Sonu Nigam: ನಾನು ಪ್ರೀತಿಸುವ ಕನ್ನಡಿಗರ ಬಗ್ಗೆ ಹೀಗೆಲ್ಲಾ ಯಾಕೆ ಹೇಳಲಿ: ಮತ್ತೆ ಗರಂ ಆದ ಸೋನು ನಿಗಂ

Krishnaveni K

ಗುರುವಾರ, 22 ಮೇ 2025 (17:00 IST)
ಮುಂಬೈ: ಇತ್ತೀಚೆಗಷ್ಟೇ ಕನ್ನಡ ಹಾಡು ಹಾಡುವ ವಿಚಾರದಲ್ಲಿ ವಿವಾದಕ್ಕೊಳಗಾಗಿದ್ದ ಗಾಯಕ ಸೋನು ನಿಗಂ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ ಸಿನಿಮಾವನ್ನು ಹಿಂದಿ ಭಾಷೆಗೆ ಡಬ್ ಮಾಡಬೇಡಿ ಎಂದು ಹೇಳಿದ್ದಾರೆಂದು ಸುದ್ದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನು ನಾನು ಪ್ರೀತಿಸುವ ಕನ್ನಡಿಗರ ಬಗ್ಗೆ ನಾನ್ಯಾಕೆ ಹೀಗೆ ಹೇಳಲಿ ಎಂದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಎಸ್ ಬಿಐ ಬ್ಯಾಂಕ್ ಮಹಿಳಾ ಸಿಬ್ಬಂದಿ ಕನ್ನಡ ಮಾತನಾಡಲು ನಿರಾಕರಿಸಿದ್ದ ವಿಚಾರ ಭಾರೀ ವಿವಾದಕ್ಕೀಡಾಗಿತ್ತು. ಇದರ ಬಗ್ಗೆ ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಕರ್ನಾಟಕಕ್ಕೆ ಬರುವ ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಮಾತನಾಡಲು ತರಬೇತಿ ಕೊಡಬೇಕು ಎಂದು ಹೇಳಿದ್ದರು.

ಅವರ ಈ ಟ್ವೀಟ್ ಗೆ ಸೋನು ನಿಗಂ ಹೆಸರಿನ ಎಕ್ಸ್ ಪೇಜ್ ನಲ್ಲಿ ತಿರುಗೇಟು ನೀಡಲಾಗಿತ್ತು. ಹಾಗಿದ್ದರೆ ಇನ್ನು ಮುಂದೆ ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬಾರದು. ಕನ್ನಡ ಭಾಷೆಯ ನಟರಿಗೂ ಇದನ್ನು ಹೇಳುವ ತಾಕತ್ತು ನಿಮಗಿದೆಯಾ ಎಂದು ಆ ಟ್ವೀಟ್ ನಲ್ಲಿ ಹೇಳಲಾಗಿತ್ತು.

ಇದನ್ನು ಸೋನು ನಿಗಂ ಅವರೇ ಹೇಳಿದ್ದು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಸೋನು ನಿಗಂ ಇನ್ ಸ್ಟಾಗ್ರಾಂ ಪುಟದ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಬಗ್ಗೆ ವರದಿ ಪ್ರಕಟಿಸಿದ ಪತ್ರಿಕೆಗೆ ಝಾಡಿಸಿದ ಸೋನು ‘ನಾನು ಎಕ್ಸ್ ಖಾತೆಯನ್ನೇ ಹೊಂದಿಲ್ಲ ಎಂದು ಎಷ್ಟು ಬಾರಿ ನಿಮಗೆ ಹೇಳಬೇಕು? ನನ್ನ ಹೆಸರಿನಲ್ಲಿ ಯಾರೋ ಮಾಡಿದ ಫೇಕ್ ಸಂದೇಶವನ್ನು ನಾನೇ ಮಾಡಿದ್ದು ಎಂದು ಯಾಕೆ ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ತುಂಬುತ್ತೀರಿ? ನಾನು ಅತ್ಯಂತ ಹೆಚ್ಚು ಪ್ರೀತಿಸುವ ಮತ್ತು ನನ್ನನ್ನು ಪ್ರೀತಿಸುವ ಕನ್ನಡಿಗರ ಮನಸ್ಸಿನಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಭಾವನೆ ತುಂಬುತ್ತಿರುವುದು ಯಾಕೆ? ಇಂತಹ ಮಾಧ್ಯಮಗಳಿಂದ ನಾನು ರೋಸಿ ಹೋಗಿದ್ದೇನೆ’ ಎಂದು ಖಡಕ್ ಸಂದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