ಮನಸಾಲಜಿ ಚಿತ್ರವಿಮರ್ಶೆ: ಲಾಜಿಕ್ ಇಲ್ಲದ ಟ್ರ್ಯಾಜಿಡಿ

PR


ಚಿತ್ರ: ಮನಸಾಲಜಿ
ತಾರಾಗಣ: ಅಮೂಲ್ಯಾ, ರಾಕೇಶ್, ಅಚ್ಯುತ ಕುಮಾರ್
ನಿರ್ದೇಶನ: ದೀಪಕ್ ಅರಸ್
ಸಂಗೀತ: ಅನೂಪ್ ಸಿಳೀನ್

ಅಮೂಲ್ಯಾ ಎಂತಹಾ ಪಾತ್ರಗಳಲ್ಲಿ ಕಾಣಿಸಿಕೊಂಡರೆ ನೋಡಬಹುದು ಎಂಬುದನ್ನು ಡಿ ಸೆಂಟರ್ ಪ್ರೇಕ್ಷಕನೂ ಹೇಳಬಲ್ಲ. ಆದರೆ, ಇದು ಸ್ವತಃ ಅವರ ಸಹೋದರ ದೀಪಕ್ ಅರಸ್‌ಗೆ ಅರ್ಥವಾದಂತಿಲ್ಲ. ಅವರು 'ಮನಸಾಲಜಿ' ಪಾತ್ರದ ಆಯ್ಕೆಯಲ್ಲೇ ಸೋತಿದ್ದಾರೆ. ನಂತರ ಅವರಿಂದ ನಡೆದಿರುವುದು ಸಾಲು ಸಾಲು ತಪ್ಪುಗಳು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮೊದ್ದುಮಣಿ ಸಿಹಿ (ಅಮೂಲ್ಯಾ) ಅಪ್ಪನ (ಅಚ್ಯುತ ರಾವ್) ಮಗಳು. ಆ ಅಪ್ಪ-ಮಗಳೆಂದರೆ, ಅವರ ನಡುವೆ ಏನೊಂದೂ ಮುಚ್ಚುಮರೆಯಿಲ್ಲ. ಹಾಗಾಗಿ ಅವರಿಬ್ಬರ ನಡುವೆ ಸಮಸ್ಯೆಯೇ ಇಲ್ಲ. ಮಗಳನ್ನು ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾನೆ ಅಚು. ಅದು ಎಲ್ಲಿಯವರೆಗೆ ಎಂದರೆ, ಮಗಳು ಪ್ರೀತಿಸುವ ಮೊದಲು ಕೂಡ ತಂದೆಯನ್ನೇ ಕೇಳುತ್ತಾಳೆ.

ಹೀಗೆ ಸಿಹಿ ಪ್ರೀತಿಸುವುದು ಮನಸ್ ಎಂಬ ಯುವಕನನ್ನು. ಇಬ್ಬರೂ ಗಂಟೆಗಟ್ಟಲೆ ಹರಟುತ್ತಿದ್ದವರು. ಸದಾ ತನ್ನ ಕವಿತೆಗಳಿಂದಲೇ ಸಿಹಿಯನ್ನು ಮುಗಿಲ ಮಲ್ಲಿಗೆಯಾಗಿಸುತ್ತಿದ್ದವನು. ಆಶ್ಚರ್ಯ ಅಂದರೆ ಇದು ಮೊಬೈಲ್ ಲವ್. ಯಾವತ್ತೂ ಪರಸ್ಪರ ಭೇಟಿಯಾಗಿರುವುದಿಲ್ಲ. ಹಾಗೆ ಭೇಟಿಯಾಗುವ ಮೊದಲೇ ಮನಸ್ ಅಪಘಾತವೊಂದರಲ್ಲಿ ಸಾಯುತ್ತಾನೆ. ಇದನ್ನು ಉದ್ದೇಶಪೂರ್ವಕವಾಗಿ ಮಗಳಿಂದ ಅಚು ಮುಚ್ಚಿಡುತ್ತಾನೆ.

