'ಚೆಲುವಿನ ಚಿಲಿಪಿಲಿ': ಎಸ್.ನಾರಾಯಣ್ ಮತ್ತೆ ಎಡವಿದರೇ?

MOKSHA
ಚಿತ್ರ: ಚೆಲುವಿನ ಚಿಲಿಪಿಲಿ
ನಿರ್ದೇಶನ: ಎಸ್. ನಾರಾಯಣ್
ತಾರಾಗಣ: ಪಂಕಜ್, ರೂಪಿಕಾ, ಅನಂತನಾಗ್, ಸುಮಲತಾ

ಯಥಾಪ್ರಕಾರ, ಇದು ಕಾಲೇಜ್ ಲವ್ ಸ್ಟೋರಿ. ಕಾಲೇಜಿಗೆ ಸೇರುವ ನಾಯಕನಿಗೆ ನಾಯಕಿಯ ಪರಿಚಯವಾಗಿ ಊಹೆಯಂತೆಯೇ ಪ್ರೀತಿ ಬೆಳೆಯುತ್ತದೆ. ಪ್ರೀತಿ ವಿಷಯ ತಿಳಿದ ನಾಯಕಿಯ ತಂದೆ ಮಗಳನ್ನು ಕಾಲೇಜಿನಿಂದ ಬಿಡಿಸಿ ಮನೆಗೆ ಕರೆ ತರುತ್ತಾನೆ. ಕೊನೆಗೆ ನಾಯಕನ ಆಕೆ ದಕ್ಕುತ್ತಾಳೆ ಎಂದು ತಿಳಿಯಬೇಕಾದರೆ ಚೆಲುವಿನ ಚಿಲಿಪಿಲಿಯನ್ನು ಪಿಳಿಪಿಳಿ ಕಣ್ಬಿಟ್ಟು ನೋಡಬೇಕು.

ಇದು ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಮಗ ಪಂಕಜ್‌ಗೆ ನೀಡಿದ ಅಪ್ಪನ ಎರಡನೇ ಉಡುಗೊರೆ. ಬಹಳ ವರ್ಷಗಳ ಹಿಂದೆ ತೆಲುಗಿನ ಸೂಪರ್ ಹಿಟ್ ಚಿತ್ರ ಕೊತ್ತ ಬಂಗಾರಲೋಕಂವನ್ನು ಬಟ್ಟಿ ಇಳಿಸಿದ್ದಾರೆ ನಿರ್ದೇಶಕರು. ಪ್ರೀತಿಗಾಗಿ ಅಪ್ಪ-ಅಮ್ಮನ್ನನ್ನು ಬಿಟ್ಟು ಹೋಗಬಾರದೆಂಬ ಸಂದೇಶವಿದೆ. ಹೊಸ ಪ್ರೀತಿಯ ಲವಲವಿಕೆ ದೃಶ್ಯಗಳಿವೆ. ಆದರೆ ಸಾಮಾನ್ಯ ಕತೆಯನ್ನು ಪಂಕಜ್ ಮತ್ತು ರೂಪಿಕಾ ನೋಡಿಸಿಕೊಂಡು ಹೋಗುವಂತೆ ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಮೊದಲ ಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಿದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ರೂಪಿಕಾ. ಟೆನ್ಶನ್ ಆದಾಗ ಆ ಹುಡುಗಿ ಪಡುವ ಪಡಿಪಾಟಲು ಇಷ್ಟವಾಗುತ್ತದೆ. ಈ ಮೂಲಕ ಅಭಿನಯದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಪಂಕಜ್ ಅಭಿನಯದ ಬಗ್ಗೆ ಹೇಳುವುದಾದರೆ, ಈತ ಇನ್ನು ಪಳಗಬೇಕು. ಹೇರ್‌ಸ್ಟೈಲ್, ಡ್ರೆಸ್ಸಿಂಗ್ ಸ್ಟೈಲ್ ಅವರಿಗೆ ಸರಿ ಹೊಂದಿಲ್ಲ. ಕಳೆದ ಬಾರಿಗಿಂತ ಅಭಿನಯ ಇದರಲ್ಲಿ ಖುಷಿ ಕೊಡುತ್ತದೆ. ಇನ್ನು ನಾಯಕನ ತಂದೆಯಾಗಿ ಅಭಿನಯಿಸಿದ ಅನಂತನಾಗ್ ಪಾತ್ರವಂತೂ ಕಣ್ಣಲ್ಲಿ ನೀರು ಜಿನುಗಿಸುತ್ತದೆ. ಇವರಿಗೆ ಸಾಥ್ ನೀಡಿದ್ದು ಸುಮಲತಾ. ಇವರಿಬ್ಬರು ಚಿತ್ರಕ್ಕೆ ತೂಕ ನೀಡಿದ್ದಾರೆ.

ತಾಂತ್ರಿಕವಾಗಿ ಚಿತ್ರ ಸ್ವಲ್ಪ ದುರ್ಬಲವಾಗಿದೆ. ಚಿತ್ರದ ಬಹುತೇಕ ದೃಶ್ಯಗಳಲ್ಲಿ ಕ್ಯಾಮೆರಾ ನಿಶ್ಯಕ್ತವಾಗಿ ಮಲಗಿದಂತೆ ಕಾಣುತ್ತದೆ. ಒಂದು ಹಾಡು ಮಾತ್ರ ಪದೇ ಪದೇ ನೆನಪಿಗೆ ಬರುತ್ತದೆ. ಅಂತಿಮ ಕ್ಷಣಗಳಲ್ಲಿ ಚಿತ್ರ ದಿಢೀರ್ ವೇಗ ಪಡೆದುಕೊಂಡು ನೋಡುವಂತೆ ಮಾಡುತ್ತದೆ. ಚಿತ್ರವನ್ನು ನಿರ್ದೇಶಕ ಬಹಳ ಬೇಗ ಮುಗಿಸಿದಂತೆ ಭಾಸವಾಗುತ್ತದೆ.

ವೆಬ್ದುನಿಯಾವನ್ನು ಓದಿ