ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಡೆಸಿದ ಹಲ್ಲೆಯಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮರ್ಡರ್ ಕೇಸ್ ನ ವಿವರವಾದ ಎಫ್ ಎಸ್ಎಲ್ ವರದಿ ಪೊಲೀಸರ ಕೈ ಸೇರಿದೆ. ಇದರಲ್ಲಿ ಮತ್ತಷ್ಟು ಬೆಚ್ಚಿಬೀಳಿಸುವ ಅಂಶಗಳಿವೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಮೃತದೇಹದ ಎಫ್ಎಸ್ಎಲ್ ವರದಿಯನ್ನು ಹೈದರಾಬಾದ್ ಗೆ ಕಳುಹಿಸಿಕೊಡಲಾಗಿತ್ತು. ಇದರ ವರದಿ ನಿನ್ನೆ ಸಂಜೆಯೇ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ. ಈ ವರದಿಯಲ್ಲಿ ರೇಣುಕಾಸ್ವಾಮಿಗೆ ಹೊಡೆದ ರಭಸಕ್ಕೆ ಆತನ ಪಕ್ಕೆಲುಬು ಮುರಿದು ಶ್ವಾಸಕೋಶವನ್ನು ಚುಚ್ಚಿದೆ ಎಂದು ಬಯಲಾಗಿದೆ.
ಇದು ದರ್ಶನ್ ಆಂಡ್ ಗ್ಯಾಂಗ್ ನಡೆಸಿದ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ವಿವರವಾದ ಎಫ್ಎಸ್ಎಲ್ ವರದಿ ಕೈ ಸೇರುತ್ತಿದ್ದಂತೇ ಇಂದು ತನಿಖಾಧಿಕಾರಿಗಳು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಮುಂದೆ ಯಾವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.
ದರ್ಶನ್ ಪ್ರಕರಣದಲ್ಲಿ ಪೊಲೀಸರು ಇನ್ನೂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ. ನಾಳೆಗೆ ದರ್ಶನ್ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು ಅದಾದ ಬಳಿಕ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ.