ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಿಯ ಸಖಿ ಸಿನಿಮಾ ಈವೆಂಟ್ ನಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ಆಕ್ರೋಶಗೊಂಡ ಘಟನೆ ನಡೆದಿದೆ. ಕೇಸ್ ಹಾಕುವುದಾಗಿಯೂ ವೇದಿಕೆಯಲ್ಲೇ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಎಫ್ ಎಂಗಳಲ್ಲಿ, ವಾಹಿನಿಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಪ್ರಸಾರ ಮಾಡಲಾಗುತ್ತದೆ. ಆದರೆ ಹಾಡು ಪ್ರಸಾರ ಮಾಡುವಾಗ ಯಾವ ನಾಯಕ ನಟಿಸಿದ ಹಾಡು ಎಂದು ಮಾತ್ರ ಹೇಳಲಾಗುತ್ತಿದೆ. ಹಾಡು ಕೇಳುವಾಗ ಹಾಡುಗಾರ ಯಾರು ಎಂದೂ ಗೊತ್ತಾಗುತ್ತಿದೆ. ಆದರೆ ಸಂಗೀತ ಸಂಯೋಜಕರು ಮತ್ತು ಸಾಹಿತಿಗಳಿಗೆ ಕ್ರೆಡಿಟ್ ಕೊಡುತ್ತಿಲ್ಲ. ಇದು ನಾಗೇಂದ್ರ ಪ್ರಸಾದ್ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಕೃಷ್ಣಂ ಪ್ರಿಯ ಸಖಿ ಸಿನಿಮಾದ ದ್ವಾಪರ ಹಾಡು ಭಾರೀ ಹಿಟ್ ಆಗಿದೆ. ಈ ಹಾಡನ್ನು ಹಾಡಿದವರು ಜಸ್ಕರನ್ ಸಿಂಗ್ ಎಂದು ಎಲ್ಲಾ ಕಡೆ ಪ್ರಚಾರವಾಗಿದೆ. ಆದರೆ ಹಾಡನ್ನುಬರೆದವರು ಯಾರು ಮತ್ತು ಸಂಗೀತ ನಿರ್ದೇಶಕರು ಯಾರು ಎಂದು ಎಲ್ಲೂ ಹೇಳುತ್ತಿಲ್ಲ. ಇನ್ನು ಮುಂದೆ ಹಾಡು ಪ್ಲೇ ಮಾಡುವಾಗ ಸಾಹಿತಿ ಮತ್ತು ಸಂಗೀತ ಸಂಯೋಜಕರ ಹೆಸರನ್ನೂ ಹೇಳಲೇಬೇಕು. ಇಲ್ಲಾಂದ್ರೆ ಕೇಸ್ ಹಾಕ್ತೀವಿ ಎಂದಿದ್ದಾರೆ.
ಕೇಸ್ ಹಾಕಲು ಸರ್ಕಾರ ನಮಗೆ ಕಾನೂನಿನಲ್ಲಿ ಅವಕಾಶ ನೀಡಿದೆ. 3000 ಹಾಡುಗಳನ್ನು ಬರೆದ ನಾನು ಈ ಮಾತು ಹೇಳ್ತಿದ್ದೇನೆ. ಇದನ್ನು ನಾಯಕ ನಟ ಗಣೇಶ್ ಆಗಲೀ ಬೇರೆಯವರಾಗಲೀ ಅನ್ಯಥಾ ಭಾವಿಸಬಾರದು. ಆದರೆ ಹಾಡು ಬರೆದವರು, ಸಂಗೀತ ಸಂಯೋಜಿಸಿದವರಿಗೂ ಬೆಲೆ ಸಿಗಬೇಕು ಎಂದು ನಾಗೇಂದ್ರ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.