ಬಿರುಗಾಳಿ ತಂಪಾಗಿದೆ

ವಿಮರ್ಶೆ: ರವಿಪ್ರಕಾಶ್ ರೈ

ಕಡಲ ತೀರದಲ್ಲಿ ಬೆಳೆಯುವ ಆ ಅನಾಥ ಹುಡುಗ ಹೊಸ ಬದುಕು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾನೆ. ಆತನ ಹೆಸರು ಹಚ್ಚಿ. ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ಪ್ರೀತಿಯ ಹುಡುಗಾಟವೂ ಆರಂಭವಾಗುತ್ತದೆ. ತನ್ನ ಬಾಲ್ಯದ ಗೆಳತಿಯ ಪ್ರೀತಿಯನ್ನು ಅರಿಯದ ಹಚ್ಚಿ, ನಗರದ ಬೆಡಗಿಯ ಮೋಡಿಗೆ ಬೀಳುತ್ತಾನೆ. ಕೈಗೆ ಸಿಗದ ಆ ಹುಡುಗಿ ಆತನ ಪಾಲಿಗೆ ಆಕಾಶಗಂಗೆ. ಹೀಗೆ ಸಾಗುವ ಚಿತ್ರದಲ್ಲಿ ಅವನ ತಾಯಿ ಕಡಲ ತೀರದಲ್ಲಿ ಕೈ ಬೀಸಿಕರೆಯುತ್ತಿರುವಂತೆ ಚಿತ್ರ ಮುಗಿಯುತ್ತದೆ.

ಹೌದು ಇದು ಈ ವಾರ ಬಿಡುಗಡೆಯಾದ ಬಿರುಗಾಳಿ ಚಿತ್ರದ ಒನ್‌ಲೈನ್ ಸ್ಟೋರಿ. ನಿರ್ದೇಶಕ ಹರ್ಷ ಹಿಂದಿಗಿಂತ ನಿರ್ದೇಶನದಲ್ಲಿ ಪಳಗಿದ್ದಾರೆ. ಅವರು ನೃತ್ಯ ಸಂಯೋಜಕರೂ ಆಗಿರುವುದರಿಂದ ಸಹಜವಾಗಿ ಹಾಡುಗಳು ಅದ್ಬುತವಾಗಿ ಮೂಡಿಬಂದಿದೆ.

ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯೊಂದಿಗೆ ತಾಯಿ ಸೆಂಟಿಮೆಂಟ್ ಕೂಡಾ ಇದೆ. ಕಥೆಗೊಂದು ತಿರುವು ನೀಡುವ ಅನಿವಾರ್ಯತೆಗಾಗಿ ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿ ತನ್ನ ಪ್ರೀತಿಯ ಹಚ್ಚಿ ಹಣೆಗೆ ಬಂದೂಕು ಹಿಡಿಯುವ ದೃಶ್ಯವನ್ನು ನಿರ್ದೇಶಕ ಹರ್ಷ ಸೃಷ್ಟಿಸಿದ್ದಾರೆ. ನಿರ್ದೇಶಕರು ಚಿತ್ರಕ್ಕೆ ಶ್ರೀಮಂತತೆ ತರಲು ಶ್ರಮಿಸಿರುವುದು ಚಿತ್ರದ ಪ್ರತಿ ಫ್ರೇಮ್ನಲ್ಲೂ ಕಾಣುತ್ತದೆ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ವೇಣು ಅವರ ಕ್ಯಾಮರಾ ಕುಸುರಿ. ಇದು ದೃಶ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ. ಯೋಗಾನಂದ್ ಅವರ ಸಂಭಾಷಣೆ ಚೆನ್ನಾಗಿದೆ.

ನಾಯಕ ಚೇತನ್ ತಮ್ಮ ಹೊಸ ಗೆಟಪ್‌ನಲ್ಲಿ ಚೆನ್ನಾಗಿ ಕಂಡಿದ್ದಾರೆ. ಇವರ ಭಾವಪೂರ್ಣ ಕಣ್ಣುಗಳು, ಅದ್ಬುತವಾದ ಫೈಟಿಂಗ್ ಎಲ್ಲವೂ ಸೂಪರ್. ಇಬ್ಬರು ನಾಯಕಿಯರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಣ್ಣಪುಟ್ಟ ನ್ಯೂನತೆಗಳನ್ನು ಬಿಟ್ಟರೆ ಚಿತ್ರ ಚೆನ್ನಾಗಿ ಮೂಡಿಬಂದಿದೆ.

ವೆಬ್ದುನಿಯಾವನ್ನು ಓದಿ