟಿಕೆಟ್ ಯಾರಿಗೆ ಎಂದು ಇದುವರೆಗೆ ಘೋಷಣೆ ಮಾಡಿಲ್ಲ. ಈ ಸ್ಥಾನವನ್ನು ಸಚಿವ ಎಚ್ ಮಹದೇವಪ್ಪನವರಿಗೆ ಕೊಡುವ ಬಗ್ಗೆ ಚರ್ಚೆಗಳಾಗುತ್ತಿವೆ.
ಒಂದು ವೇಳೆ ಚಾಮರಾಜನಗರದ ಟಿಕೆಟ್ ಮಹದೇವಪ್ಪಗೆ ನೀಡಿ ಅವರು ಗೆಲುವು ಸಾಧಿಸಿದರೆ ಅವರ ಸಚಿವ ಸ್ಥಾನ ತೆರವಾಗುತ್ತದೆ. ಈ ಸ್ಥಾನಕ್ಕೆ ಯತೀಂದ್ರರನ್ನು ಕರೆತರಲು ಪ್ರಯತ್ನ ನಡೆದಿದೆ ಎನ್ನಲಾಗಿದೆ. ಯತೀಂದ್ರ ಈಗಾಗಲೇ ತಂದೆಯ ವಿಧಾನಸಭೆ ಕ್ಷೇತ್ರದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಮುಂದೆ ಅವರನ್ನು ಎಂಎಲ್ ಸಿ ಮಾಡಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವ ಸಾಧ‍್ಯತೆಯಿದೆ ಎನ್ನಲಾಗಿದೆ. ಹೇಗಿದ್ದರೂ ಎಚ್ ಮಹದೇವಪ್ಪನವರು ಸಿದ್ದರಾಮಯ್ಯನವರಿಗೆ ಆಪ್ತರು. ಹೀಗಾಗಿ ಅವರ ಸ್ಥಾನಕ್ಕೆ ಯತೀಂದ್ರರನ್ನು ಕರೆತರುವ ಎಲ್ಲಾ ಸಾಧ‍್ಯತೆಗಳೂ ಕಂಡುಬರುತ್ತಿದೆ.