ತಾಜ ತಾಜ್‌ಮಹಲ್‌ನಲ್ಲಿ ಹಳಸಲೂ ಇದೆ

MOKSHA
ನಾಯಕ ಮೂರು ವರ್ಷದಿಂದ ನಾಯಕಿಯ ಹಿಂದೆ ಸುತ್ತುತ್ತಿರುತ್ತಾನೆ. ನೂರಾರು ಬಾರಿ ಹಾಯ್, ಗುಡ್ ಮಾರ್ನಿಂಗ್ ಹೇಳಿರುತ್ತಾನೆ. ಹೀಗಿದ್ದರೂ, ಒಮ್ಮೆ ನಾಯಕಿಯನ್ನು ಚಹಾಕ್ಕೆ ಕರೆದಾಗ, 'ಡೋಂಟ್ ಮೈಂಡ್ ನಿಮ್ಮ ಹೆಸರೇನು?' ಎಂದು ನಾಯಕಿ ಕೇಳಿದಾಗ ನಾಯಕನ ಪ್ರೀತಿಯ ಸುತ್ತಾಟ ಠುಸ್ ಎನ್ನುತ್ತದೆ.

ಹೀಗೆ ಕೆಲವು ವಿಶಿಷ್ಟ ದೃಶ್ಯಗಳ ಮೂಲಕ ತಾಜ್‌ಮಹಲ್ ಚಿತ್ರ ಒಮ್ಮೊಮ್ಮೆ ಮನಸಿಗೆ ಹತ್ತಿರವಾಗುತ್ತದೆ. ಹಾಗಾಂತ ಚಿತ್ರ ಕಡೆವರೆಗೂ ಮನಸಿಗೆ ಹತ್ತಿರವಾಗಿಯೇ ಇರುತ್ತದೆ ಎನ್ನುವಂತಿಲ್ಲ. ಕೆಲವೊಮ್ಮೆ ಖಾಲಿ ಖಾಲಿ ಸನ್ನಿವೇಶಗಳನ್ನು ಕೂಡ ನಿರ್ದೇಶಕ ಚಂದ್ರು ಸೃಷ್ಟಿಸಿದ್ದಾರೆ. ಚಿತ್ರದ ಮೊದಲಾರ್ಧ ಸಲೀಸಾಗಿ, ಚಿಂತನೆಗೆ ಹಚ್ಚುವಂತಹ ಕಥೆಯಿಲ್ಲದೇ ಸರಳವಾಗಿ ಸಾಗುತ್ತದೆ. ಇಲ್ಲೇನಿದ್ದರೂ ನಾಯಕಿಗಾಗಿ ನಾಯಕನ ಸುತ್ತಾಟ, ಆಕೆಯನ್ನು ಪಡೆಯಲು ಆತ ಪಡುವ ಪಾಡು ಇವೆಲ್ಲವೂ ಮೊದಲಾರ್ಧದಲ್ಲಿ ಬಂದು ಹೋಗುತ್ತವೆ.

ಚಿತ್ರದ ಎರಡನೇ ಭಾಗ ಸ್ವಲ್ಪ ಗಂಭೀರವಾಗಿದೆ. ಇಲ್ಲಿ ನಾಯಕ ಗೊಂದಲಕ್ಕೆ ಸಿಲುಕುತ್ತಾನೆ. ನಾಯಕನ ಮುಂದೆ ಕವಲು ದಾರಿಗಳಿರುತ್ತದೆ. ಒಂದು ತನ್ನ ಭವಿಷ್ಯ, ಇನ್ನೊಂದು ನಾಯಕಿ. ಸಹಜವೆಂಬಂತೆ ಯಾರ ಬುದ್ದಿವಾದವನ್ನು ಕೇಳದೇ ಕೊನೆಗೆ ನಾಯಕಿಯೇ ತನ್ನ ಭವಿಷ್ಯ ಎಂದು ತಿಳಿಯುತ್ತಾನೆ. ಅವಳಿಗಾಗಿ ಸುತ್ತಾಡುತ್ತಾನೆ, ಚಡಪಡಿಸುತ್ತಾನೆ. ಚಿತ್ರದ ದ್ವಿತೀಯಾರ್ಧದಲ್ಲಿ ನಾಯಕ ಪ್ರೀತಿ ಹಾಗೂ ಆತನ ಭವಿಷ್ಯದ ನಡುವೆ ಅನುಭವಿಸುವ ಹತಾಶೆ, ತೊಳಲಾಟಗಳನ್ನು ಚಂದ್ರು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ.

ತಾಜ್‌ಮಹಲ್ ಪ್ರೀತಿಯ ಸಂಕೇತ. ಅದರ ಹಿಂದೆ ಸುರುಳಿ ಕಟ್ಟಿದ ನೆನಪಿದೆ, ಮನದಲ್ಲಿ ಮಡುಗಟ್ಟಿದ ನೋವಿದೆ. ಈ ತಾಜ್‌ಮಹಲ್‌ನಲ್ಲೂ ಚಂದ್ರು ಅದನ್ನು ಪಾಲಿಸಲು ಪ್ರಯತ್ನಿಸಿದ್ದಾರೆ. ನಗು ನಗುತ್ತಲೇ ಸಾಗುತ್ತಿದ್ದ ಚಿತ್ರದ ಮಧ್ಯೆ ದು:ಖ ತಂದಿದ್ದಾರೆ. ನಾಯಕನ ಪ್ರೀತಿಯ ಅರಿವು ನಾಯಕಿಗೆ ಆಗುತ್ತಿದ್ದಂತೆ ನಾಯಕ ಹೆಣವಾಗಿ ಬಿದ್ದಿರುತ್ತಾನೆ.

ಚಿತ್ರದ ಕೆಲವು ಫ್ರೇಮ್‌ನಲ್ಲಿ ನಿರ್ದೇಶಕ ಚಂದ್ರುವಿನ ಅನನುಭವದ ಎದ್ದು ಕಾಣುತ್ತದೆ. ಅಜಯ್ ತನ್ನ ಹೊಸ ಗೆಟಪ್‌ನಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಜೊತೆಗೆ ಪೂಜಾ ಕೂಡಾ. ಉಳಿದಂತೆ ಅನಂತ್‌ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಸುರೇಶ್ ಮಂಗಳೂರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದ ಕ್ಯಾಮರಾ ಚಾಕಚಕ್ಯತೆ ಚೆನ್ನಾಗಿದೆ. ಚಿತ್ರದ ಒಂದೆರಡು ಹಾಡು ಮುದ ನೀಡುತ್ತದೆ.

ವೆಬ್ದುನಿಯಾವನ್ನು ಓದಿ