ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಹಾಗೇ, ನಿರೀಕ್ಷೆಗಳು ಬೆಟ್ಟದಷ್ಟಿರುತ್ತವೆ. ಅದಕ್ಕೆ ತಕ್ಕ ಅಭಿಮಾನಿಗಳು, ಮೊದಲ ಶೋದಲ್ಲೇ ಚಿತ್ರ ನೋಡಬೇಕೆಂದು ದಿನಗಟ್ಟಲೆ ಕಾಯಲೂ ಹಿಂದೇಟು ಹಾಕದವರು. ಆದರೆ 'ಚಿಂಗಾರಿ'ಯಲ್ಲಿ ದರ್ಶನ್ ಯಾರಿಗೂ ನಿರಾಸೆ ಮಾಡಿಲ್ಲ. 'ಸಾರಥಿ'ಯಷ್ಟು ಎತ್ತರಕ್ಕೇರದಿದ್ದರೂ, ತೀರಾ ಕಳಪೆ ಚಿತ್ರವೇನೂ ಇದಲ್ಲ.
'ಚಿಂಗಾರಿ'ಯ ಒಟ್ಟು ಕಥೆ ತಿರುಗುವುದು ಮಾನವ ಕಳ್ಳ ಸಾಗಣೆಯ ಸುತ್ತ. ಅಮಾಯಕ ಹೆಣ್ಣು ಮಕ್ಕಳು ಹೇಗೆ ಬಲಿಪಶುಗಳಾಗುತ್ತಾರೆ ಅನ್ನೋದನ್ನು ತೋರಿಸುತ್ತಾ, ರಕ್ಷಿಸುವ ಥ್ರಿಲ್ಲಿಂಗ್ ಅನುಭವವನ್ನು ಪ್ರೇಕ್ಷಕರಿಗೆ ಬಡಿಸುತ್ತಾರೆ ನಿರ್ದೇಶಕ ಹರ್ಷ. ಅದಕ್ಕಾಗಿ ವಿದೇಶವನ್ನು ಬಳಸಿಕೊಳ್ಳುವ ಅನಿವಾರ್ಯತೆ ಏನಿತ್ತು ಅನ್ನೋ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು.
ಪರಶುರಾಮ್ (ದರ್ಶನ್) ಸಿಸಿಬಿಯ ದಕ್ಷ ಪೊಲೀಸ್ ಅಧಿಕಾರಿ. ಗಿಟಾರ್ ನುಡಿಸುವಾಕೆ ಗೀತಾ (ದೀಪಿಕಾ ಕಾಮಯ್ಯ). ಆಕೆಯ ಸಂಗೀತಕ್ಕೆ ಮಾರು ಹೋಗಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಆದರೆ ಗೀತಾಳಿಗೆ ಪರಶುರಾಮ್ ಪೊಲೀಸ್ ಅನ್ನೋದು ಗೊತ್ತಿರುವುದಿಲ್ಲ. ಈ ನಡುವೆ ಅಡ್ಡದಾರಿ ಹಿಡಿದಿದ್ದ ಗೀತಾಳ ಸಹೋದರ ಸಾಯುತ್ತಾನೆ. ಪರಶುರಾಮ್ ಪೊಲೀಸ್ ಅನ್ನೋದು ಗೊತ್ತಾಗುತ್ತದೆ. ಸಹೋದರನನ್ನು ಕೊಂದಿರೋದು ಆತನೇ ಎಂದು ಬಲವಾಗಿ ನಂಬುತ್ತಾಳೆ.
ಹೀಗಿದ್ದವಳು ಗೆಳತಿಯ ಜತೆ ಸ್ವಿಜರ್ಲೆಂಡಿಗೆ ಹೋಗುತ್ತಾಳೆ. ಅಲ್ಲಿ ಅವರಿಬ್ಬರನ್ನು ಕುಖ್ಯಾತ ಗ್ಯಾಂಗ್‌ವೊಂದು ಅಪಹರಿಸುತ್ತದೆ. ಇದು ತಿಳಿಯುತ್ತಿದ್ದಂತೆ ಅಲ್ಲಿಗೆ ಹೋಗುವ ಪರಶುರಾಮ್‌ಗೆ ಪರ್ಸನಲ್ ಸೆಕ್ರೆಟೆರಿಯಾಗಿ ಭಾವನಾ ಸಿಗುತ್ತಾರೆ. ಆ ಗ್ಯಾಂಗಿನಿಂದ ತನ್ನ ಪ್ರಿಯತಮೆಯನ್ನು ಪರಶುರಾಮ ಹೇಗೆ ಬಿಡಿಸುತ್ತಾನೆ ಅನ್ನೋದು ಉಳಿದ ಕಥೆ.
