ಪ್ರಕಾಶರ 'ಗೋಕುಲ' ಪ್ರೇಕ್ಷಕರಿಗೆ 'ಆನಂದಗೋಕುಲ'!

MOKSHA
ಚಿತ್ರ -ಗೋಕುಲ
ತಾರಾಗಣ -ವಿಜಯ್ ರಾಘವೇಂದ್ರ, ಯಶ್, ಪೂಜಾಗಾಂಧಿ, ನಕ್ಷತ್ರ, ಪವನ್ ಕುಮಾರ್, ರಘುರಾಜ್.
ನಿರ್ದೇಶನ -ಪ್ರಕಾಶ್

ಗೋಕುಲ ಚಿತ್ರದ ಮೂಲಕ ದ್ವಾಪರಯುಗದ ಗೋಕುಲವನ್ನೇ ಕನ್ನಡ ಚಿತ್ರರಸಿಕರಿಗೆ ಉಣಬಡಿಸಿದ್ದಾರೆ ಯುವ ನಿರ್ದೇಶಕ ಪ್ರಕಾಶ್. ವೇಗವಾಗಿ ಸಾಗುವ ಮೊದಲರ್ಧ, ಸೆಂಟಿಮೆಂಟಿನ ದ್ವಿತೀಯಾರ್ಧದೊಂದಿಗೆ ಮೊದಲೇ ತಿಳಿದುಬಿಡುವ ಅಂತ್ಯವಿದ್ದರೂ ಗೋಕುಲ ಚಿತ್ರ ಇಷ್ಟವಾಗುವುದಕ್ಕೆ ಸಾಕಷ್ಟು ಕಾರಣಗಳಿವೆ.

ಚಿತ್ರದಲ್ಲಿ ನೀತಿಯಿದೆ. ನಿರೂಪಣೆಯಲ್ಲಿ ವೇಗವಿದೆ. ಚಿತ್ರದ ಕಲಾವಿದರ ದಂಡು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ. ಪ್ರಮುಖವಾಗಿ ಪ್ರಕಾಶ್, ನಿರ್ದೇಶನದ ಅ ಆ ಇ ಈಯಿಂದ ಹಿಡಿದು ಸಂಪೂರ್ಣ ವ್ಯಾಕರಣವನ್ನೇ ಅರೆದು ಕುಡಿದು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದೇನೋ.

ದೊಡ್ಡ ಸ್ಟಾರುಗಳಿಲ್ಲದೆ ಚಿತ್ರ ತಯಾರಿಸುವುದು ನಿರ್ದೇಶಕನಿಗೆ ತುಸು ಕಷ್ಟಕರ ಆದರೂ, ಅಂತಹ ಕಷ್ಟಕ್ಕೂ ಸೈ ಎಂದಿದ್ದಾರೆ ಪ್ರಕಾಶ್. ಅನಾಥಾಶ್ರಮದಿಂದ ಹೊರಬಿಳುವ ಅಸಾಮಾನ್ಯ ನಾಲ್ವರು ಸಾಮಾನ್ಯ ಜನರಿಗೆ ಟೋಪಿ ಹಾಕಿ ಬದುಕುತ್ತಿರುತ್ತಾರೆ ಅದೊಮ್ಮೆ ವೃದ್ಧ ದಂಪತಿಯ ಮನೆಯಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಾರೆ. ನಾಲ್ವರಿಗೂ ಆ ದಂಪತಿಗಳ ಆಸ್ತಿಯ ಮೇಲೆ ಕಣ್ಣಿರುತ್ತದೆ. ಅಂತಿಮವಾಗಿ ಆಸ್ತಿಗಿಂತ ಸಂಬಂಧಗಳೇ ಹೆಚ್ಚು ಮೌಲ್ಯವಾದುದು ಎಂದು ಎಲ್ಲರೂ ಅರಿಯುತ್ತಾರೆ.
MOKSHA


ಮಾತುಗಾರನಾಗಿ ವಿಜಯ ರಾಘವೇಂದ್ರ ಚಿತ್ರದೂದ್ದಕ್ಕೂ ಪುಟಿಯುತ್ತಾರೆ. ಯಶ್ ನಟನೆಯಲ್ಲಿ ಇನ್ನೂ ಪಳಗಬೇಕು. ರಘುರಾಜ್ ಪರವಾಗಿಲ್ಲ. ಆದರೆ ಮೆಚ್ಚಬೇಕಾದ್ದು ಪವನ್ ಕುಮಾರ್ ನಟನೆಯನ್ನು. ಒಳ್ಳೆಯ ಅವಕಾಶಗಳು ಸಿಕ್ಕರೆ ಆತನಿಂದ ಉತ್ತಮ ನಟನೆಯನ್ನು ಪವನ್‌ರಿಂದ ನಿರೀಕ್ಷಿಸಬಹುದು.

ಶ್ರೀನಿವಾಸ ಮೂರ್ತಿ ಮತ್ತು ಸುಮಿತ್ರಾ ಜೋಡಿ ಸೊಗಸಾಗಿ ಮೂಡಿ ಬಂದಿದೆ. ನಕ್ಷತ್ರ ಹಾಗೂ ಪೂಜಾ ಗಾಂಧಿಗೆ ನಟನೆಯಲ್ಲಿ ಅಂಥ ಅವಕಾಶವಿಲ್ಲ. ಆದರೂ, ಈ ಮಿಂಚಿನ ಬಳ್ಳಿಗಳು ಗೋಕುಲದಲ್ಲಿ ಎಲ್ಲರ ಕಣ್ಣಿಗೆ ಹಬ್ಬ. ಸತ್ಯ ಹೆಗಡೆ ಛಾಯಾಗ್ರಹಣ ಪ್ರತಿ ಫ್ರೇಮಿನಲ್ಲೂ ಎದ್ದು ಕಾಣುತ್ತದೆ. ಮನೋಮೂರ್ತಿ ಸಂಗೀತ ನೆಮ್ಮದಿಯಿಂದ ಕೇಳುವಂತಿದೆ. ನಟಿ ರಾಗಿಣಿಯ ಕುಣಿತದಲ್ಲಿರುವ ಗೀತೆ ಚಿತ್ರದಲ್ಲಿ ಇಲ್ಲದೆ ಇದ್ದಿದ್ದರೂ ಗೋಕುಲ ಇಷ್ಟೇ ಚೆನ್ನಾಗಿರ್ತಿತ್ತೇನೋ!

ವೆಬ್ದುನಿಯಾವನ್ನು ಓದಿ