ಕಿಶೋರ್ ಧಮಾಕ; ಹೆಬ್ಬುಲಿಯಾಗಿ ಘರ್ಜಿಸಿದೆ 'ಹುಲಿ'

PR
ಚಿತ್ರ: ಹುಲಿ
ತಾರಾಗಣ: ಕಿಶೋರ್, ಜೆನ್ನಿಫರ್ ಕೊತ್ವಾಲ್, ಆದಿ ಲೋಕೇಶ್, ಮಾಳವಿಕಾ
ನಿರ್ದೇಶನ: ಓಂ ಪ್ರಕಾಶ್ ರಾವ್
ಸಂಗೀತ: ಜಿ. ಅಭಿಮಾನ್ ರಾಯ್

ಡಿಸೆಂಬರ್ ಚುಮು ಚುಮು ಚಳಿಗೆ ಗರ್ಮಾ ಗರಂ ಬೋಂಡಾ, ಮೆಣಸಿನಕಾಯಿ ಬಜ್ಜಿ, ಎಷ್ಟು ರುಚಿಯೋ, ಅದೇ ರೀತಿ ಮಸಾಲೆ ಪ್ರಿಯ ಪ್ರೇಕ್ಷಕರಿಗೆ, ಮಸ್ತ್ ಮಸ್ತ್ ಮಸಾಲೆ ದೊರೆತಿದೆ.

ಕನ್ನಡ ಚಿತ್ರರಸಿಕರಿಗಂತೂ ಆಕ್ಷನ್ ಡೈಲಾಗುಗಳು ಖದರ್ ಆಗಿ 'ಹುಲಿ' ಚಿತ್ರದಲ್ಲಿ ನಾಯಕ ನಟ ಘರ್ಜಿಸಿರುವುದು ರುಚಿಸಿದೆ.

ಪ್ರೀತಿ, ಸೆಂಟಿಮೆಂಟ್, ಕಾಮಿಡಿ ಹಾಗೂ ಆಕ್ಷನ್ ಅನ್ನು ಎಷ್ಟು ಬೇಕೋ ಅಷ್ಟನ್ನು ಮನರಂಜನಾತ್ಮಕವಾಗಿ ಉಣಬಡಿಸಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್. ಕನ್ನಡ ಚಿತ್ರರಸಿಕರಿಗೆ ಏನೂ ಬೇಕೆಂಬ ಪಲ್ಸ್ ಅನ್ನು ಬಹಳ ಚೆನ್ನಾಗಿಯೇ ಸ್ಟಡಿ ಮಾಡಿದಂತೆ 'ಹುಲಿ' ಚಿತ್ರದಲ್ಲಿ ಕಂಡುಬಂದಿದೆ.

ನಟ ಕಿಶೋರ್ ಪೊಲೀಸ್ ಅಧಿಕಾರಿಯಾಗಿ ಖಡಕ್ ಅಂಡ್ ಖದರ್ ಆಗಿ ನಟಿಸಿದ್ದಾರೆ. ಇನ್ನೂ ಜೆನ್ನಿಯ ಮೈಮಾಟದ ರುಚಿ ಪ್ರೇಕ್ಷಕರಿಗೆ ಶೇ.100ರಷ್ಟು ಸಿಕ್ಕಿದೆ ಎನ್ನಬಹುದು. ಎಂ.ಎಸ್. ರಮೇಶ್ ಅವರಂತೂ ಡೈಲಾಗುಗಳಲ್ಲಿ ಕಚಗುಳಿ ಇಟ್ಟಿದ್ದಾರೆ. ಕಿಶೋರ್ ಈ ಚಿತ್ರ ಮೂಲಕ ಸಂಪೂರ್ಣ ನಾಯಕ ನಟನಾಗಿ ಎಂಟ್ರಿ ಕೊಟ್ಟು, ಸಿಕ್ಸರ್ ಬಾರಿಸುವಂತಹ ನಟನೆ ನೀಡಿದ್ದಾರೆ.

ದಕ್ಷ ಪೊಲೀಸ್ ಅಧಿಕಾರಿ ಚಂದ್ರಪ್ಪ ಹುಲಿಯಾಳ್ ಹುಲಿ (ಕಿಶೋರ್) ಪಾತಕರ, ದುಷ್ಟರ ಪಾಲಿಗೆ ಸಿಂಹಸ್ವಪ್ನ. ಟಿ.ವಿ. ನಿರೂಪಕಿಯಾಗಿ ಪ್ರೀತಿ (ಜೆನ್ನಿಫರ್) ಮಾಮೂಲಿಯಂತೆ ಹೀರೋ ಚಂದ್ರಪ್ಪನ ಘರ್ಜನೆಗೆ ಶರಣಾಗಿ 'ಪ್ರೀತಿ'ಸುತ್ತಾಳೆ. ದುಷ್ಟ ಮಂತ್ರಿಯ ಅವ್ಯವಹಾರಗಳ ಕೋಟೆಗೆ ನುಗ್ಗಿ ಒಂದೊಂದೆ ಕೆಟ್ಟ ಕೆಲಸಗಳನ್ನು ಮಟ್ಟಹಾಕುತ್ತಾನೆ ಚಂದ್ರಪ್ಪ ಹುಲಿಯಾಳ್.

