ಜರಾಸಂಧ ವಿಮರ್ಶೆ; ಹೊಸತನ ಮಣ್ಣಾಂಗಟ್ಟಿ ಏನೂ ಇಲ್ಲ

ಚಿತ್ರ: ಜರಾಸಂಧ
ತಾರಾಗಣ: ವಿಜಯ್, ಪ್ರಣೀತಾ, ರಂಗಾಯಣ ರಘು, ದೇವರಾಜ್
ನಿರ್ದೇಶನ: ಶಶಾಂಕ್
ಸಂಗೀತ: ಅರ್ಜುನ್ ಜನ್ಯಾ
SUJENDRA

ಒಂದೇ ಮಾತಲ್ಲಿ ಹೇಳುವುದಾದರೆ, ಶಶಾಂಕ್‌ಗೆ ಆಕ್ಷನ್ ಸಿನಿಮಾ ಒಗ್ಗಿಲ್ಲ. ಅದು ಕಥೆ, ಚಿತ್ರಕಥೆ, ಸಂಭಾಷಣೆಯಿಂದ ಹಿಡಿದು ಪ್ರತಿಹಂತದಲ್ಲೂ ಎದ್ದು ಕಾಣುತ್ತದೆ. ಸಿಕ್ಸರ್, ಮೊಗ್ಗಿನ ಮನಸು ಮತ್ತು ಕೃಷ್ಣನ್ ಲವ್ ಸ್ಟೋರಿಗಳ ಕನ್ನಡದ ಪ್ರತಿಭಾವಂತ ಹ್ಯಾಟ್ರಿಕ್ ನಿರ್ದೇಶಕ ಎಲ್ಲೋ ಕಳೆದು ಹೋಗಿದ್ದಾರೆ. ನಾಯಕ ವಿಜಯ್ ಪ್ಯಾಕುಗಳು ವೇಸ್ಟಾಗಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಯಾರೂ ಹುಟ್ಟಿನಿಂದ ಕ್ರಿಮಿನಲ್‌ಗಳಲ್ಲ, ನಮ್ಮ ವ್ಯವಸ್ಥೆಯಿಂದಾಗಿ ಹಾಗಾಗುತ್ತಾರೆ ಎಂಬುದು ಮನೆಮಾತು. ಆದರೆ ಶಶಾಂಕ್ ಹೊಸ ಸಿದ್ಧಾಂತವನ್ನು ಪ್ರೇಕ್ಷಕರ ಕಿವಿಗೆ ತುಂಬುತ್ತಾರೆ. ಕ್ರಿಮಿನಲ್‌ಗಳ ಹುಟ್ಟು ಸಮಾಜದಿಂದ ಆಗುವುದಿಲ್ಲ, ಕ್ರಿಮಿನಲ್ ಹುಟ್ಟುತ್ತಲೇ ಕ್ರಿಮಿನಲ್ ಆಗಿರುತ್ತಾನೆ ಎಂದು ಪ್ರತಿಪಾದಿಸುತ್ತಾರೆ!

ಆರಂಭದಿಂದಲೂ ಹೊಸತನದ ಚಿತ್ರ ಎಂದು ಶಶಾಂಕ್ ಪ್ರಚಾರ ಮಾಡಿದ್ದರು. ಆದರೆ ಎಲ್ಲಾ ಹೊಡೆಬಡಿ ಚಿತ್ರಗಳಲ್ಲಿರುವಂತೆ ಇಲ್ಲೂ ಅದೇ ರಾಗ, ಅದೇ ಹಾಡು. ಮುಂದೇನಾಗುತ್ತದೆ ಎಂದು ಪ್ರತಿಬಾರಿಯೂ ಊಹಿಸುವಷ್ಟು ಕೆಟ್ಟ ಕತೆಯನ್ನು ಶಶಾಂಕ್ ಹೇಗೆ ಬರೆದಿದ್ದಾರೆ ಅನ್ನುವುದನ್ನು ಯೋಚಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ತಾಯಿ ಮತ್ತು ಪ್ರಿಯತಮೆಗೆ ಮೋಸ ಮಾಡುವುದೇ ದೊಡ್ಡ ತಿರುವು ಅಂತ ತಿಳಿದುಕೊಂಡ ಹಾಗಿದೆ.

