ಹೈದರಾಬಾದ್: ರಶ್ಮಿಕಾ ಮಂದಣ್ಣರಂತೇ ಕನ್ನಡದಿಂದ ತೆಲುಗಿಗೆ ಹೋಗಿ ಕ್ಲಿಕ್ ಆಗಿರುವ ನಟಿಯೆಂದರೆ ಶ್ರೀಲೀಲಾ. ಪಕ್ಕಾ ಕನ್ನಡತಿ ನಟಿಗೆ ಈಗ ತೆಲುಗಿನ ದೊಡ್ಡ ದೊಡ್ಡ ಹೀರೋಗಳ ಸಿನಿಮಾದಲ್ಲಿ ಚಾನ್ಸ್ ಸಿಗುತ್ತಿದೆ. ಅದೇ ರೀತಿ ಪುಷ್ಪ 2 ಸಿನಿಮಾದಲ್ಲೂ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದಾರಂತೆ.
ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಪುಷ್ಪ ಭಾಗ 1 ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಚಿತ್ರತಂಡ ಎರಡನೇ ಭಾಗ ನಿರ್ಮಾಣ ಮಾಡುತ್ತಿದೆ. ಮೊದಲ ಭಾಗದಲ್ಲಿ ಸಿನಿಮಾದಷ್ಟೇ ಹಾಡುಗಳೂ ಸದ್ದು ಮಾಡಿದ್ದವು. ಅದರಲ್ಲೂ ಸಮಂತಾ ಋತು ಪ್ರಭು ಕುಣಿದಿದ್ದ ಊಂ ಆಂಟವಾ ಐಟಂ ಸಾಂಗ್ ಭರ್ಜರಿ ಹಿಟ್ ಆಗಿತ್ತು.
ಇದೀಗ ಎರಡನೇ ಭಾಗದಲ್ಲೂ ಚಿತ್ರತಂಡ ಇಂತಹದ್ದೇ ಐಟಂ ಸಾಂಗ್ ಮಾಡಲು ಸಿದ್ಧತೆ ನಡೆಸಿದೆ. ಈ ಹಾಡಿಗೆ ಈ ಬಾರಿ ಸಮಂತಾ ಬದಲಿಗೆ ಶ್ರೀಲೀಲಾರನ್ನು ಹಾಕಿಕೊಳ್ಳಲು ಚಿತ್ರತಂಡ ಯೋಜನೆ ರೂಪಿಸಿತ್ತು. ಬ್ಯೂಟಿ, ಗ್ಲಾಮರ್ ಎರಡೂ ಇರುವ ಶ್ರೀಲೀಲಾ ಈ ಪಾತ್ರಕ್ಕೆ ಸೂಕ್ತ ಎಂದು ಚಿತ್ರತಂಡ ಅವರನ್ನು ಕೇಳಿಕೊಂಡಿತ್ತು.
ಆದರೆ ಶ್ರೀಲೀಲಾ ಮಾತ್ರ ಕೋಟಿ ಕೊಟ್ಟರೂ ಸದ್ಯಕ್ಕೆ ತಾನು ಐಟಂ ಹಾಡು ಮಾಡಲ್ಲ ಎಂದು ನಯವಾಗಿ ತಿರಸ್ಕರಿಸಿದ್ದಾರಂತೆ. ಈಗ ಶ್ರೀಲೀಲಾ ತೆಲುಗಿನಲ್ಲಿ ಹೀರೋಯಿನ್ ಆಗಿ ಮಿಂಚಲು ಪ್ರಾರಂಭಿಸಿದ್ದಾರೆ. ಈಗ ಐಟಂ ಸಾಂಗ್ ಮಾಡಿದರೆ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು ಎಂದು ಶ್ರೀಲೀಲಾ ಪುಷ್ಪ 2 ರಲ್ಲಿ ಡ್ಯಾನ್ಸ್ ಮಾಡದೇ ಇರಲು ನಿರ್ಧರಿಸಿದ್ದಾರಂತೆ.