ಬೆಂಗಳೂರು: ಮುಡಾ ಹಗರಣದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದ ಹಾಗೇ ಇತ್ತ ಸಿದ್ದರಾಮಯ್ಯ ಜೀವನಾಧಾರಿತ ಚಿತ್ರವಾದ ಲೀಡರ್ ರಾಮಯ್ಯ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೈಟುಗಳ ವಿವಾದದಲ್ಲಿ ಸಿದ್ದರಾಮಯ್ಯನವರು ಸಿಲುಕಿದ್ದು, ಆ ವಿಚಾರದಲ್ಲೀಗ ಕೇಂದ್ರದ ಜಾರಿ ನಿರ್ದೇಶನಾಲಯ ಕೂಡ ಕೇಸ್ ದಾಖಲಿಸಿದೆ. ಕೇಂದ್ರೀಯ ತನಿಖಾ ತನಿಖಾ ಸಂಸ್ಥೆಯೊಂದು ಈ ಕೇಸ್ ನಲ್ಲಿ ಕಾಲಿಟ್ಟಿರುವುದರಿಂದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅದಲ್ಲದೆ ಚಿತ್ರೀಕರಣ ನಿಲುಗಡೆಗೆ ಸಿದ್ಧರಾಮಯ್ಯನವರ ಪಾತ್ರ ಮಾಡುತ್ತಿರುವ ತಮಿಳು ನಟ ವಿಜಯ್ ಸೇತುಪತಿಯವರ ಡೇಟ್ಸ್ ಸಮಸ್ಯೆಯೂ ಕಾರಣವಾಗಿದೆ ಎಂದು ಹೇಳಲಾಗಿದೆ.
ಖ್ಯಾತ ನಟ ಸೇತುಪತಿಯವರು ಸದ್ಯಕ್ಕೆ ಹಿಂದಿ ಸೇರಿದಂತೆ ತಮಿಳು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ಸತ್ಯರತ್ನಂ, ಗಂಗಾವತಿ ಮೂಲಕ ಹಯ್ಯಾತ್ ಫಿರ್ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಈಗಾಗಲೇ ಮೈಸೂರು ಭಾಗದಲ್ಲಿ ಸಿಎಂ ಬಾಲ್ಯ ಹಾಗೂ ಶಿಕ್ಷಣ ಸೇರಿ ಹಲವು ಸನ್ನಿವೇಶಗಳ ಶೂಟಿಂಗ್ ಪೂರ್ಣವಾಗಿತ್ತು. ಮೂಡಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಎರಡನೆ ಭಾಗದ ಸನ್ನಿವೇಶಗಳ ಚಿತ್ರಿಕರಣಕ್ಕೆ ಚಿತ್ರ ತಂಡ ಬ್ರೇಕ್ ಹಾಕಿ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದೆ, ಸದ್ಯಕ್ಕೆ ಶೂಟಿಂಗ್ ನಿಲ್ಲಿಸಿದೆ.