ನಕ್ಕು,ನಕ್ಕು 'ಮಸ್ತ್ ಮಜಾ ಮಾಡಿ'

ಸೋಮವಾರ, 5 ಜನವರಿ 2009 (20:45 IST)
ಹೆಸರಾಂತ ತಾರೆಗಳ ದಂಡೇ ಇರುವ ಅದ್ದೂರಿ ಬಜೆಟ್‌ನ ಮಸ್ತ್ ಮಜಾ ಮಾಡಿ ಚಿತ್ರ, ಸದಾ ಕೆಲಸದೊತ್ತಡದಿಂದ ಬೆಂಡಾಗಿರುವ ಮನಸುಗಳಿಗೆ ಒಂದಿಷ್ಟು ರಿಲ್ಯಾಕ್ಸ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ಮಟ್ಟಿಗೆ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಎಂದು ಹೇಳಿದಂತೆ ಅದನ್ನು ಮಾಡಿದ್ದಾರೆ. ಚಿತ್ರದಲ್ಲಿ ಕಥೆ ಇಲ್ಲದಿರಬಹುದು. ಆದರೆ ಹಾಸ್ಯಕ್ಕೇನೂ ಬರವಿಲ್ಲ. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವಷ್ಟು ಹಾಸ್ಯ ದೃಶ್ಯಗಳು ಚಿತ್ರದಲ್ಲಿವೆ.

ಚಿತ್ರದಲ್ಲಿ ಪ್ರತಿಯೊಬ್ಬರು ಸಹಜತೆಯಿಂದ ನಟಿಸಿದ್ದರಿಂದಾಗಿ ಲವ್ಲಿನೆಸ್ ಎದ್ದು ಕಾಣುತ್ತದೆ. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಆರಾಮವಾಗಿ ಚಿತ್ರ ನೋಡಲು ಅಡ್ಡಿಯಿಲ್ಲ. ಕೊಟ್ಟ ದುಡ್ಡಿಗೂ ಮೋಸವಿಲ್ಲ.
MOKSHENDRA
ನಿರ್ದೇಶಕರು ಹಿಂದಿಯ ಧಮಾಲ್ ಹಾಗೂ ಗೋಲ್‌‌ಮಾಲ್ ಚಿತ್ರದ ಕೆಲವು ದೃಶ್ಯಗಳನ್ನು ಯಥಾವತ್ತಾಗಿ ಭಟ್ಟಿ ಇಳಿಸಿದ್ದಾರೆ. ಆದರೆ ಅವರು ಇದನ್ನು ಒಪ್ಪಿಕೊಂಡಿರುವುದರಿಂದ ಅದರ ಬಗ್ಗೆ ಮಾತನಾಡುವ ಹಾಗಿಲ್ಲ. ಚಿತ್ರದುದ್ದಕ್ಕೂ ಹಾಸ್ಯವೇ ಪ್ರಧಾನವಾಗಿರುವುದರಿಂದ ಎಲ್ಲೂ ಬೇಜಾರಾಗಲ್ಲ. ಕನ್ನಡ ಚಿತ್ರರಂಗದಲ್ಲಿ ಸದ್ಯ ಬೇಡಿಕೆಯಲ್ಲಿರುವ ಬಹುತೇಕ ನಟರು ಇಲ್ಲಿ ಕಾಣಿಸಿಕೊಂಡು ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.

ನಾಲ್ವರು ಶುದ್ದ ಅಪ್ರಯೋಜಕರು ಹೂತಿಟ್ಟ ಹಣವೊಂದರ ಹಿಂದೆ ಬೀಳುವುದು ಚಿತ್ರದ ಕಥಾ ವಸ್ತು. ಹೊರದೇಶಗಳಲ್ಲಿ ಮಾಡಿರುವ ಹಾಡಿನ ಚಿತ್ರೀಕರಣ ಬಾಲಿವುಡ್ ಮಟ್ಟದಲ್ಲಿ ತುಂಬಾ ರಿಚ್ ಆಗಿ ಮೂಡಿ ಬಂದಿದೆ. ವಿಜಯ್ ರಾಘವೇಂದ್ರ, ಕೋಮಲ್, ದಿಗಂತ್, ನಾಗಕಿರಣ್ ಪ್ರತಿಯೊಬ್ಬರು ಸ್ಪರ್ಧೆಗೆ ಬಿದ್ದು ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಸುದೀಪ್ ಓಕೆ. ಹಾಡೊಂದರಲ್ಲಿ ಉಪೇಂದ್ರ ಕನ್ನಡದ ಕೆಲ ನಟಿಯರೊಂದಿಗೆ ಹೆಜ್ಜೆ ಹಾಕಿ ರಂಜಿಸಿದ್ದಾರೆ. ದಿಗಂತ್ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡ ರಂಗಾಯಣ ರಘು ಸ್ವಲ್ಪ ಹೆಚ್ಚಾಗಿಯೇ ಮಿಂಚಿದ್ದಾರೆ. ರಾಂ ನಾರಾಯಣ್ ಅವರ ಸಂಭಾಷಣೆ ಚೆನ್ನಾಗಿ ಮೂಡಿ ಬಂದಿದೆ. ಬಾಲಾಜಿ ಅವರ ಸಂಗೀತ ಹಾಗೂ ಎಂ. ಆರ್. ಸೀನು ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಚಿತ್ರವನ್ನು 15 ನಿಮಿಷ ಕಡಿತಗೊಳಿಸಿದ್ದರೆ ಮತ್ತಷ್ಟು ಸೊಗಸಾಗಿ ಮೂಡಿ ಬರುತ್ತಿತ್ತು.

ಚಿತ್ರ ನಿರ್ದೇಶನ: ಅನಂತರಾಜು

ತಾರಾಗಣ: ಸುದೀಪ್, ವಿಜಯ್ ರಾಘವೇಂದ್ರ, ಕೋಮಲ್, ದಿಗಂತ್, ನಾಗಕಿರಣ್, ಜೆನ್ನಿಫರ್, ರಂಗಾಯಣ ರಘು, ಉಮಾಶ್ರೀ, ಬುಲೆಟ್ ಪ್ರಕಾಶ್, ಸತ್ಯಜಿತ್, ಸಾಧುಕೋಕಿಲಾ