ಸಾಧುಕೋಕಿಲಾ ಎದುರೇ ಸಿಕ್ಕರೂ ಮುಖನೋಡಲ್ಲ, ಆಹ್ವಾನವನ್ನೂ ಕೊಟ್ಟಿಲ್ಲ: ಟೆನಿಸ್ ಕೃಷ್ಣ

Krishnaveni K

ಬುಧವಾರ, 5 ಮಾರ್ಚ್ 2025 (14:06 IST)
ಬೆಂಗಳೂರು: ಹಿರಿಯ ಕಲಾವಿದರಿಗೆ ಗೌರವವಿಲ್ಲ. ಸಾಧುಕೋಕಿಲಾ ಎದುರೇ ಸಿಕ್ಕರೂ ನಮ್ಮ ಮುಖ ನೋಡಲ್ಲ. ನಮಗೆ ಪಾಸ್ ಕೊಡಿ ಎಂದು ಕೇಳಿದರೂ ಬೆಂಗಳೂರು ಚಿತ್ರೋತ್ಸವಕ್ಕೆ ಆಹ್ವಾನ ಕೊಟ್ಟಿಲ್ಲ. ಕೊಡದೇ ಹೇಗೆ ಹೋಗೋದು ಎಂದು ಹಿರಿಯ ನಟ ಟೆನಿಸ್ ಕೃಷ್ಣ ಆರೋಪ ಮಾಡಿದ್ದಾರೆ.
 

ಇಂದು ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಟೆನಿಸ್ ಕೃಷ್ಣ ‘ಹಿರಿಯ ಕಲಾವಿದರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಅವರಿಗೆ ಯಾರು ಬೇಕಾದವರು ಇರ್ತಾರೋ ಅವರಿಗೆ ಕರೆದಿದ್ದಾರೆ. ನಾವು ಕನ್ನಡ ಪರ ಎಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದಾನೆ ಎಂದು ತೋರಿಸಲಾ ನಿಮಗೆ?’ ಎಂದು ಹೇಳಿದ್ದಾರೆ.

‘ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎನ್ನುತ್ತಾರೆ. ನಮಗೆ ಆಹ್ವಾನವೇ ಕೊಡದೇ ಹೋಗೋದು ಹೇಗೆ? ನಾನು ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಮೇಕೆದಾಟು ಹೋರಾಟಕ್ಕೆ ಅನಾರೋಗ್ಯದ ಕಾರಣದಿಂದ ಬರಲು ಆಗಲಿಲ್ಲ. ಯಾರು ಬಂದಿಲ್ವೋ ಗೊತ್ತಿಲ್ಲ.

‘ಸಾಧು ಕೋಕಿಲಾ ನಮ್ಮನ್ನು ಕರೀಬೇಕಿತ್ತು. ಮೊದಲೇ ಕರೀಲಿಲ್ಲ ಯಾಕೆ? ನಿಗಮ ಮಂಡಳಿ ಅಧ್ಯಕ್ಷರಾಗಿ ಅವರ ಕರ್ತವ್ಯ ಅದು. ನನ್ನ ಜೊತೆಗೇ ಎದುರು ಸಿಕ್ಕರೂ ಸರಿಯಾಗಿ ಮಾತನಾಡಲ್ಲ ಆತ. ನನಗೆ ಸತ್ಯವಾಗಲೂ ಆಹ್ವಾನ ಬಂದಿಲ್ಲ. ಹೇಗೆ ಬರೋದು. ಹಿರಿಯ ಕಲಾವಿದರಿಗೆ ಆಹ್ವಾನವೇ ಬಂದಿಲ್ಲ. ಹೋಗಲು ಪಾಸ್ ಬೇಕಲ್ವಾ? ನಮಗೆ ಪಾಸ್ ಕೊಟ್ಟಿಲ್ಲ’ ಎಂದು ಟೆನಿಸ್ ಕೃಷ್ಣ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಾಧು ಕೋಕಿಲಾ ‘ಅಕಾಡಮಿಯ ಅಧ್ಯಕ್ಷತೆಯಲ್ಲಿ ಫಿಲಂ ಫೆಸ್ಟಿವಲ್ ಚೆನ್ನಾಗಿ ಓಡ್ತಿದೆ. ದೊಡ್ಡ ದೊಡ್ಡ ಕಲಾವಿದರು, ಟೆಕ್ನಿಷಿಯನ್ ಬಂದು ಹೋಗುತ್ತಿದ್ದಾರೆ. ಎಲ್ಲರಿಗೂ ಇನ್ವಿಟೇಷನ್ ಕೊಟ್ಟಿದ್ದೆವು. ಖುದ್ದಾಗಿ ಅಥವಾ ಪಿಆರ್ ಒಗಳು ಮಾಡಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಆಹ್ವಾನ ನೀಡುವ ಕೆಲಸ ಮಾಡಲಾಗಿದೆ. ಕಳೆದ ವರ್ಷ ಹೇಗೆ ಪಾಸ್ ನೀಡಲಾಗಿತ್ತೋ ಹಾಗೆಯೇ ಈ ವರ್ಷವೂ ಮಾಡಲಾಗಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