ಚಿತ್ರ: ಪುತ್ರ ತಾರಾಗಣ: ದಿಗಂತ್, ಅವಿನಾಶ್, ಸುಪ್ರೀತಾ ನಿರ್ದೇಶನ: ಉಮಾಕಾಂತ್ ವಿ. ಸಂಗೀತ: ರಮೇಶ್ ರಾಜಾ
ಅಪ್ಪ-ಮಕ್ಕಳ ಬಾಂಧವ್ಯಕ್ಕೆ ಹೆಚ್ಚು ಮೀಸಲಾದ ಚಿತ್ರ ಇತ್ತೀಚೆಗೆ ಕನ್ನಡದಲ್ಲಿ ಬಂದಿಲ್ಲ. ಅಂತಹದ್ದೊಂದು ಅಪರೂಪದ ಚಿತ್ರ ಸಾಹಸಸಿಂಹ ವಿಷ್ಣುವರ್ಧನ್ 'ಸಿರಿವಂತ'ದ ಮೂಲಕ ಮಾಡಿದ್ದರು. ಅದು ತೆಲುಗಿನ ರಿಮೇಕ್. ಈಗ ನಮ್ಮ ಮುಂದಿರುವ 'ಪುತ್ರ'ನೂ ಇದೇ ವಿಭಾಗಕ್ಕೆ ಸೇರಿದ ಚಿತ್ರ.
WD
ಅಪ್ಪ-ಮಗ ಹೇಗಿರಬೇಕು? ತನ್ನ ಮಗನ ಬಗ್ಗೆ ಅಪ್ಪ ಹೊಂದಿರುವ ಕಾಳಜಿಯೇನು? ಅದನ್ನು ಆತ ಯಾಕೆ ಪ್ರದರ್ಶನಕ್ಕಿಡದೆ ಅಮುಕಿಕೊಂಡಿರುತ್ತಾನೆ? ಅಪ್ಪ-ಮಕ್ಕಳೆಂದರೆ ಹೀಗೆಯೇ ಇರಬೇಕಾ? ಇಂತಹ ಹತ್ತಾರು ಪ್ರಶ್ನೆಗಳಿಗೆ ಒಂದು ಹಂತದವರೆಗೆ ಉತ್ತರ ನೀಡುವಲ್ಲಿ 'ಪುತ್ರ' ಯಶಸ್ವಿಯಾಗಿದೆ.
WD
ಅಪ್ಪ ನರಸಿಂಹ (ಅವಿನಾಶ್) ಕಟ್ಟುನಿಟ್ಟಿನ ಮನುಷ್ಯ. ವಿಚಿತ್ರವೆಂದರೆ ಮಗ ಕೃಷ್ಣ (ದಿಗಂತ್) ತಂದೆಯ ಕೋಪಕ್ಕೆ ತುಟಿ ಪಿಟಿಕ್ಕೆನ್ನದೆ ಇರುವುದು. ಇಂಜಿನಿಯರಿಂಗ್ ಕಲಿಯುವ ಕೃಷ್ಣ, ತಂದೆಯ ಕಿರಾಣಿ ಅಂಗಡಿಯಲ್ಲೂ ನೆಮ್ಮದಿಯಿಂದ ಉಸಿರು ಬಿಡಲಾರ. ಅಂತಹ ಪರಿಸ್ಥಿತಿಯನ್ನು ನರಸಿಂಹ ಸೃಷ್ಟಿಸಿರುತ್ತಾನೆ. ಅದನ್ನೆಲ್ಲ ಚಾಚೂ ತಪ್ಪದೆ ಪಾಲಿಸುವ ಮಗ, ತಂದೆಯ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಹೋದವನೇ ಅಲ್ಲ.
WD
ಹೀಗಿದ್ದ ಕೃಷ್ಣ ತನ್ನ ಬಾಲ್ಯದ ಗೆಳತಿ ತುಳಸಿ (ಸುಪ್ರೀತಾ) ಹಿಂದೆ ಬೀಳುತ್ತಾನೆ. ಅದೂ ಹತ್ತು ವರ್ಷಗಳ ನಂತರ. ಇಷ್ಟು ಅಂತರಕ್ಕೆ ಕಾರಣ, ಕುಟುಂಬಗಳ ನಡುವಿನ ದ್ವೇಷ. ಆ ದ್ವೇಷ ನಿವಾರಣೆಯಾಯ್ತು ಅನ್ನೋ ಸಂದರ್ಭದಲ್ಲಿ ಕೃಷ್ಣ ಮತ್ತು ತುಳಸಿ ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುತ್ತಾರೆ. ಅದೂ ತಂದೆ ನರಹಿಂಹನ ಕಣ್ಣಿಗೆ.
ದ್ವೇಷ ಮತ್ತೆ ಶುರು. ಕೃಷ್ಣನಿಗೆ ಮನೆಯಲ್ಲೂ ಜಾಗವಿರುವುದಿಲ್ಲ. ಅತ್ತ ತುಳಸಿಯೂ ಮನೆ ಬಿಡುತ್ತಾಳೆ. ಹಾಗೆ ಒಂದಾದವರು ಏನಾಗುತ್ತಾರೆ, ಅಪ್ಪ-ಮಗನ ಕಥೆಯೇನು ಅನ್ನೋದನ್ನು ಚಿತ್ರಮಂದಿರದಲ್ಲೇ ಹೋಗಿ ನೋಡಬೇಕು.
WD
ವಿ. ಉಮಾಕಾಂತ್ ಹಿರಿಯ ನಿರ್ದೇಶಕರು. ಆದರೆ ಇಲ್ಲಿ ತಮಿಳಿನ 'ಎಮ್ ಮಗನ್'ಗೆ ಪೂರ್ತಿ ನಿಷ್ಠರಾಗಿದ್ದಾರೆ. ಕೆಲವೊಂದು ಲೋಪಗಳ ಹೊರತಾಗಿಯೂ ಸಿನಿಮಾ ಸಹ್ಯವೆನಿಸುವುದು ಕಟ್ಟುನಿಟ್ಟಿನ ಪಾತ್ರಗಳಿಗೆ ಹೆಸರಾದ ಅವಿನಾಶ್ ಮತ್ತು ಇದುವರೆಗೆ ಕಾಣಿಸಿಕೊಳ್ಳದ ವಿಭಿನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿರುವ ದಿಗಂತ್ ಕಾರಣದಿಂದ.
ನಾಯಕಿ ಸುಪ್ರೀತಾ ಕಥೆಯ ಕೇಂದ್ರ ಬಿಂದುವಲ್ಲ. ಇನ್ನೊಬ್ಬ ನಾಯಕಿಯಾಗಿ ಬರುವ ರೂಪಶ್ರೀ ಕೆಲವೇ ದೃಶ್ಯಗಳಿಗೆ ಸೀಮಿತ. ರಮೇಶ್ ರಾಜಾ ಸಂಗೀತ ಓಕೆ. ಆದರೆ ರವಿ ಸುವರ್ಣ ಕ್ಯಾಮರಾ ಮತ್ತು ಸಂಕಲನವನ್ನೂ ಹಾಗೆ ಹೇಳುವಂತಿಲ್ಲ.
ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸದ 'ಪುತ್ರ'ನನ್ನು ನೋಡಿದರೆ ನಷ್ಟವಿಲ್ಲ.