ಥಾಯ್ ಭಾಷೆಯ 'ಅಲೋನ್' ಚಿತ್ರದಿಂದ ಸ್ಫೂರ್ತಿ ಪಡೆದಿರುವ ಚಿತ್ರ 'ಚಾರುಲತಾ' ಅನ್ನೋದು ಗುಟ್ಟಿನ ಸಂಗತಿಯೇನಲ್ಲ. ಆದರೆ ಅದನ್ನು ಭಾರತೀಯ ಸಿನಿಮಾ ಸಂಸ್ಕೃತಿಗೆ ನಿರ್ದೇಶಕ ಪೊನ್ ಕುಮಾರನ್ ಹೇಗೆ ಬದಲಾಯಿಸುತ್ತಾರೆ ಅನ್ನೋದು ಕುತೂಹಲದ ವಿಷಯವಾಗಿತ್ತು. ಅದರಲ್ಲಿ ನಿರ್ದೇಶಕ ಕುಮಾರನ್ ಗೆದ್ದಿದ್ದಾರೆ.
ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಈ ರೀತಿಯ ಕಥೆ ಹೊಸದು. ದ್ವಿಪಾತ್ರಗಳ ಚಿತ್ರಗಳು ಸಾಕಷ್ಟು ಬಂದಿವೆಯಾದರೂ, ಇದುವರೆಗೆ ಯಾರೂ ಸಯಾಮಿ ಅವಳಿಗಳ ಪಾತ್ರಗಳತ್ತ ಗಮನ ಕೊಟ್ಟಿರಲಿಲ್ಲ. ಅದನ್ನು ಆರಂಭಿಸಿದ ಕೀರ್ತಿ 'ದ್ವಾರಕೀಶ್ ಚಿತ್ರ'ಕ್ಕೆ ಸಲ್ಲಬೇಕು. ಆ ಕೀರ್ತಿಯ ಕಿರೀಟವನ್ನು ಸಮರ್ಥವಾಗಿ ನಿಭಾಯಿಸಿದ ಹೆಮ್ಮೆ ಪ್ರಿಯಾಮಣಿಯವರದ್ದು.
SUJENDRA
ಚಾರು ಮತ್ತು ಲತಾ ಸಯಾಮಿ ಅವಳಿಗಳು. ಅವರಿಬ್ಬರ ದೇಹ ಮಾತ್ರವಲ್ಲ, ಆತ್ಮಗಳೂ ಒಂದೇ ಆಗಿರುತ್ತವೆ. ಆದರೆ ಅವರ ಸಂಗೀತದ ಮೋಹ ಎಲ್ಲವನ್ನೂ ಬದಲಿಸುತ್ತದೆ. ಕಾರಣ, ಅಲ್ಲಿ ಪರಿಚಯವಾಗುವ ರವಿಯ (ಸ್ಕಂದ) ಪ್ರೀತಿ. ಆ ಪ್ರೀತಿ ಸಿಗುವುದು ಒಬ್ಬಳಿಗೆ ಮಾತ್ರ. ಆದರೆ ಇಬ್ಬರೂ ಅವನನ್ನು ಪ್ರೀತಿಸುತ್ತಾರೆ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿದ್ದ ಚಾರು-ಲತಾ ಬದಲಾಗುತ್ತಾರೆ. ಇಬ್ಬರೂ ಪ್ರೀತಿಸಲು ಹೋಗಿ ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ. ದಿನೇದಿನೇ ಅಸಹನೆ ಜಾಸ್ತಿಯಾಗುತ್ತದೆ.
ಕೊನೆಗದು ತಲುಪುವುದು ಚಾರು-ಲತಾ ಬೇರ್ಪಡುವ ಆಪರೇಷನ್. ಅದು ಅಷ್ಟಕ್ಕೇ ಸೀಮಿತವಾಗುವುದಿಲ್ಲ, ಚಾರು-ಲತಾರಲ್ಲಿ ಲತಾ ಸಾಯುತ್ತಾಳೆ. ಉಳಿಯುವವಳು ಚಾರು ಎಂದೇ ಪ್ರಿಯಕರ ರವಿ ಅಂದುಕೊಂಡಿರುತ್ತಾನೆ. ಆದರೆ ಅದೇ ನಿಜವಲ್ಲ. ರವಿ ಪ್ರೀತಿಸುತ್ತಿದ್ದ ಚಾರು ನಿಜಕ್ಕೂ ಬದುಕಿರುವುದಿಲ್ಲ. ಬದುಕಿರುವುದು ಲತಾ. ಆದರೆ ಲತಾ ತಾನೇ ಚಾರು ಎಂಬಂತೆ ಸೋಗು ಹಾಕಿರುತ್ತಾಳೆ. ವಾಸ್ತವದಲ್ಲಿ ಚಾರುವನ್ನು ಲತಾಳೇ ಕೊಂದಿರುತ್ತಾಳೆ. ಬಂಡವಾಳ ಬಯಲಾಗುತ್ತಿದ್ದಂತೆ ರವಿಯನ್ನೂ ಕೊಲ್ಲಲು ಮುಂದಾಗುತ್ತಾಳೆ ಲತಾ.
