ಮತ್ತೆ ಭಟ್ಟರ ಡೈಲಾಗು ಗಮ್ಮತ್ತು: ಇದು 'ಪಂಚರಂಗಿ' ಪಂಚ್

PR
ನಿರ್ದೇಶನ- ಯೋಗರಾಜ್ ಭಟ್
ನಿರ್ಮಾಣ- ಯೋಗರಾಜ್ ಭಟ್, ಸುಬ್ರಹ್ಮಣ್ಯ.
ತಾರಾಗಣ- ದಿಗಂತ್, ನಿಧಿ ಸುಬ್ಬಯ್ಯ, ಪ್ರಿಯಾಂಕಾ ಉಪೇಂದ್ರ, ಅನಂತನಾಗ್, ರಾಜು ತಾಳಿಕೋಟೆ, ಪದ್ಮಜಾ ರಾವ್, ಸುಧಾ ಬೆಳವಾಡಿ, ರಮ್ಯಾ ಬರ್ನಾ, ಸುಂದರ್ ರಾಜ್ ಮತ್ತಿತತರು.
ಸಂಗೀತ- ಮನೋಮೂರ್ತಿ

ಕನ್ನಡ ಚಿತ್ರರಸಿಕರ ಬಹುನಿರೀಕ್ಷೆಯ ಪಂಚರಂಗಿ ತೆರೆಗಪ್ಪಳಿಸಿದೆ. ಯೋಗರಾಜ್ ಭಟ್ ಮತ್ತೆ ಗೆದ್ದಿದ್ದಾರೆ. ಭಟ್ಟರ ಪಂಚರಂಗಿಗೆ ಸಹಜವಾಗಿಯೇ ಪ್ರೇಕ್ಷಕ ಆಸಕ್ತನಾಗಿದ್ದಾನೆ. ಪಂಚರಂಗಿಯ ಪಂಚಿಂಗ್ ಡೈಲಾಗು, ಮಧುರ ಸಂಗೀತ, ಕಣ್ತಂಪು ಮಾಡುವ ಕರಾವಳಿ ದೃಶ್ಯ ಎಲ್ಲವುಗಳಿಂದಲೂ ಸಂಪನ್ನವಾಗಿರುವ ಚಿತ್ರ ಮಜಬೂತಾಗಿದೆ.

ಭಟ್ಟರು ಮೊದಲೇ ಹೇಳಿದಂತೆ ಪಂಚರಂಗಿ ಎಂದರೆ ಐದು ಬಣ್ಣಗಳು. ಅರ್ಥಾತ್ ಈ ಐದು ಬಣ್ಣಗಳು ಭಟ್ಟರು ಜೀವನದ ಐದು ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಡೈಲಾಗುಗಳ ಮೂಲಕವೇ ಜೀವನವನ್ನು ಲೈಫು ಇಷ್ಟೇನೇ ಎಂದಿದ್ದಾರೆ. 'ಗಳು' ಪ್ರಯೋಗದಲ್ಲೇ ಭಟ್ಟರು ಮಾತಿನ ಮಂಟಪ ಕಟ್ಟಿದ್ದಾರೆ. ಆ ಮೂಲಕ ಜೀವನವನ್ನು ಹಸಿಹಸಿಯಾಗಿ ಬಿಚ್ಚಿಟ್ಟಿದ್ದಾರೆ.

ತುಂಬ ಸಿಂಪಲ್ ಆಗಿರುವ ಕಥಾನಕವಿದು. ಕಥೆಯಲ್ಲಿ ಹೇಳಿಕೊಳ್ಳುವ ಅಂಥಾದ್ದೇನೂ ಇಲ್ಲ. ಆದರೆ ಸೋಕಾಲ್ಡ್ ಸಿನಿಮಾಗಳ ಸಿದ್ಧ ಸೂತ್ರಗಳೇ ಇಲ್ಲದೆ ಹೇಳುಕೊಳ್ಳುವಂಥ ಕಥೆಯೂ ಇಲ್ಲದೆ ಚಿತ್ರವನ್ನು ನೋಡಬಲ್ಲಂತೆ ಮಾಡುವುದಿದೆಯಲ್ಲಾ, ಅದು ನಿಜವಾದ ಪ್ರಯೋಗ. ಜೊತೆಗೆ, ಯೋಗರಾಜ ಭಟ್ಟರ ಡೈಲಾಗಿನ ಗಮ್ಮತ್ತೇ ಬೇರೆ. ಚಿತ್ರದ ನಿರೂಪಣೆಯಲ್ಲೂ ಭಟ್ಟರದು ಎತ್ತಿದ ಕೈ. ಹಾಗಾಗಿ ತಮ್ಮನ್ನು ನಂಬಿ ಬರೋ ಪ್ರೇಕ್ಷಕರನ್ನು ಭಟ್ಟರು ಯಾವತ್ತೂ ನಿರಾಸೆಗೊಳಿಸುವುದಿಲ್ಲ. ಈ ಬಾರಿಯೂ ಅಷ್ಟೆ ಭಟ್ಟರು ನಿರಾಸೆ ಮಾಡಿಲ್ಲ. ಪಂಚರಂಗಿಯಲ್ಲಿ ಡೈಲಾಗೇ ರಾಜ. ನಮ್ಮ ನಿತ್ಯ ಜೀವನದ ವ್ಯಂಗ್ಯವೇ ಚಿತ್ರದ ಹೂರಣ. ಸಿಂಪಲ್ ಎನಿಸುವ ನವಿರು ಪ್ರೇಮ. ಇಷ್ಟೇ ಇದ್ದರೂ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಂಶಯವಿಲ್ಲ. ಗಾಂಧಿನಗರದ ಸಿದ್ಧ ಸೂತ್ರಗಳೆಲ್ಲವನ್ನೂ ಗಾಳಿಗೆ ತೂರಿ, ಕ್ಲೈಮ್ಯಾಕ್ಸು, ಫೈಟು, ಮಚ್ಚು, ಲಾಂಗು, ವಿಲನ್ ಇವ್ಯಾವುವೂ ಇಲ್ಲದೆ ಸುಖಾ ಸುಮ್ಮನೆ ಮಾಡಿದ ಸಿನಿಮಾ. ಹಾಗಾಗಿ ಕನ್ನಡ ಚಿತ್ರರಂಗದಲ್ಲಿ ಇದೊಂದು ಪ್ರಯೋಗವೂ ಹೌದು.
PR


