ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಇದೇ ತಿಂಗಳ ಹತ್ತೊಂಬತ್ತನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ. ಹೊಸತನವನ್ನೇ ಧೇನಿಸುವ ನಿರ್ದೇಶಕ, ವ್ಯವಹಾರದಾಚೆಗೆ ಸಿನಿಮಾ ಪ್ರೇಮ ಹೊಂದಿರೋ ನಿರ್ಮಾಪಕ ಮತ್ತು ಅದಕ್ಕೆ ತಕ್ಕುದಾದ ತಾಂತ್ರಿಕ ವರ್ಗ... ಇವಿಷ್ಟು ಜೊತೆಯಾದರೆ ಒಂದೊಳ್ಳೆ ಚಿತ್ರ ತಂತಾನೆ ರೂಪುಗೊಳ್ಳುತ್ತವೆ. ಇಂಥಾ ಕ್ರಿಯೇಟಿವ್ ತಂಡದೊಂದಿಗೆ ಪೊಗದಸ್ತಾಗಿಯೇ ರೂಪುಗೊಂಡಿರೋ ಚಿತ್ರ ಸಿಂಗ.
ವಿಜಯ್ ಕಿರಣ್ ರಾಮ್ ಲೀಲಾ ಚಿತ್ರದ ನಂತರ ನಿರ್ದೇಶನ ಮಾಡಿರೋ ಸಿಂಗ ವಿಶಿಷ್ಟವಾದ ಕಥೆಯನ್ನೊಳಗೊಂಡಿದೆ ಅನ್ನೋ ವಿಚಾರ ಈಗಾಗಲೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ರಾಮ್ ಲೀಲಾ ನಂತರದಲ್ಲಿ ಮತ್ತೆ ಚಿರಂಜೀವಿ ಸರ್ಜಾ ಅವರಿಗಾಗೊಂದು ಸಿನಿಮಾ ಮಾಡಬೇಕೆಂಬ ಆಸೆ ಹೊಂದಿದ್ದ ವಿಜಯ್ ಕಿರಣ್ ವರ್ಷಗಟ್ಟಲೆ ಶ್ರಮ ವಹಿಸಿ ಈ ಕಥೆ ರೆಡಿ ಮಾಡಿದ್ದಾರೆ. ಇದರಿಂದಾಗಿಯೇ ಹಳ್ಳಿ ಫ್ಲೇವರ್ ಹೊಂದಿರೋ ಸಿಂಗ ಬಿಡುಗಡೆಗೆ ರೆಡಿಯಾಗಿದೆ.
ಈ ಚಿತ್ರದ ನಾಯಕಿ ಪಾತ್ರಕ್ಕಾಗಿ ವಿಜಯ್ ಕಿರಣ್ ತುಂಬಾನೇ ತಲಾಶು ನಡೆಸಿದ್ದರಂತೆ. ಆದರೆ ಈ ಪಾತ್ರಕ್ಕೆ ಸರಿ ಹೊಂದುವವರ್ಯಾರೂ ಸಿಕ್ಕಿರಲಿಲ್ಲ. ಆಡಿಷನ್ ನಡೆಸಿದರೂ ಅದಕ್ಕೊಪ್ಪುವವರು ಸಿಕ್ಕಿರಲಿಲ್ಲ. ಹೀಗೆ ಹುಡುಕಾಟದಲ್ಲಿದ್ದಾಗ ಅವರ ಗಮನಕ್ಕೆ ಬಂದಿದ್ದು ಅದಿತಿ ಪ್ರಭುದೇವ. ನಂತರದಲ್ಲಿ ಅದಿತಿ ಲಂಗ ದಾವಣಿ ತೊಟ್ಟು ಈ ಪಾತ್ರಕ್ಕೆ ಸರಿ ಹೊಂದುತ್ತಾರೆಂದು ಅನ್ನಿಸಿದ ನಂತರವಷ್ಟೇ ಅವರು ನಾಯಕಿಯಾಗಿ ನಿಕ್ಕಿಯಾಗಿದ್ದರು. ಹೀಗೆ ಸಿಂಗನ ಸಖಿಯಾದ ಅದಿತಿ ನಿರೀಕ್ಷೆಗೂ ಮೀರಿ ಈ ಪಾತ್ರಕ್ಕೆ ಜೀವ ತುಂಬಿದ್ದಾರಂತೆ.
ವಿಶಿಷ್ಟವಾದ ಪಾತ್ರಗಳನ್ನೇ ಬಯಸುತ್ತಾ, ಅಂಥಾ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದಿರುವ ಅದಿತಿ ಪಾಲಿಗೆ ಸಿಂಗ ಚಿತ್ರದ ಮೂಲಕ ಮತ್ತೆ ಅಂಥಾದ್ದೇ ವಿಶೇಷವಾದ ಪಾತ್ರವೇ ಸಿಕ್ಕಿದೆ. ಇಲ್ಲಿ ಅವರು ಹಳ್ಳಿ ಹುಡುಗಿಯಾಗಿ ನಟಿಸಿದ್ದಾರೆ. ಈಗಾಗಲೇ ಅವರು ಶಾನೆ ಟಾಪಾಗವ್ಳೆ ಎಂಬ ಹಾಡಿನ ಮೂಲಕ ಮಿಂಚಿದ್ದಾರೆ.