ಈ ನಡುವೆ ಸಿಹಿಯನ್ನು ಇನ್ನೊಬ್ಬ ಯುವಕ ಪ್ರೀತಿಸುತ್ತಿರುತ್ತಾನೆ. ಆದರೆ ಆ ಪ್ರೀತಿ ಸಿಹಿಯಿಂದ ಕಹಿಯಾಗಿರುತ್ತದೆ. ಮನಸ್ ಸಾಯುತ್ತಿದ್ದಂತೆ, ತಾನೇ ಮನಸ್ ಎಂದು ಆತ ಪೋಸ್ ಕೊಡುವುದರೊಂದಿಗೆ ತಿರುವು ಆರಂಭ. ಇದರ ಅರಿವಿದ್ದ ತಂದೆ, ಇನ್ನು ಸುಮ್ಮನಿರುವುದು ತರವಲ್ಲ ಎಂದು ನಿಜ ಸಂಗತಿಯನ್ನು ಮಗಳಿಗೆ ಹೇಳುತ್ತಾನೆ.

ತನ್ನ ಮನಸ್ ಬದುಕಿಲ್ಲ ಎಂಬ ಸತ್ಯವನ್ನು ಅರಿತ ಸಿಹಿ, ಆತನಿಗಾಗಿಯೇ ತನ್ನ ಬದುಕನ್ನು ಮುಡಿಪಾಗಿಡಲು ನಿರ್ಧರಿಸುತ್ತಾಳೆ. ನೆನಪಲ್ಲೇ ಬದುಕುವ ತೀರ್ಮಾನ ಆಕೆಯದು. ಮನಸ್ ಹೆಸರಲ್ಲಿ ಪ್ರೀತಿಸುತ್ತಿದ್ದವ ನಿರಾಸೆಯಿಂದಲೇ ನಿರ್ಗಮಿಸುತ್ತಾನೆ.

ಹೊಸತೇನೋ ಹೇಳಲು ಹೊರಟ ದೀಪಕ್ ಅರಸ್ ಹಳೆ ರೀಲನ್ನೇ ಸುತ್ತಿದ್ದಾರೆ. ಅದರಲ್ಲೂ ಅಮೂಲ್ಯಾ ಎಂಬ ಅಮೂಲ್ ಬೇಬಿ ಬಾಯಲ್ಲಿ ಮೀಟರುಗಟ್ಟಲೆ ಸಂಭಾಷಣೆ ಹೇಳಿರುವುದು ಅಸಹನೀಯ. ಇಬ್ಬರು ಮನಸ್‌ಗಳಿಂದ ನಿರ್ದೇಶಕರು ಸೃಷ್ಟಿಸುವ ಗೊಂದಲ ಅಷ್ಟಿಷ್ಟಲ್ಲ. ಹೊಸ ಮನಸ್‌ಗೆ ದಿವ್ಯದೃಷ್ಟಿಯನ್ನು ದೀಪಕ್ ಕರುಣಿಸಿದಂತಿದೆ. ಇಂತಹ ಲಾಜಿಕ್ ಇಲ್ಲದ ಸಾಕಷ್ಟು ಅಂಶಗಳು ಚಿತ್ರದಲ್ಲಿವೆ.

ನಟನೆ ವಿಚಾರಕ್ಕೆ ಬಂದರೆ, ಅಮೂಲ್ಯಾ ದಪ್ಪಗಾಗಿರುವುದು ನಟನೆಯ ಮೇಲೂ ಪರಿಣಾಮ ಬೀರಿದೆ. 'ಮನಸಾಲಜಿ'ಯ ಮಟ್ಟಿಗೆ ಅವರು ಮೌನಗೌರಿಯಾದಾಗಲೆಲ್ಲ ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ. ರಾಕೇಶ್‌ ಸೇರಿದಂತೆ ಇತರರಿಗೆ ತೆರೆಯನ್ನು ಬಿಟ್ಟು ಕೊಡದಷ್ಟು ನಿರ್ದೇಶಕರು ಅಮೂಲ್ಯಾರನ್ನು ನೆಚ್ಚಿಕೊಂಡಿದ್ದಾರೆ. ಇದ್ದುದರಲ್ಲಿ ಎರಡನೇ ಮಾತಿಲ್ಲದ ನಟನೆ ತಂದೆಯಾಗಿರುವ ಅಚ್ಯುತ ರಾವ್.

ಚಿತ್ರದ ನಿಜವಾದ ಹೀರೋ ಅನೂಪ್ ಸಿಳೀನ್ ಸಂಗೀತ. ಅವರ ಮೂಸೆಯಿಂದ ಬಂದಿರುವ ನಾಲ್ಕೂ ಹಾಡುಗಳು ನಿದ್ದೆಯಿಂದೆಬ್ಬಿಸುತ್ತವೆ. ಸುಜ್ಞಾನ್ ಕ್ಯಾಮರಾ ಕೆಲಸ ನಾಜೂಕು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