ಭಟ್ಟರ ಸಿನಿಮಾ ಕಥೆಯ ಪಾತ್ರಗಳು ಮಣಿ, ರಂಗ ಎಸ್ಎಸ್ಎಲ್‌ಸಿ ಚಿತ್ರಗಳಲ್ಲಿ ವಾಚಾಳಿಯಾಗಿರಲಿಲ್ಲ. ಮುಂಗಾರು ಮಳೆಯ ಭರ್ಜರಿ ಹಿಟ್ ನಂತರ ಗಾಳಿಪಟ, ಮನಸಾರೆಯ ಪಾತ್ರಗಳೂ ವಾಚಾಳಿಯಾದವು. ಈಗಲೂ ಅಷ್ಟೆ. ಪಂಚರಂಗಿಯ ಪಾತ್ರಗಳೆಲ್ಲವೂ ವಾಚಾಳಿಗಳೇ. ಈ ಹಿಂದಿನ ಸಿನಿಮಾಗಳಿಗಿಂತಲೂ ಕೊಂಚ ಹೆಚ್ಚೇ ಎನಿಸುವ ವಾಚಾಳಿತನ ಕೆಲವೊಮ್ಮೆ ಇಷ್ಟವಾಗಬಹುದು, ಕೆಲವೊಮ್ಮೆ ಕಷ್ಟವಾದರೂ ಆಶ್ಚರ್ಯವಿಲ್ಲ. ಅಥವಾ ಭಟ್ಟರಂತಹ ಪ್ರತಿಭಾವಂತರು ಮುಂದೆ ವಾಚಾಳಿತನ ಬಿಟ್ಟು ಇನ್ನೂ ಉತ್ತಮ ಪ್ರಯೋಗಕ್ಕಿಳಿಯಬಹುದು ಅಂತಲೂ ಕೆಲವರಿಗೆ ಅನಿಸಬಹುದು.

ಭಟ್ಟರ ಜೊತೆ ಸತತ ನಾಲ್ಕನೇ ಬಾರಿಗೆ ಜೊತೆಯಾಗಿರುವ ದಿಗಂತ್ ಈ ಚಿತ್ರದಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ದೂದ್ ಪೇಡ ಎಂದು ಇಲ್ಲೂ ಕರೆಸಿಕೊಂಡಿರುವ ದಿಗಂತ್ ನಿಜಕ್ಕೂ ಭೇಷ್ ಅನಿಸುವಷ್ಟು ನಟನೆಯಲ್ಲಿ ಸುಧಾರಿಸಿದ್ದಾರೆ. ಜೊತೆಗೆ ಗೆಟಪ್ಪೂ ಬದಲಾಗಿದೆ. ಇವರ ಜೊತೆಗೆ ನಿಧಿ ಸುಬ್ಬಯ್ಯ ಖಂಡಿತವಾಗಿಯೂ ಮುಂದಿನ ಭರವಸೆಯ ಕನ್ನಡ ನಟಿ ಎಂದರೆ ತಪ್ಪಲ್ಲ. ನಿಧಿಯ ನಟನಾ ನಿಧಿ ಪಂಚರಂಗಿಯ ಮೂಲಕ ಬಹಿರಂಗವಾಗಿದೆ. ದ್ವಿತೀಯಾರ್ಧದಲ್ಲಿ ಬರುವ ಅನಂತನಾಗ್ ಸೇರಿದಂತೆ ಎಲ್ಲರೂ ಉತ್ತಮ ನಟನೆ ತೋರಿದ್ದಾರೆ. ಭಟ್ಟರು ಅವರಿಂದ ಅತ್ಯುತ್ತಮ ನಟನೆ ತೆಗೆಯುವಲ್ಲಿ ಸಫಲರಾಗಿದ್ದಾರೆ.

