ನೀನಾಸಂ ಅಶ್ವಥ್ 'ಎಲ್ಲೆಲ್ಲೂ ನಾನೆ'!

PR
PR
'ಬಂಗಾರ್ ಪಟ್ಲೇರ್' ನಂತಹ ನವಿರು ನಿರೂಪಣೆಯ ತುಳು ಚಿತ್ರ ನಿರ್ದೇಶಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಮಂಗಳೂರಿನ ರಿಚರ್ಡ್ ಕ್ಯಾಸ್ಟಲಿನೋ ಕನ್ನಡದಲ್ಲಿ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. 'ಎಲ್ಲೆಲ್ಲು ನೀನೆ ನನ್ನಲ್ಲೂ ನೀನೆ' ಶೀರ್ಷಿಕೆಯ ಈ ಚಿತ್ರದಲ್ಲಿ ಅಣ್ಣನ ಪಾತ್ರದಲ್ಲಿ ನಟಿಸಿರುವ ನೀನಾಸಂ ಅಶ್ವಥ್ ಚಿತ್ರದ ತುಂಬ ಆವರಿಸಿಕೊಂಡುಬಿಟ್ಟಿದ್ದಾರೆ. 'ಬಂಗಾರ್ ಪಟ್ಲೇರ್' ನಂತಹ ಕಲಾತ್ಮಕ ಚಿತ್ರ ತಯಾರಿಸಿದ್ದ ಕ್ಯಾಸ್ಟಲಿನೋರಿಗೆ ವ್ಯಾಪಾರಿ ಸಿನಿಮಾದ ವ್ಯಾಕರಣ ಈ ಚಿತ್ರದಲ್ಲಿ ಅಷ್ಟಾಗಿ ಕೈ ಹತ್ತಿಲ್ಲ ಎಂದೇ ಹೇಳಬೇಕಾಗುತ್ತದೆ.

ದೊಡ್ಡ ಎಸ್ಟೇಟ್ ಮಾಲೀಕನ ಮನೆಗೆ ಡ್ರೈವರ್ ಕೆಲಸಕ್ಕೆ ಬರುವ ಸುಂದರ ಯುವಕನ ಬಗ್ಗೆ ಮನೆ ಮಗಳಿಗೆ ಪ್ರೇಮ ಅಂಕುರಿಸುತ್ತದೆ. ಅದು ಕುರುಡು ಪ್ರೇಮವಾದುದರಿಂದ ಬೇರೆ ಬೇರೆ ರೂಪ ಪಡೆಯುತ್ತಾ ಹೋಗುತ್ತದೆ. ಮುಂದೆ ಈ ನಾಯಕಿಯ ಅಣ್ಣ ತಂಗಿಯ ಮನಸ್ಸಿಗೆ ನೋವುಂಟು ಮಾಡಲಾರದ ತಾಕಲಾಟದಲ್ಲಿ ಬೇಯುವ ಕಥಾವಸ್ತು 'ಎಲ್ಲೆಲ್ಲು ನೀನೆ ನನ್ನಲ್ಲೂ ನೀನೆ' ಚಿತ್ರದ್ದು.

ಕನ್ನಡದಲ್ಲಿ ಈಗಾಗಲೇ ಬಂದು ಹೋಗಿರುವ ಅದೆಷ್ಟೋ ಚಿತ್ರಗಳ ಸಾಲಿಗೆ ಸೇರುವ 'ಎಲ್ಲೆಲ್ಲೂ,,.' ಚಿತ್ರದ ನಿರೂಪಣೆಯಲ್ಲಿ ಹಳೆಯ ತಂತ್ರವನ್ನೇ ಅನುಸರಿಸಿರುವುದರಿಂದ ಇದು ಹಳೆಯ ಕಾಲದವರಿಗೆ ಇಷ್ಟವಾಗಬಹುದೇನೋ.

ಅಣ್ಣನಾಗಿ ಅಭಿನಯಿಸಿರುವ ನೀನಾಸಂ ಅಶ್ವಥ್ ತಮಗೆ ಅಪರೂಪಕ್ಕೆ ದೊರಕಿರುವ ಪಾತ್ರವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಅತ್ಯಂತ ಭಾವನಾತ್ಮಕವಾಗಿಯೇ ಅವರು ನಟಿಸಿದ್ದಾರೆ. ಚಿತ್ರದ ನಾಯಕ ರೋಹಿತ್ ಫೆರ್ನಾಂಡಿಸ್ ಕಷ್ಟಪಟ್ಟು ಅಭಿನಯಿಸಿದಂತಿದೆ. ಅಂಬಾರಿ ಖ್ಯಾತಿಯ ನಾಯಕಿ ಸುಪ್ರೀತಾ ಈ ಚಿತ್ರದ ಭಾವನಾತ್ಮಕ ಸನ್ನಿವೇಶದಲ್ಲಿ ಮಾಮೂಲಿಯಾಗಿ ನಡೆದುಕೊಳ್ಳುವುದು ವಿಚಿತ್ರವೆನಿಸುತ್ತದೆ.

ಸಾಮಾನ್ಯ ಪ್ರೇಮದ ಕಥೆಯನ್ನು ತುಸು ಕುತೂಹಲ ಹುಟ್ಟಿಸುವಂತೆ ಹೇಳಿದ್ದಾರೆ ಕ್ಯಾಸ್ಟಲಿನೋ. ಇದನ್ನು ಇನ್ನಷ್ಟು ರಂಜಕವಾಗಿ, ಪರಿಣಾಮಕಾರಿಯಾಗಿ ನಿರೂಪಿಸಬಹುದಿತ್ತು. ಆದರೆ ಅದನ್ನು ಜೀವವಿಲ್ಲದಂತೆ ನಿರೂಪಿಸಿ ಅವಸರದಲ್ಲಿ ಮುಗಿಸಿದ್ದಾರೆ. ಕರ್ನಾಟಕದ ಹಸಿರನ್ನು ಕಣ್ಣಿಗೆ ಹಿತವಾಗುವಂತೆ ಛಾಯಾಗ್ರಾಹಕ ಮಲ್ಲಿಕಾರ್ಜುನ್ ಹಿಡಿದಿಟ್ಟದ್ದು ಹಾಗೂ ಕೆಲವೆಡೆ ವಿಜಯ ಭಾರತಿ ಅವರ ಸಂಗೀತ ಕ್ಯಾಸ್ಟ್ಟಲಿನೋ ಅವರ ಪ್ರೇಮ ಕಥೆಗೆ ಒಂದಷ್ಟು ನೆರವಾಗಿದೆ.

ವೆಬ್ದುನಿಯಾವನ್ನು ಓದಿ