ಸಂಬಂಧವೇ ಇಲ್ಲದ ದೃಶ್ಯಗಳು, ಅನಗತ್ಯ ಎನಿಸುವ ಹಾಡುಗಳಂತೂ ಪ್ರೇಕ್ಷಕರನ್ನು ಬಿಡದೆ ಕಾಡುತ್ತವೆ. ನಾಯಕ ವಿಜಯ್ ಅವರಾದರೂ ಮನರಂಜನೆ ಒದಗಿಸುತ್ತಾರೆ ಎಂದು ನಿರೀಕ್ಷೆಯಿಟ್ಟರೆ, ಅದೂ ಸುಳ್ಳಾಗುತ್ತಾ ಹೋಗುತ್ತದೆ. ಇಷ್ಟು ಚಿತ್ರಗಳಲ್ಲಿ ನೋಡಿದ ಕಸುವೇ ಇಲ್ಲಿ ಪುನರಾವರ್ತನೆಯಾಗುತ್ತದೆ.

ನಾಯಕಿ ಪ್ರಣೀತಾ ಐಟಂ ಹುಡುಗಿಯಂತೆ ಹರಿದಾಡಿದರೂ ಪ್ರೇಕ್ಷಕರ ಕಣ್ಣುಗಳಿಗೆ ಹಬ್ಬವಾಗುವುದಿಲ್ಲ. ನಟನೆಯಲ್ಲಂತೂ ಅವರಿನ್ನೂ ಕೊನೆಯ ಸಾಲಿನ ಹುಡುಗಿ. ರೂಪಾ ದೇವಿಯವರಿಂದಲೂ ನಿರಾಸೆ. ರಂಗಾಯಣ ರಘು ಅವರಿಗೆ ಮತ್ತದೇ ಓವರ್ ಆಕ್ಟಿಂಗ್ ಪಾತ್ರ. ಇದ್ದುದರಲ್ಲಿ ದೇವರಾಜ್ ಓಕೆ ಎನಿಸುತ್ತಾರೆ.

ಅರ್ಜುನ್ ಜನ್ಯಾ ಸಂಗೀತದ ಎರಡು ಹಾಡುಗಳು ಕೇಳಿಸುತ್ತವೆ, ಆದರೆ ನೋಡಿಸುವಷ್ಟು ಶ್ರೀಮಂತಿಕೆ ಬಿಂಬಿಸುವಲ್ಲಿ ಶಶಾಂಕ್ ಎಡವಿದ್ದಾರೆ. ರವಿವರ್ಮಾ ಮತ್ತು ಕೆ.ಡಿ. ವೆಂಕಟೇಶ್ ಸಾಹಸ ನಿರ್ದೇಶನದ ದೃಶ್ಯಗಳು, ವಿಜಯ್‌ರಂತಹ ಹೀರೋನನ್ನು ರೋಚಕತೆಯಿಂದ ನೋಡಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿಲ್ಲ.

ಕನ್ನಡದಲ್ಲಿ ನಿರ್ದೇಶಿಸಿದ ಮೂರು ಶ್ರೇಷ್ಠ ಚಿತ್ರಗಳ ಇತಿಹಾಸವನ್ನು ಮುಂದಿಟ್ಟುಕೊಂಡು ಶಶಾಂಕ್‌ರನ್ನು ಸ್ತುತಿಸಬಹುದೇ ಹೊರತು, ಜರಾಸಂಧನ ಕುರಿತಾಗಿ ಅಲ್ಲ. ಈ ಚಿತ್ರದ ಎರಡನೇ ಭಾಗ ಮಾಡುವ ಯೋಚನೆಯನ್ನು ಈಗಲೇ ನಿರ್ದೇಶಕರು ಮರೆತು ಬಿಡುವುದು ಒಳ್ಳೆಯದು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