ನಿರಾಶೆ ಮೂಡಿಸುವ 'ಮಲ್ಲಿಕಾರ್ಜುನ'

PR
ಹಳ್ಳಿಯ ಪಾಳೇಗಾರರ ವೈಷಮ್ಯದ ಕಥೆ ಹೊಂದಿರುವ 'ಮಲ್ಲಿಕಾರ್ಜುನ' ಹತ್ತು ವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ 'ತವಸಿ' ಚಿತ್ರದ ರಿಮೇಕ್. ಸಂಭಾಷಣೆಯಿಂದ ಹಿಡಿದು ಎಲ್ಲವನ್ನೂ ಆ ಚಿತ್ರದಿಂದಲೇ ಯಥಾವತ್ತಾಗಿ ಎತ್ತಿಕೊಂಡಿರುವುದರಿಂದ ನಿರ್ದೇಶಕ ಮುರಳಿ ಮೋಹನ್ ಮೆದುಳಿಗೆ ಹೆಚ್ಚು ಕೆಲಸ ಕೊಟ್ಟಿಲ್ಲ.

ರವಿಚಂದ್ರನ್ ಪ್ರಥಮ ಬಾರಿಗೆ ಅಪ್ಪ ಮತ್ತು ಮಗನ ದ್ವಿಪಾತ್ರಗಳಲ್ಲಿ ನಟಿಸಿರುವ 'ಮಲ್ಲಿಕಾರ್ಜುನ' ಬಿಡುಗಡೆಗೆ ಮುಂಚೆ ನೀರೀಕ್ಷೆಗಳನ್ನು ಹುಟ್ಟಿಸಿರಲಿಲ್ಲ. ಆದರೆ ಪ್ರೇಕ್ಷಕನಲ್ಲಿ ತೀವ್ರ ನಿರಾಶೆಯನ್ನು ತುಂಬುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಹಳೆಯ ಸೂತ್ರದ ಜಾಡಿನಲ್ಲೇ ಸಾಗುವ ಈ ಚಿತ್ರದ ಹಾದಿಯಲ್ಲಿ ಹೊಸತನದ ಲವಲೇಶ ಎಲ್ಲಿಯೂ ಎದ್ದು ಕಾಣುವುದಿಲ್ಲ. ಸರ್ವೇಸಾಮಾನ್ಯವಾಗಿ ರವಿಚಂದ್ರನ್ ಚಿತ್ರಗಳಲ್ಲಿ ಕಂಡುಬರುವ ಮೆರುಗು ಇಲ್ಲಿ ನಾಪತ್ತೆಯಾಗಿದೆ. ಕಿಡಿಗೇಡಿಯೊಬ್ಬನ ಚಪ್ಪಲಿ ತೊಳೆಯುವಂಥ ತಾಳ್ಮೆಯನ್ನು ನಾಯಕ ರವಿಚಂದ್ರನ್ ತೋರಿದರೂ ಅದು ಪ್ರೇಕ್ಷಕನಿಗೆ ರುಚಿಸುವುದಿಲ್ಲ.

ರವಿಚಂದ್ರನ್ ಅಪ್ಪನ ಪಾತ್ರದಲ್ಲಿ ಯುವಕನಂತೆ ಕಾಣುವುದು ಹಾಗೂ ಮಗನ ಪಾತ್ರದಲ್ಲಿ ವಯಸ್ಸು ಮೀರಿದಂತೆ ಗೋಚರಿಸುವುದನ್ನು ಮರೆಮಾಚಲು ನಿರ್ದೇಶಕರು ತಲೆ ಕೆಡಿಸಿಕೊಂಡಂತೆ ಕಾಣುವುದೇ ಇಲ್ಲ. ಒಟ್ಟಿನಲ್ಲಿ ರವಿಚಂದ್ರನ್ ದ್ವಿಪಾತ್ರವನ್ನು ಸಹಿಸಿಕೊಳ್ಳುವ ಕಷ್ಟವನ್ನು ಪ್ರೇಕ್ಷಕ ಅನುಭವಿಸಬೇಕಾಗುತ್ತದೆ.

ಛದ್ಮವೇಷ ಸ್ಪರ್ಧೆಯಲ್ಲಿ ಬಾಗವಹಿಸುವವರಂತೆ ಕಾಣುವ ರವಿಚಂದ್ರನ್ ಅವರ ದಿರಿಸು ಮೇಲಾಗಿ ಮಾತು ಅನೇಕ ದೃಶ್ಯಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿ ನಗು ಹುಟ್ಟಿಸುತ್ತವೆ. ನಾಯಕಿಯರಾದ ಸೀತಾ ಮತ್ತು ಸದಾ ಎಂಥಾ ಸಂಕಷ್ಟ ಪರಿಸ್ಥಿತಿಯಲ್ಲೂ ಗರಿ ಗರಿ ಉಡುಗೆ ತೊಟ್ಟು ಆಕರ್ಷಕವಾಗಿ ಕಾಣುತ್ತಾರಾದರೂ ಸದಾಗೆ ಚಿತ್ರದ ಉತ್ತರಾರ್ಧದಲ್ಲಿ ಅವಕಾಶಗಳೇ ಕಡಿಮೆ. ಹಾಡುಗಳಲ್ಲೂ ರವಿಚಂದ್ರನ್-ಸದಾ ತೀರಾ ಪೇಲವವಾಗಿ ಕಾಣುತ್ತಾರೆ.

ಉತ್ತಮ ತಂತ್ರಜ್ಞರೆಂದೇ ಹೆಸರುಮಾಡಿರುವ ರವಿಚಂದ್ರನ್ ಅವರನ್ನು ಇಂಥ ಪಾತ್ರಗಳಲ್ಲಿ ಕಾಣುವ ಗ್ರಹಚಾರ ಪ್ರೇಕ್ಷಕನಿಗೇಕೆ ಎಂಬುದು ಕೊನೆಗೂ ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಎಸ್.ಎ. ರಾಜ್‌ ಕುಮಾರ್ ಸಂಗೀತದಲ್ಲಿ ಮೂಡಿಬಂದಿರುವ ಕವಿರಾಜ್ ಅವರ ಎರಡು ಹಾಡುಗಳು ಮೆಲುಕು ಹಾಕುವಂತಿವೆ. ಒಟ್ಟಿನಲ್ಲಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆಯ ದೌರ್ಜನ್ಯವನ್ನು 'ಮಲ್ಲಿಕಾರ್ಜುನ' ಚಿತ್ರ ನಿರ್ದೇಶಕರು ತೋರಿದ್ದಾರೆಂದೇ ಹೇಳಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