ಮೊದಲಾರ್ಧ ಕೂಲಾಗಿ ಸಾಗುವ 'ಚಾರುಲತಾ' ಪವರ್‌ಫುಲ್ ಎನಿಸೋದು ದ್ವಿತೀಯಾರ್ಧದಲ್ಲಿ. ಇಲ್ಲಿ ಸಿಗುವ ಥ್ರಿಲ್, ಸಸ್ಪೆನ್ಸ್ ಪ್ರೇಕ್ಷಕರಿಗೆ ಹೊಸ ಅನುಭವ. ಆದರೂ ಇನ್ನಷ್ಟು ಥ್ರಿಲ್ಲಿಂಗ್ ಸನ್ನಿವೇಶಗಳು ಬೇಕಿತ್ತು. ಅದನ್ನು ಕಟ್ಟಿಕೊಡುವಲ್ಲಿ, ಇಡೀ ಚಿತ್ರವನ್ನು ಪ್ರೇಕ್ಷಕರು ಕುತೂಹಲದಿಂದಲೇ ನೋಡುವಂತೆ ಮಾಡುವಲ್ಲಿ ನಿರ್ದೇಶಕರ ಯತ್ನ ಫಲ ಕೊಟ್ಟಿಲ್ಲ.
SUJENDRA
ಸಯಾಮಿ ಅವಳಿಗಳನ್ನು ತೆರೆಯ ಮೇಲೆ ತೋರಿಸುವ ಸವಾಲನ್ನು ನಿರ್ದೇಶಕರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪನೀರ್ ಸೆಲ್ವಂ ಅವರ ಕ್ಯಾಮರಾ ಕೆಲಸ ಇಲ್ಲಷ್ಟೇ ಗೆದ್ದಿರುವುದಲ್ಲ, ಕತ್ತಲು-ಬೆಳಕಿನ ಆಟದಲ್ಲೂ ಸೆಲ್ವಂ ಚಾಕಚಕ್ಯತೆ ಗಮನ ಸೆಳೆಯುತ್ತದೆ. ಸುಂದರ್ ಸಿ ಬಾಬು ಸಂಗೀತವೂ ಪೂರಕವೆನಿಸುತ್ತದೆ.
ಇನ್ನು ಪ್ರಿಯಾಮಣಿ ಬಗ್ಗೆ ಒಂದೇ ಸಾಲಿನಲ್ಲಿ ಏನನ್ನೂ ಹೇಳಿ ಮುಗಿಸುವುದು ಕಷ್ಟ. ಮಸಾಲೆ ಚಿತ್ರಗಳಲ್ಲೇ ಮುಳುಗಿ ಹೋಗಿದ್ದವರಿಗೆ, ಪ್ರಮುಖ ವಾಹಿನಿಯಿಂದ ಕಳೆದು ಹೋಗಿದ್ದವರಿಗೆ ಈ ಚಿತ್ರ ಟಾನಿಕ್. ತನಗೆ ರಾಷ್ಟ್ರಪ್ರಶಸ್ತಿ ಬಂದಿತ್ತು ಎಂಬುದನ್ನು ಸಮರ್ಥನೆ ಮಾಡಿಕೊಳ್ಳುವ ನಟನೆ ಅವರಿಂದ ಬಂದಿದೆ. ಇಡೀ ಚಿತ್ರ ಅವರ ಹೆಗಲ ಮೇಲೆಯೇ ಸಾಗುತ್ತದೆ.
ಪ್ರಿಯಕರನಾಗಿ ಕಾಣಿಸಿಕೊಂಡಿರುವ ಸ್ಕಂದನನ್ನು ಪ್ರಿಯಾಮಣಿ ನುಂಗಿ ನೀರು ಕುಡಿದಿದ್ದಾರೆ. ಉಳಿದಂತೆ ಸರಣ್ಯ ಪೊನ್ವಾನ್, ಸೀತಾ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ರವಿಶಂಕರ್ ಯಾಕೆ ಒಪ್ಪಿಕೊಂಡರು ಅಥವಾ ಅವರನ್ನು ಯಾಕೆ ಆ ರೀತಿ ಬಳಸಿಕೊಂಡರು ಎಂಬ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ.
ಅಂತೂ ಕೊಟ್ಟ ಕಾಸಿಗೆ ಖಂಡಿತಾ ಮೋಸವಿಲ್ಲ. ತುಂಬಾ ಚೆನ್ನಾಗಿದೆ ಎಂದು ಎಲ್ಲರೂ ಚಪ್ಪಾಳೆ ತಟ್ಟುವಂತಿರದೇ ಇದ್ದರೂ, ಭಿನ್ನ ಅನುಭವ ಕಟ್ಟಿಟ್ಟ ಬುತ್ತಿ.