'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಎಲ್ಲಾ ನಿಟ್ಟಿನಲ್ಲೂ ಸಮಾಧಾನಕರ

EVENT
'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ನೋಡುತ್ತಿದ್ದಂತೆ ಅದೇಕೋ ಏನೋ ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯದ 'ನೀನು ನಕ್ಕರೆ ಹಾಲು ಸಕ್ಕರೆ' ಚಲನಚಿತ್ರ ನೆನಪಿಗೆ ಬರುತ್ತದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ನೀನು ನಕ್ಕರೆ....' ಚಿತ್ರದಲ್ಲಿ, ಮದುವೆಯಾಗು ಮದುವೆಯಾಗು ಎಂದು ತಾತ ತನ್ನ ಮೊಮ್ಮಗನನ್ನು ಪೀಡಿಸುತ್ತಿರುತ್ತಾರೆ. ಆದರೆ ತನ್ನ ಕಲ್ಪನೆಯ ಹುಡುಗಿ ಸಿಗದೆಯೇ ಮದುವೆಯಾಗಲು ಕಥಾನಾಯಕ ಒಪ್ಪುವುದಿಲ್ಲ. ಕೊನೆಗೆ ತಾತನ ಕಾಟ ತಾಳಲಾರದೆ ಊರಿಂದ ದೂರವಿರುವ ತನ್ನ ವಠಾರದ ಮನೆಗೆ ಬಂದು ಸೇರಿಕೊಳ್ಳುತ್ತಾನೆ. ವಿಷಯವೇನೆಂದು ಅರಿತ ಆ ವಠಾರವನ್ನು ನಿಗಾವಣೆ ನೋಡುತ್ತಿದ್ದಾಕೆಯು ವಠಾರದ ಮನೆಗಳ ಪೈಕಿ ಒಂದನ್ನು ಯಾವುದಾದರೊಂದು ಹುಡುಗಿಗೆ ಬಾಡಿಗೆಗೆ ಕೊಟ್ಟು, ಅವಳ ಗುಣ-ಸ್ವಭಾವಗಳನ್ನು ಅವಲೋಕಿಸಿ, ಇಷ್ಟವಾದರೆ ಮದುವೆಯಾಗಬಹುದೆಂದು ಸಲಹೆ ನೀಡುತ್ತಾಳೆ.

ಹೀಗೆ ಒಬ್ಬರಾದ ಮೇಲೊಬ್ಬರಂತೆ ನಾಲ್ವರು ಹುಡುಗಿಯರು ವಠಾರಕ್ಕೆ ಬಂದು ಹೋಗುವಂತಾದರೂ ಅವರಲ್ಲಿನ ವೈಪರೀತ್ಯಗಳಿಂದ ಅಥವಾ ಸಮಸ್ಯೆಗಳಿಂದ ನಾಯಕ ಅವರನ್ನು ಆಯ್ಕೆಯ ಪಟ್ಟಿಯಿಂದ ಹೊರಗಿಡಬೇಕಾಗುತ್ತದೆ. ಕೊನೆಗೊಬ್ಬ ಹುಡುಗಿ ಸಿಗುತ್ತಾಳೆ. ಇಬ್ಬರಿಗೂ ಪರಸ್ಪರ ಒಪ್ಪಿಗೆಯಾಗಿ ಇನ್ನೇನು ಮದುವೆಯಾಗಬೇಕೆನ್ನುವಷ್ಟರಲ್ಲಿ ಧುತ್ತೆಂದು ಸಮಸ್ಯೆಯೊಂದು ಎದುರಾಗುತ್ತದೆ. ಅದು ನಿವಾರಣೆಯಾಗಿ ನಾಯಕ-ನಾಯಕಿ ಮದುವೆಯಾದರೇ ಇಲ್ಲವೇ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್‌.

'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಚಿತ್ರವು ಅಜಯ್‌ರಾವ್‌ ನಾಯಕತ್ವದಲ್ಲಿ ಬಂದ 'ಕೃಷ್ಣನ್‌ ಲವ್‌ ಸ್ಟೋರಿ' ಚಿತ್ರದ ಉತ್ತರಾರ್ಧವಲ್ಲ ಎಂಬುದನ್ನು ಮೊಟ್ಟಮೊದಲಿಗೆ ಸ್ಪಷ್ಟಪಡಿಸಬೇಕು. ಈಗ ಈ ಚಿತ್ರದ ಕಥೆಯನ್ನು ಕೇಳಿ: ಕಥಾನಾಯಕ ಕೃಷ್ಣ ಓರ್ವ ಛಾಯಾಗ್ರಾಹಕ. ಆತ ಮದುವೆಯಾಗುವ ಹೆಣ್ಣು ಆತನ ದೊಡ್ಡ ಕುಟುಂಬದ ಸಾಮ‌ೂಹಿಕ ಆಯ್ಕೆಯ‌ೂ ಆಗಿರಬೇಕಾದ ಅನಿವಾರ್ಯತೆಯಿರುತ್ತದೆ. ಇದರಿಂದ ತಲೆಚಿಟ್ಟು ಹಿಡಿಸಿಕೊಳ್ಳುವ ಕೃಷ್ಣ ತಾನಿದ್ದ ಊರಿನಿಂದ ಹೊರಟು ದೂರದ ತನ್ನ ಅಜ್ಜಿಯ ಊರಿಗೆ ಬಂದು ಸೇರಿಕೊಳ್ಳುತ್ತಾನೆ.

