ಚಿತ್ರ ವಿಮರ್ಶೆ: ಮನದಲ್ಲೇ ನೆಲೆಸುತ್ತದೆ 'ಸಂಜು ವೆಡ್ಸ್ ಗೀತಾ'

PR
PR
ಒಂದು ಅಮರ ಕಾವ್ಯದ ಮುಂದುವರಿಕೆಯ ಭಾಗ ಎಂದು ಹೇಳಿಕೊಂಡಿದ್ದು ಸುಳ್ಳಾಗಿದೆ. ಏಕೆಂದರೆ ಅಮರ ಕಾವ್ಯವನ್ನೇ ಹಿಂದಿಕ್ಕುತ್ತದೆ 'ಸಂಜು ವೆಡ್ಸ್ ಗೀತಾ'. ಯುವ ಪ್ರೇಮಿಗಳಿಗೆ ಮುದನೀಡುವಂತಾ ಸುಂದರ, ಸಂಗೀತಮಯ ಪ್ರೇಮ ಕಥೆಯನ್ನು ಹಣೆದಿದ್ದಾರೆ ನಿರ್ದೇಶಕ ನಾಗಶೇಖರ್.

ಒಬ್ಬ ಭಾವನಾತ್ಮಕ ಜೀವಿ ಪ್ರೀತಿಸಿದ ಹೃದಯಕ್ಕಾಗಿ ಏನೆಲ್ಲಾ ಮಾಡಲು ಸಿದ್ಧನಿರುತ್ತಾನೆ ಎಂಬುದನ್ನು ಸಾಯಂಕಾಲ ಐದು ಗಂಟೆಗೆ ಪ್ರಾರಂಭಿಸಿ ಬೆಳಗಿನ ಜಾವ ಐದು ಗಂಟೆಗೆ ಸಿನಿಮಾ ಮುಗಿಯುವಂತೆ ಚಿತ್ರಸಿದ್ದಾರೆ.

ಈ ಸಮಯಗಳ ಮಧ್ಯೆ ಸಂಭವಿಸುವ ಘಟನೆಗಳೇ ಚಿತ್ರದ ಕಥಾ ಹಂದರ. ಇಡೀ ಚಿತ್ರ ಸುರಿಯುವ ಮಳೆಯಲ್ಲೇ ನಿರೂಪಿತವಾಗಿರುವುದು ವಿಶೇಷಗಳಲ್ಲೊಂದು.

ಚಿತ್ರವನ್ನು ಕೊಡಗು, ಮೈಸೂರು ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂದಿನ ಕಾಲದ ಸೆಂಟ್ರಲ್ ಜೈಲ್ ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಊಟಿಯಲ್ಲಿನ ಮೂರು ವಿಶೇಷ ಸೆಟ್‌ಗಳಲ್ಲೂ ಶೂಟಿಂಗ್ ನಡೆಸಲಾಗಿದೆ.

ಕಿಟ್ಟಿ ಮತ್ತು ರಮ್ಯ ಅವರ ಅಧ್ಬುತ ನಟನೆ ಚಿತ್ರಕ್ಕೆ ವಿಶೇಷ ಕಳೆ ಮೂಡಿಸಿದೆ. 'ಸಂಜು ಮತ್ತು ಗೀತ', 'ಗಗನವೇ ಬಾಗಿ' ಗೀತೆಗಳು ಕೇಳುಗರ ಮನದಲ್ಲಿ ಉಳಿಯುತ್ತದೆ. ಈಗಾಗಲೇ ಜನಪ್ರಿಯವಾಗಿರುವ ಈ ಚಿತ್ರದ ಗೀತೆಗಳನ್ನು ಕವಿರಾಜ್ ಮತ್ತು ನಾಗೇಂದ್ರ ಪ್ರಸಾದ್ ಬರೆದಿದ್ದು ಅವುಗಳಿಗೆ ಜೆಸ್ಸಿ ಗಿಫ್ಟ್ ರಾಗ ಸಂಯೋಜಿಸಿದ್ದಾರೆ. ಅದಕ್ಕೆ ಸರಿಸಾಟಿಯಾಗಿ ಸತ್ಯ ಹೆಗ್ಗಡೆ ಕೂಡ ಕ್ಯಾಮೆರಾ ಕರಾಮತ್ತು ತೋರಿಸಿದ್ದಾರೆ. ಅದ್ಬುತ ನಟನೆಯಿಂದ ಸುಹಾಸಿನಿ ಮನದಲ್ಲಿ ಉಳಿಯುತ್ತಾರೆ.

ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ, ಶರಣ್ ಮುಂತಾದವರು ತಾರಾಗಣದಲ್ಲಿದ್ದಾರೆ. ಇಸ್ಮಾಯಿಲ್, ಕನಕರಾಜು ಮತ್ತು ಆನಂದ್ ಅವರ ಕಲಾ ನಿರ್ದೇಶನ, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ, ರವಿ ವರ್ಮ ಅವರ ಸಾಹಸ, ಎಫೆಕ್ಟ್ ರಾಜನ್ ಅವರ ಸ್ಪೆಶಲ್ ಎಫೆಕ್ಟ್ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಇನ್ನಷ್ಟು ಅಂದಗಾಣಿಸಿದೆ.

ಏಪ್ರಿಲ್ ಒಂದು ಮೂರ್ಖರ ದಿನದಂದು ಚಿತ್ರ ಬಿಡುಗಡೆಯಾದರೂ ಒಬ್ಬನೇ ಒಬ್ಬ ಪ್ರೇಕ್ಷಕನನ್ನೂ ಮೂರ್ಖನನ್ನಾಗಿಸುವುದಿಲ್ಲ. ಚಿತ್ರಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿ.ಆರ್.ಪಿ. ಲಾಂಛನದ 'ಸಂಜು ವೆಡ್ಸ್ ಗೀತಾ' ಚಿತ್ರ ಹೆಸರಾಂತ ನಟ-ನಿರ್ದೇಶಕ ದಿವಂಗತ ಶಂಕರನಾಗ್ ಅವರಿಗೆ ಅರ್ಪಣೆ ಎಂದಿರುವ ನಾಗಶೇಖರ್ ಈ ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