ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರು ಆದಷ್ಟು ಬೇಗ ಹೊರಬರಲೆಂದು ಅವರ ಮನೆಯವರು, ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟದ ಜತೆ ದೇವರ ಮೊರೆ ಹೋಗಿ ಜೈಲಿನಲ್ಲಿರುವ ಪತಿಗೆ ಸಂಕಷ್ಟ ನಿವಾರಣೆಯಾಗಲೆಂದು ಬೇಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ದರ್ಶನ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಜೈಲಿನಿಂದ ಹೊರಬಂದು ಆದಷ್ಟು ಬೇಗ ಅವರ ಸಿನಿಮಾಗಳನ್ನು ಬೆಳ್ಳಿತೆರೆ ಮೇಲೆ ನೋಡುವಂತಾಗಲಿ ಎಂದು ಹರಸುತ್ತಿದ್ದಾರೆ. ಈ ಹಿನ್ನೆಲೆ ಅವರ ಅಭಿಮಾನಿಗಳು ತಮ್ಮ ಊರಿನಲ್ಲಿ ಜಪ, ವ್ರತ ಮಾಡುತ್ತಿದ್ದಾರೆ. ಹೀಗೇ ನಿನ್ನೆ ಶ್ರಾವಣ ಸೋಮವಾರದಂದು ದರ್ಶನ್ ಬಿಡುಗಡೆಗಾಗಿ ಬಳ್ಳಾರಿಯಲ್ಲಿ ದೇವರ ವಿಗ್ರಹದ ಬಳಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು, ಇದೀಗ ಈ ಪೂಜೆ ಅರ್ಚಕರಿಗೆ ಸಂಕಷ್ಟ ತಂದೊಟ್ಟಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದೊಡ್ಡಬಸವೇಶ್ವರ ದೇವರ ಪ್ರಾಣ ಮೂರ್ತಿ ಮುಂದೆ ಅರ್ಚಕರು ನಟ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ದರ್ಶನ್ ಅವರ ಮುಂದಿನ ಸಿನಿಮಾ 'ಡೆವಿಲ್' ಎಂದು ಬರೆದಿರುವ ಪೋಸ್ಟರ್ ಸೇರಿದಂತೆ ದರ್ಶನ್ ವಿವಿಧ ಫೋಟೋಗಳನ್ನು ದೇವರ ಮುಂದೆ ಇಟ್ಟು ಕುಂಕುಮ ಹಚ್ಚಿ ಪೂಜೆ ಮಾಡಿ, ಮಂಗಳಾರತಿ ಎತ್ತಲಾಗಿದೆ.
ಈ ನಡೆಗೆ ಭಕ್ತರು ಆಕ್ರೋಶ ಹೊರಹಾಕಿದ್ದು, ಅದರಂತೆ ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಅವರು ಅರ್ಚಕರನ್ನು ಅಮಾನತು ಮಾಡಿದ್ದಾರೆ. ಈ ಸಂಬಂಧ ವಿಚಾರಣೆ ಮುಗಿಯುವವರೆಗೂ ದೇವಸ್ಥಾನದಲ್ಲಿ ಪೂಜೆ ನೆರವೇರಿಸದಂತೆ ಸವರಿಗೆ ಸೂಚಿಸಲಾಗಿದೆ.