ಶಿವಮೊಗ್ಗ: ಈ ಬಾರಿ ಶಿವಮೊಗ್ಗದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿಯುತ್ತಿರುವ ಪತ್ನಿ ಗೀತಾ ಶಿವರಾಜ್ ಕುಮಾರ್ ಗೆ ಶಿವಣ್ಣ ಸಾಥ್ ನೀಡಿದ್ದಾರೆ.
ಪ್ರಚಾರಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಕುಮಾರ್ ಪತ್ನಿ ಪರವಾಗಿ ಮಾತನಾಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್ ಕುಮಾರ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ, ವಿತರಕರ ಸಂಘ, ನಿರ್ಮಾಪಕರ ಸಂಘ ಬೆಂಬಲ ಕೊಡಲು ಮುಂದಾಗಿದೆ.
ತಮಗೆ ಬೆಂಬಲ ನೀಡುತ್ತಿರುವ ಚಿತ್ರರಂಗಕ್ಕೆ ಶಿವಣ್ಣ ಧನ್ಯವಾದ ಸಲ್ಲಿಸಿದ್ದಾರೆ. ವಿಶೇಷವಾಗಿ ಡಾ.ರಾಜ್ ಕುಮಾರ್ ಕುಟುಂಬ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡವರಲ್ಲ. ಆದರೆ ಶಿವಣ್ಣ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಟೀಕೆ ಕೇಳಿಬಂದಿತ್ತು.
ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ ಅಪ್ಪಾಜಿಗೆ ರಾಜಕೀಯ ಆಗುತ್ತಿರಲಿಲ್ಲ ಅಂತ ಕೆಲವರು ಹೇಳ್ತಾರೆ. ಆದರೆ ಹಾಗೇನೂ ಇಲ್ಲ. ಯಾವುದೇ ಸಮಾರಂಭ ಆಗಲಿ, ಯಾವುದೇ ಮುಖ್ಯಮಂತ್ರಿ ಆಗಲಿ, ಮೊದಲು ದೊಡ್ಮನೆಗೆ ಬಂದು ಅಪ್ಪಾಜಿ ಜೊತೆ ಮಾತನಾಡುತ್ತಿದ್ದರು. ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ರಾಜಕೀಯದ ವ್ಯಕ್ತಿಗಳು ಬೇಕು. ಇಲ್ಲಾಂದ್ರೆ ನನಗೆ ಯಾಕೆ ಬಂಗಾರಪ್ಪನ ಮಗಳು ತರಬೇಕು ರಾಜಕೀಯಕ್ಕೆ ಬರಬೇಕು ಹೇಳಿ? ಅವರು ರಾಜಕೀಯವನ್ನು ಯಾವಾಗಲೂ ತಪ್ಪು ಅಂತ ಹೇಳಿಲ್ಲ ಎಂದಿದ್ದಾರೆ.
ಅಪ್ಪಾಜಿ ವೈಯಕ್ತಿಕವಾಗಿ ರಾಜಕೀಯ ಆಗುತ್ತಿರಲಿಲ್ಲ ಅಷ್ಟೇ. ತಮ್ಮ ಕೆಲಸ ನಟನೆ ಅಂತ ಹೇಳಿದ್ದರು. ನನಗೂ ರಾಜಕೀಯಕ್ಕೆ ಬನ್ನಿ ಎಂದು ಕೆಲವರು ಕರೆದಿದ್ದರು. ನನಗೆ ಬೇಡ ಅಂದೆ. ಅಪ್ಪಾಜಿ ನನಗೆ ಕೊಟ್ಟ ಬಳವಳಿ ಸಿನಿಮಾ. ಆದರೆ ಗೀತಾಗೆ ಹಾಗಲ್ಲ. ಅವರ ತಂದೆಯೂ ರಕ್ತನೂ ಇದೆ. ಅದೊಂದು ಜವಾಬ್ಧಾರಿ ಅವರಿಗೆ ಇದೆ. ಕರ್ನಾಟಕದಲ್ಲಿ ಮಹಿಳೆಯರು ರಾಜಕೀಯಕ್ಕೆ ಬಂದಿರುವುದು ಕಡಿಮೆ. ಈಗ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂದಿದ್ದಾರೆ.