ತತ್ವಶಾಸ್ತ್ರದಲ್ಲಿ ಪದವಿ ಓದಿರುವ ಉಡಾಫೆಯ ಹುಡುಗ ಭರತ್ (ದಿಗಂತ್) ತನ್ನ ಸಹೋದರನ (ಪವನ್ ಕುಮಾರ್) ಜೊತೆ ಆತನಿಗಾಗಿ ಹುಡುಗಿ (ರಮ್ಯಾ ಬಾರ್ನ) ನೋಡಲು ಕರಾವಳಿಗೆ ಹೋಗುತ್ತಾನೆ. ಮದುವೆ ದಲ್ಲಾಳಿ (ರಾಜು ತಾಳಿಕೋಟೆ) ಜೊತೆಗೆ ಹೋಗಿದ್ದ ದಿಗಂತನ್ನು ಅದೇ ಮನೆಯಲ್ಲಿದ್ದ ರಮ್ಯಾ ಬರ್ನಾಳ ಕಸಿನ್ ಅಂಬಿಕಾ (ನಿಧಿ ಸುಬ್ಬಯ್ಯ)ಗೆ ಇಷ್ಟವಾಗುತ್ತದೆ. ಇವರಿಬ್ಬರ ಪ್ರೇಮ ಕಥೆ ಚಿತ್ರದಲ್ಲಿದೆ.

ಚಿತ್ರದ ಸಂಭಾಷಣೆಯ ಜೊತೆಗೆ ಮತ್ತೊಂದು ಪ್ರಮುಖ ಆಕರ್ಷಣೆ ಮನೋಮೂರ್ತಿ ಸಂಗೀತ. ಉಡಿಸುವೆ ನಿನಗೆ ಬೆಳಕಿನ ಸೀರೆಯ... ಹಾಡು ನಿಜಕ್ಕೂ ಮಧುರವಾಗಿದೆ. ಲೈಫು ಇಷ್ಟೇನೇ... ಹಾಡೂ ಸಕತ್ತಾಗಿದೆ. ಈ ಹಾಡು ಈಗಾಗಲೇ ಜನರ ಬಾಯಲ್ಲಿ ನಲಿದಾಡುತ್ತಲೂ ಇದೆ. ವಿ.ತ್ಯಾಗರಾಜನ್ ಅವರ ಕ್ಯಾಮರಾ ಕೈಚಳ ಚಿತ್ರಕ್ಕೆ ಮತ್ತಷ್ಟು ಪಂಚರಂಗು ನೀಡಿದೆ ಎಂದರೆ ತಪ್ಪಿಲ್ಲ. ಕರಾವಳಿಯ ನೈಜ ಸೊಬಗನ್ನು ಬಣ್ಣಗಳಲ್ಲಿ ಅದ್ದಿ ತೆಗೆದಂತಿದೆ ಫ್ರೇಮುಗಳು. ಮಯೂರಿ ಉಪಾಧ್ಯಾಯ ಅವರ ಕೊರಿಯೋಗ್ರಫಿ, ಕಾಸ್ಟ್ಯೂಮ್, ಕಲಾ ನಿರ್ದೇಶನ ಎಲ್ಲವೂ ಅಚ್ಚುಕಟ್ಟು.

ಚಿತ್ರದ ಸಂಕಲನಕಾರ ದೀಪು ಎಸ್. ಕುಮಾರ್ ಇನ್ನೂ ಕೊಂಚ ಕತ್ತರಿ ಪ್ರಯೋಗ ಮಾಡಿದ್ದರೆ ಒಳ್ಳೆಯದಿತ್ತು ಅಂತ ಅನಿಸಿದರೆ ಅದು ಅವರ ತಪ್ಪಲ್ಲ. ಕೆಲವೊಮ್ಮೆ ಅತಿ ಎನಿಸುವ ಡೈಲಾಗುಗಳು, ಪದೇ ಪದೇ ಮರುಕಳಿಸುವ ಒಂದೇ ಸನ್ನಿವೇಶಗಳು ಕೆಲವು ಚಿತ್ರದಲ್ಲಿವೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಇನ್ನೂ ಚಿತ್ರಕ್ಕೆ ಪಂಚ್ ಸಿಗುತ್ತಿತ್ತು. ಇಂಥ ಕೆಲ ಲೋಪದೋಷಗಳು ಗೌಣವೆಂಬುದು ನಿಜವೇ ಆದರೂ ಚಿತ್ರ ಕೊಡುದು ಉತ್ತಮ ಅನುಭೂತಿಗಾದರೂ, ನೋಡಬೇಕಾದ ಚಿತ್ರವಿದು. ಯಾಕೆ ತಡ, ಒಮ್ಮೆ ನೋಡಿ.

ವೆಬ್ದುನಿಯಾವನ್ನು ಓದಿ