ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನವರಿ 8 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಯಶ್ ರನ್ನು ಹುಟ್ಟುಹಬ್ಬ ದಿನ ಭೇಟಿ ಮಾಡಬಹುದು ಎಂದುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದಿದ್ದು, ನಾನು ಈ ಬಾರಿಯೂ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.
ಯಶ್ ಇದೀಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ನಿಮಿತ್ತ ಯಶ್ ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ನಿಮ್ಮನ್ನು ಖುದ್ದಾಗಿ ಭೇಟಿ ಮಾಡಲಾಗುತ್ತಿಲ್ಲ ಎಂದಿದ್ದಾರೆ.
ನನಗೂ ನಿಮ್ಮ ಜೊತೆ ಇರಬೇಕೆಂಬ ಬಯಕೆಯಿದೆ. ಆದರೆ ಸಿನಿಮಾ ಕೆಲಸ ನಿಮಿತ್ತ ಪ್ರಯಾಣ ಮಾಡಲೇಬೇಕಿದೆ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ನಂಬಿದ್ದೇನೆ. ಸದಾ ಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ ಎಂದು ಯಶ್ ಬರೆದುಕೊಂಡಿದ್ದಾರೆ. ಅವರ ಈ ಸಂದೇಶ ಅಭಿಮಾನಿಗಳಿಗೆ ನಿರಾಸೆ ಮೂಡಿದರೂ ಟಾಕ್ಸಿಕ್ ಸಿನಿಮಾ ಶುರುವಾಗುತ್ತಿದೆಯಲ್ಲಾ ಎಂಬ ಸಮಾಧಾನವೂ ಇದೆ.