ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಸ್ಟಾರ್ ಆಗಿದ್ದಾರೆ. ಹಾಗಿದ್ದರೂ ಈಗಲೂ ಅವರು ತಮ್ಮ ಮೂಲ ಕನ್ನಡ ಮರೆತಿಲ್ಲ ಎಂದು ಫ್ಯಾನ್ಸ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣವೂ ಇದೆ.
ರಾಕಿಂಗ್ ಸ್ಟಾರ್ ಯಶ್ ಈಗ ಬಾಲಿವುಡ್ ನ ರಾಮಾಯಣ ಸಿನಿಮಾಗೆ ಬಂಡವಾಳ ಹೂಡಿ, ರಾವಣನ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಪಾತ್ರ ಮಾಡುತ್ತಿದ್ದಾರೆ. ನಿನ್ನೆ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿದೆ.
ಎಲ್ಲರೂ ಟೀಸರ್ ಕಡೆಗೆ ನೋಡಿದರೆ ಕನ್ನಡ ಅಭಿಮಾನಿಗಳು ಮಾತ್ರ ಯಶ್ ಸಹಿ ಮೇಲೆಯೇ ಗಮನಕೊಟ್ಟಿದ್ದಾರೆ. ರಾಮಾಯಣ ನಾಮಫಲಕದಲ್ಲಿ ಎಲ್ಲಾ ನಟರ ಸಹಿ ಇದೆ. ಇದರಲ್ಲಿ ಯಶ್ ಸಹಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಎಲ್ಲಾ ನಟರೂ ಇಂಗ್ಲಿಷ್ ನಲ್ಲಿ ಸಹಿ ಹಾಕಿದ್ದರೆ ಯಶ್ ಮಾತ್ರ ಕನ್ನಡದಲ್ಲೇ ಯಶ್ ಎಂದು ಸಹಿ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರೂ ಕನ್ನಡ ಮರೆತಿಲ್ಲ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಯಶ್ ಮಾತ್ರವಲ್ಲ, ಅವರ ಪತ್ನಿ ರಾಧಿಕಾ ಕೂಡಾ ಹಾಗೆಯೇ. ಈಗಲೂ ಯಾರೇ ಅಭಿಮಾನಿಗಳಿಗೆ ಸಹಿ ಹಾಕುವಾಗಲೂ ಕನ್ನಡದಲ್ಲೇ ಸಹಿ ಹಾಕುತ್ತಾರೆ. ಇದು ದಂಪತಿಗಿರುವ ಕನ್ನಡ ಪ್ರೇಮಕ್ಕೆ ಸಾಕ್ಷಿ.