ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಫಾರ್ಮಿಗೆ ಬಂದಿದ್ದಾರೆ. ಎಲ್ಲೋ ಕಳೆದು ಹೋಗಿದ್ದವರಿಗೆ ನಿರ್ದೇಶಕ ಪಿ.ಸಿ. ಶೇಖರ್ ಹೊಸದೊಂದು ದಿಕ್ಕನ್ನು 'ರೋಮಿಯೋ'ದಲ್ಲಿ ಕೊಟ್ಟಿದ್ದಾರೆ. ಈ ಬಾರಿಯೂ ಗಣೇಶ್ ಗೆಲ್ಲದಿದ್ದರೆ, ಸ್ಯಾಂಡಲ್‌ವುಡ್‌ನ ಮುಂದಿನ ದಿನಗಳು ಅವರ ಹೆಸರಿನಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು!
ಗಣೇಶ್ ಪಕ್ಕಾ ಪೋಕರಿ, ಉಂಡಾಡಿಗುಂಡ. ನಾಲಿಗೆಯೇ ಆತನ ಆಸ್ತಿ. ಹೇಗೆ ಎಲ್ಲಿ ಯಾರನ್ನು ಬೇಕಾದರೂ ಮೆಚ್ಚಿಸಬಲ್ಲ. ಹೀಗಿದ್ದವನು ಹೇಗೋ ಕಷ್ಟಪಟ್ಟು ಡಿಗ್ರಿ ಮುಗಿಸುತ್ತಾನೆ. ಇಂಗ್ಲೀಷ್‌ನ ಗಂಧ-ಗಾಳಿಯಿಂದ ದೂರವೇ ಇದ್ದರೂ ಅದ್ಹೇಗೋ ಬ್ಯಾಂಕಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ.
ಅಲ್ಲಿಂದ ಪ್ರೇಮ ಪ್ರವರ ಶುರು. ಶ್ರುತಿಗೆ (ಭಾವನಾ) ಗಾಳ ಹಾಕುತ್ತಾನೆ. ತಾನು ಕೋಟ್ಯಧಿಪತಿಯ ಮಗ ಎಂದು ಬೂಸಿ ಬಿಡುತ್ತಾನೆ. ಶ್ರೀಮಂತಿಕೆ ಬೇಡ, ಜನಸಾಮಾನ್ಯರಂತೆ ಬದುಕುವುದು ಇಷ್ಟ, ಹಾಗಾಗಿ ಹೀಗಿದ್ದೇನೆ ಎಂದು ರೈಲು ಹತ್ತಿಸುತ್ತಾನೆ. ಪ್ರೇಮದ ಬಂಡಿ ಸಾಗುತ್ತದೆ. ಮದುವೆಯೂ ಆಗುತ್ತದೆ. ಗಣೇಶ್ ಬಂಡವಾಳ ಬಯಲಾಗುತ್ತದೆ. ಇಬ್ಬರೂ ಡೈವೋರ್ಸ್ ಹತ್ತಿರಕ್ಕೂ ಬರುತ್ತಾರೆ.
ಇದು ಸಿಂಪಲ್ ಕಥೆ. ಇಲ್ಲಿರುವ ಕಥೆಯಲ್ಲೇನೂ ಹೊಸತನವಿಲ್ಲ. ಆದರೆ ಚಿತ್ರಕಥೆ, ಅದನ್ನು ಪ್ರೆಸೆಂಟ್ ಮಾಡಿರುವ ರೀತಿ ಭಿನ್ನವಾಗಿದೆ. ಪ್ರತಿ ಡೈಲಾಗುಗಳು ನಕ್ಕು ನಗಿಸುತ್ತವೆ. ಗಣೇಶ್ ಮಾತ್ರವಲ್ಲ, ರಂಗಾಯಣ ರಘು, ಸುಧಾ ಬೆಳವಾಡಿ, ಸಾಧು ಕೋಕಿಲಾ ಪ್ರತಿಯೊಬ್ಬರೂ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಇದಕ್ಕೆ ಬೆನ್ನೆಲುಬಾಗಿರುವುದು ಸಂಭಾಷಣೆ.
ಗಣೇಶ್‌ಗೆ ಇಂತಹ ಪಾತ್ರವಾಗಲೀ, ಅವರ ಕಾಮಿಡಿ ಟೈಮಿಂಗ್ ಆಗಲೀ ಅಥವಾ ಲುಕ್ ಆಗಲಿ ಹೊಸತಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಪರಿಪೂರ್ಣ ಪಾತ್ರ ಅವರಿಗೆ ಸಿಕ್ಕಿರಲಿಲ್ಲ. ರಂಗಾಯಣ ರಘುವನ್ನು ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಾಧು ಕೋಕಿಲಾ ಪ್ರೇಕ್ಷಕರ ಪಾಲಿಗೆ ನಕ್ಕು ನಗಿಸುತ್ತಾ ಹೀರೋ ಆಗುತ್ತಾರೆ. ನಾಯಕಿ ಭಾವನಾ ಎಂದಿನಂತೆ ಲೀಲಾಜಾಲ.
ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ನೋಡುವಂತೆ ಮಾಡಿದವರು ವೈದಿ. ಅವರದ್ದು ದೃಶ್ಯವೈಭವ.
ತಾಂತ್ರಿಕತೆಯನ್ನು ಚೆನ್ನಾಗಿ ಬಳಸಿಕೊಂಡಿರುವ, ನಿರೂಪನೆಯಲ್ಲೂ ಗೆದ್ದಿರುವ ನಿರ್ದೇಶಕ ಪಿ.ಸಿ. ಶೇಖರ್ ಅವರಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗ ನಿರೀಕ್ಷಿಸಬಹುದು.
ಚಿಂತೆಗಳನ್ನು ಮರೆಯಬೇಕಿದ್ದರೆ, ಕೌಟುಂಬಿಕ ಮನರಂಜನೆ ಬೇಕಿದ್ದರೆ ಮನೆಮಂದಿಯೆಲ್ಲ ಚಿತ್ರಮಂದಿರತ್ತ ಹೆಜ್ಜೆ ಹಾಕಬಹುದು. ಅಲ್ಲಿ ರೀಲ್ 'ರೋಮಿಯೋ' ಗಣೇಶ್ ನಿಮ್ಮನ್ನು ನಕ್ಕು ನಗಿಸುತ್ತಾರೆ.