ಅಲ್ಲಿ ಖುಷಿ ಎಂಬ ಓರ್ವ ಸಾಫ್ಟ್‌ವೇರ್ ಎಂಜಿನಿಯರ್ ಹುಡುಗಿ ಅವನ ಕಣ್ಣಿಗೆ ಬೀಳುತ್ತಾಳೆ. ಪರಸ್ಪರ ಭೇಟಿಯ ಒಂದಷ್ಟು ಸರ್ಕಸ್‌ಗಳ ನಂತರ ಆಕೆಯನ್ನು ಮದುವೆಯಾಗಲು ತೀರ್ಮಾನಿಸುವ ಕೃಷ್ಣ ಈ ವಿಷಯವನ್ನು ಊರಲ್ಲಿನ ತನ್ನ ಕುಟುಂಬಕ್ಕೂ ತಿಳಿಸುತ್ತಾನೆ. ಆದರೆ ಖುಷಿಗೆ ಆರೋಗ್ಯದ ಸಮಸ್ಯೆಯಿರುವುದು ತಿಳಿದುಬರುತ್ತದೆ. ಅವಳು ತನ್ನ ಸಮಸ್ಯೆಯಿಂದ ಹೊರಬಂದಳೇ? ಕೃಷ್ಣನ ಮದುವೆಯಾಯಿತೇ? ಎಂಬುದೇ ಚಿತ್ರದ ಪರಾಕಾಷ್ಠೆಯ ಸನ್ನಿವೇಶ.

ಕೃಷ್ಣ ಮತ್ತು ಖುಷಿಯ ಪಾತ್ರಗಳಲ್ಲಿ ನಟಿಸಿರುವ ಅಜಯ್‌ರಾವ್‌ ಹಾಗೂ ನಿಧಿ ಸುಬ್ಬಯ್ಯ ಇಬ್ಬರೂ ನಟನೆಯಲ್ಲಿನ ತಮ್ಮ ಚುರುಕುತನದಿಂದ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುತ್ತಾರೆ. ಭಾರ್ಗವಿ ನಾರಾಯಣ್, ವಿನಯಾ ಪ್ರಸಾದ್‌, ಜೈಜಗದೀಶ್‌, ಬಾಲರಾಜ್‌, ಸಂಗೀತಾ ಮೊದಲಾದ ಅನುಭವಿ ಕಲಾವಿದರಿಗೂ ಈ ಮಾತು ಅನ್ವಯಿಸುತ್ತದೆ.
ಮೊದಲ ಬಾರಿಗೆ ನಿರ್ದೇಶಕನ ಪಟ್ಟವನ್ನು ಅಲಂಕರಿಸಿರುವ ನೂತನ್‌ ಉಮೇಶ್‌ ಚಿತ್ರದ ಪ್ರಥಮಾರ್ಧದಲ್ಲಿ ಮನರಂಜನೆಯನ್ನು ಕಟ್ಟಿಕೊಡುತ್ತಾರಾದರೂ, ದ್ವಿತೀಯಾರ್ಧದಲ್ಲಿ ನಿಯಂತ್ರಣವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ತಾಂತ್ರಿಕವಾಗಿ ಹೇಳುವುದಾದರೆ ಚಿತ್ರದ ಪ್ರತಿಯೊಂದು ಫ್ರೇಮ್‌ನಲ್ಲಿಯ‌ೂ ಛಾಯಾಗ್ರಾಹಕ ಶೇಖರ್ ಚಂದ್ರ ಮಿಂಚಿದ್ದಾರೆ. ಸಂಗೀತ ನಿರ್ದೇಶಕ ಶ್ರೀಧರ್ ತಾವೊಬ್ಬ ಪ್ರತಿಭಾವಂತರೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಚಿತ್ರದ ದ್ವಿತೀಯಾರ್ಧವನ್ನು ಬೋರ್ ಹೊಡೆಸದಂತೆ ನಿರ್ದೇಶಕರು ನಿರೂಪಿಸಿದ್ದರೆ, ಕಲಾವಿದರೆಲ್ಲರ ಉತ್ತಮ ಅಭಿನಯ ಮತ್ತು ತಂತ್ರಜ್ಞರ ಶ್ರಮಕ್ಕೆ ಮತ್ತಷ್ಟು ಅರ್ಥ ದೊರೆಯುತ್ತಿತ್ತು. ಇದು ಹೊಸ ನಿರ್ದೇಶಕರ ಚಿತ್ರ ಎಂಬ ಗ್ರೇಸ್‌ ಮಾರ್ಕ್ಸ್ ಕೊಟ್ಟು ಹೇಳುವುದಾದರೆ 'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ತೀರಾ ಕಳಪೆ ಚಿತ್ರವೇನಲ್ಲ.


ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