ಇದರ ಫಲ ಆತನ ತಾಯಿ ಬಲಿ. ರೊಚ್ಚಿಗೆದ್ದ ಚಂದ್ರಪ್ಪ ಹುಲಿ... ಮುಂದೇನು ಮಾಡುತ್ತದೆ ಎನ್ನುವುದನ್ನು ಪರದೆಯ ಮೇಲೆ ನೋಡಿದರೆ ಚೆನ್ನಾ...

ಬರೀ ರೀಮೇಕ್ ಬೆರಕೆಗೆ ಜೋತು ಬಿದ್ದಿದ್ದ ಓಂಪ್ರಕಾಶ್ ರಾವ್ ಈಗ ಸಂಪೂರ್ಣ ಸ್ವಮೇಕ್ ಚಿತ್ರ ನೀಡಿದ್ದಾರೆ. ಸ್ವಮೇಕಲ್ಲಿ ಗೆದ್ದಿದ್ದಾರೆ. ಎಲ್ಲ ವರ್ಗದವರಿಗೂ ಇಷ್ಟವಾಗುವಂತ ಚಿತ್ರ ಇದು.

ಹಲವಾರು ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಮಿಂಚಿರುವ ಕಿಶೋರ್‌ಗೆ ಇದೇನೂ ಹೊಸ ಸವಾಲಲ್ಲ. ತಮ್ಮ ನೈಜ ಅಭಿನಯ ನೀಡಿ ಸೈ ಎನಿಸಿಕೊಂಡಿದ್ದಾರೆ. ನಾಯಕ ಪಾತ್ರಕ್ಕೆ ಇನ್ನೂ ಕೊಂಚ ಟ್ಯೂನಾದರೆ ಖಾಯಂ ಆಗಿ ನಾಯಕನಾಗಿ ನೆಲೆಸಬಹುದು.

ಜೆನ್ನಿಫರ್ ಕೊತ್ವಾಲ್ ನಟನೆಗೆ ಹೆಚ್ಚೆನೂ ಅವಕಾಶವಿಲ್ಲದಿದ್ದರೂ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿಲನ್ ಪಾತ್ರದ ಶೋಭರಾಜ್ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಅವರದು ಸಹಜ ಅಭಿನಯ. ಚಿತ್ರರಂಗ ಅವರಲ್ಲಿ ಹುದುಗಿರುವ ಪರಿಪೂರ್ಣ ಕಲೆಯನ್ನು ಹೊರತೆಗೆಯಬೇಕಷ್ಟೇ.

'ಹುಲಿ' ಪ್ರೇಕ್ಷಕ ವರ್ಗಕ್ಕೆ ಮನರಂಜನೆ ನೀಡುವುದರಲ್ಲಿ ಮಾಮೂಲಿಗಿಂತ ಕೊಂಚ ಹೆಚ್ಚೇ ಪ್ರಯತ್ನ ಪಟ್ಟಿದೆ. ಆದರೆ, ನಿರ್ದೇಶಕರು ಕೊಂಚ ಹೆಚ್ಚಿನ ಪ್ರಯತ್ನ ಹಾಕಿದ್ದರೆ ನೂರಕ್ಕೆ ನೂರರಷ್ಟು ಸದಭಿರುಚಿಯನ್ನು ನೀಡಬಹುದಿತ್ತು. ಚಿತ್ರದಲ್ಲಿ ಮನೋಹರ್ ಛಾಯಾಗ್ರಹಣ ಚೆನ್ನಾಗಿದೆ ಮೂಡಿಬಂದಿದೆ.

ಉಳಿದ ತಾರಾಗಣದಲ್ಲಿ ಅವಿನಾಶ್, ಮಾಳವಿಕ ಅವಿನಾಶ್, ಚಿತ್ರಾಶೆಣೈ, ಸುಮಿತ್ರಾ, ಆದಿಲೋಕೇಶ್, ಶ್ರೀನಿವಾಸಮೂರ್ತಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದು. ಒಟ್ಟಾರೆ ಪ್ರೇಕ್ಷಕರಿಗೆ ಮಸ್ತ್ ಮಸ್ತ್ ಮಜಾ.

ವೆಬ್ದುನಿಯಾವನ್ನು ಓದಿ