ಕಥೆಯಲ್ಲೇನೂ ತೀರಾ ಹೊಸತನವಿಲ್ಲ. ಆದರೆ ಒಂದಿಷ್ಟು ತಿರುವುಗಳಿವೆ. ಹಾಲಿವುಡ್ ಚಿತ್ರವೊಂದರಿಂದ ಸ್ಫೂರ್ತಿ ಪಡೆದಿರುವ ನಿರ್ದೇಶಕರು, ಅದೇ ಕಾರಣಕ್ಕೆ ವಿದೇಶವನ್ನು ಚಿತ್ರದಲ್ಲಿ ತುರುಕಿದ್ದಾರೆ. ಸ್ವಿಜರ್ಲೆಂಡಿನಲ್ಲೂ ಕರ್ನಾಟಕದ ಪೊಲೀಸ್ ಸಾಹಸ ಮಾಡೋದು, ಕೊಲ್ಲೋದು ಹರ್ಷ ಜ್ಞಾನದ ಕೊರತೆ. ಡಾನ್‌ಗಳು ಕನ್ನಡ ಮಾತನಾಡುವುದು ಇನ್ನೊಂದು ಸೇರ್ಪಡೆ.
ದರ್ಶನ್ ಇಲ್ಲದ ಚಿತ್ರ ಇದಾಗಿರುತ್ತಿದ್ದರೆ, ಚಿತ್ರಮಂದಿರದತ್ತ ಸುಳಿಯುವ ಅಗತ್ಯವೇ ಇರಲಿಲ್ಲ. ಅಷ್ಟೊಂದು ಅನಿವಾರ್ಯರೆಂಬಂತೆ ಕಾಣುತ್ತಾರೆ ದರ್ಶನ್. ಅವರ ಅಭಿಮಾನಿಗಳಿಗೆ ಇದು ಹೇಳಿ ಮಾಡಿಸಿದ ಸಿನಿಮಾ. ತಾಯ್ನಾಡು, ಭಾಷೆಯ ಬಗ್ಗೆ ದರ್ಶನ್ ಭಾಷಣ ಮಾಡಿದಾಗಲೆಲ್ಲ ಥಿಯೇಟರು ತುಂಬಾ ಶಿಳ್ಳೆ-ಚಪ್ಪಾಳೆ. ಆದರೂ ಗಂಭೀರ ವಿಷಯವೊಂದರ ನಡುವೆ ಚರ್ಮ ಪ್ರದರ್ಶನ, ಅತ್ಯಾಚಾರ ಮಾಡುವಂತೆ ಆಹ್ವಾನಿಸುವ ಜೋಕು ಖಂಡಿತಕ್ಕೂ ಕೀಳಭಿರುಚಿ.
ಭರತನಾಟ್ಯ ಮತ್ತು ಸದಭಿರುಚಿಯ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಭಾವನಾ ಇಲ್ಲಿ ಆಘಾತ ನೀಡುವಷ್ಟು ಮದನಿಕೆಯಾಗಿದ್ದಾರೆ. ಬಿಕಿನಿಯಲ್ಲಿ ಇಟಲಿ ಹುಡುಗಿಯಂತೆ ಕಣ್ಣಿಗೆ ರಾಚುತ್ತಾರೆ. ಹೊಸ ಹುಡುಗಿ ದೀಪಿಕಾ ಕಾಮಯ್ಯ ಎಲ್ಲೂ ಕಡಿಮೆಯೆನಿಸಿಲ್ಲ.
ದರ್ಶನ್ ನಂತರ ಚಿತ್ರದಲ್ಲಿರುವ ಇನ್ನೊಬ್ಬ ನಾಯಕ ಎಚ್.ಸಿ. ವೇಣು. ಅವರದ್ದು ಅದ್ಭುತ ಛಾಯಾಗ್ರಹಣ. ಇಡೀ ಸ್ವಿಜರ್ಲೆಂಡನ್ನು ಕ್ಯಾಮರಾದೊಳಗೆ ಮಡಚಿ ಇಟ್ಟಿದ್ದಾರೇನೋ ಎಂಬಂತೆ ಚಿತ್ರೀಕರಿಸಿದ್ದಾರೆ. ನಿರ್ಮಾಪಕರು ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ ಅನ್ನೋದು ಅರಿವಿಗೆ ಬರುವುದು ಕೂಡ ಇಲ್ಲಿಯೇ.
ಒಟ್ಟಾರೆ ಇಡೀ ಚಿತ್ರ ಸ್ಟೈಲಿಷ್ ಆಗಿದೆ ಅನ್ನೋ ಮಾತನ್ನು ಚಿತ್ರತಂಡ ಉಳಿಸಿಕೊಂಡಿದೆ. ಋಷಿ ಮೂಲ ಯಾವುದೇ ಆಗಿರಲಿ, ಹರ್ಷ ತನ್ನ ಮೂರನೇ ಚಿತ್ರದಲ್ಲಿ ಮಿಂಚಿದ್ದಾರೆ. ಬಿಗಿಯಾದ ಚಿತ್ರಕತೆ, ಚಕಚಕನೆ ಬದಲಾಗುವ ದೃಶ್ಯಗಳು, ದರ್ಶನ್ ವಾಕು-ಟಾಕು-ಫೈಟು, ಮನೋಹರ ದೃಶ್ಯಗಳು -- ಇನ್ನೇನು ಬೇಕು? ಒಮ್ಮೆ ಚಿತ್ರಮಂದಿರದತ್ತ ಹೋಗಿ ಬನ್ನಿ.