ಶಿವ ಚಿತ್ರವಿಮರ್ಶೆ: ಒಂದಷ್ಟು ಸೇಡು, ಇನ್ನೊಂದಷ್ಟು ಮಸಾಲೆ

ಶನಿವಾರ, 25 ಆಗಸ್ಟ್ 2012 (14:01 IST)
WD

ಚಿತ್ರ: ಶಿ
ತಾರಾಗಣ: ಶಿವರಾಜಕುಮಾರ್, ರಾಗಿಣಿ, ರಂಗಾಯರಘು, ರವಿಶಂಕರ್, ಗುರುದತ
ನಿರ್ದೇಶನ: ಪ್ರಕಾಶರಾವ
ಸಂಗೀತ: ಗುರುಕಿರಣ

ಸಾಮಾನ್ಯವಾಗಿ ಶಿವರಾಜ್ ಕುಮಾರ್ ಸಿನಿಮಾಗಳೆಂದರೆ, ಅವರೊಬ್ಬರನ್ನು ಬಿಟ್ಟು ಉಳಿದೆಲ್ಲರನ್ನೂ ತರಾಟೆಗೆ ತೆಗೆದುಕೊಳ್ಳಲು ಸಾಕಷ್ಟು ಅಂಶಗಳು ಕಾಣ ಸಿಗುತ್ತವೆ. ಅದು ಇತ್ತೀಚಿನ ಮೈಲಾರಿ, ಜೋಗಯ್ಯ ಸೇರಿ ಈಗ ಬಿಡುಗಡೆಯಾಗಿರುವ 'ಶಿವ'ದಲ್ಲೂ ಯಥಾವತ್ ಮುಂದುವರಿದಿದೆ.

ಹಾಗೆ ಹೇಳುವುದಾದರೆ, ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರದಲ್ಲಿ ಹೊಸತನ್ನು ಹುಡುಕುವುದೇ ತಪ್ಪು. ಅವರು ಅಲ್ಲಿಂದ ಇಲ್ಲಿಂದ ಎಲ್ಲಿಂದ ಬೇಕಾದರೂ ಯಾವ ದೃಶ್ಯಗಳನ್ನು ಬೇಕಾದರೂ ಅನಾಮತ್ತಾಗಿ ಹೇಳದೆ ಕೇಳದೆ ಎತ್ತಿಕೊಳ್ಳುವ ಜಾಣ್ಮೆ ಹೊಂದಿರುವ ವಿಶೇಷ ಪ್ರತಿಭೆ. ಅವರಿಗೆ ರೈಟ್ಸೂ ಬೇಡ, ರೇಟ್ಸೂ ಬೇಡ. 'ಶಿವ' ನೋಡುತ್ತಿದ್ದಂತೆ ಹಾಲಿವುಡ್, ಬಾಲಿವುಡ್, ಟಾಲಿವುಡ್ ಹೀಗೆ ಎಲ್ಲವೂ ಬಂದು ಹೋಗುತ್ತದೆ. ಯಾವ್ಯಾವುದೋ ದೃಶ್ಯಗಳು ನೆನಪಾಗುತ್ತವೆ!

ಬಿಡುಗಡೆಯ ಮೊದಲೇ ಹೇಳಿದಂತೆ 'ಶಿವ' ಸೇಡಿನ ಕಥೆ. ನಾಯಕನ ಹೆಸರೇ ಶಿವ (ಶಿವರಾಜ್ ಕುಮಾರ್). ಆತನ ತಂದೆ ರಾಜೇಂದ್ರ (ರವಿಕಾಳೆ) ಪ್ರಾಮಾಣಿಕತೆಗೆ ಇನ್ನೊಂದು ಹೆಸರಾದ ಜಾಕಿ (ಕುದುರೆ ಸವಾರ). ಪಾಂಡುರಂಗ ಶೆಟ್ಟಿ (ರಂಗಾಯಣ ರಘು), ಮಸ್ತಾನ್ (ಗುರುದತ್), ಆದಿಕೇಶವುಲು (ರವಿಶಂಕರ್) ಫಿಕ್ಸಿಂಗ್ ಮಾಡುವ ತಂತ್ರ ಕೈಕೊಡುತ್ತದೆ. ರಾಜೇಂದ್ರ ಮೋಸಕ್ಕೆ ಒಪ್ಪುವುದಿಲ್ಲ.

ಆದರೂ ರಾಜೇಂದ್ರನ ಕುದುರೆ ಸೋಲುತ್ತದೆ. ಇದಕ್ಕೇನು ಕಾರಣ? ತ್ರಿಮೂರ್ತಿಗಳು. ಇದನ್ನು ಬಹಿರಂಗಪಡಿಸುವವನೇ ಪತ್ರಕರ್ತ ಡೇವಿಡ್ (ಸುಚೇಂದ್ರ ಪ್ರಸಾದ್). ಖಳರೆಂದರೆ ಸುಮ್ಮನಿರುತ್ತಾರೆಯೇ? ಇಷ್ಟೂ ಮಂದಿಯನ್ನು ಜೀವಂತ ಕೊಂದು ಹಾಕುತ್ತಾರೆ. ಆ ಎರಡು ಕುಟುಂಬಗಳ ಮಕ್ಕಳೇ ಶಿವ ಮತ್ತು ಜೂಲಿ (ರಾಗಿಣಿ ದ್ವಿವೇದಿ).

ಆದರೆ ಇಷ್ಟೆಲ್ಲ ಜೂಲಿಗೆ ಗೊತ್ತಿರುವುದಿಲ್ಲ. ಶಿವ ತನ್ನ ವೈರಿಯೊಬ್ಬನ ಮಗ ಎಂದೇ ಆಕೆ ಭಾವಿಸಿರುತ್ತಾಳೆ. ಅದರಂತೆ ಪ್ರೀತಿಯಿಂದಲೇ ಚುಚ್ಚಿ ಬಿಡುತ್ತಾಳೆ. ಮಾಡಿದ್ದು ತಪ್ಪೆಂದು ಗೊತ್ತಾದಾಗ ಗುರಿಗೊಂದು ಬಲ ಸಿಗುತ್ತದೆ. ಪ್ರೀತಿ ಮುಂದುವರಿಯುತ್ತದೆ. ಕೊನೆಗೆ ವೈರಿಗಳ ನಾಶ ಆಗೇ ಆಗುತ್ತದೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲವಲ್ಲ?!

ಬರೋಬ್ಬರಿ ಹತ್ತು ವರ್ಷಗಳ ನಂತರ ಶಿವಣ್ಣನನ್ನು ನಿರ್ದೇಶಿಸುತ್ತಿದ್ದೇನೆ ಎಂಬ ಭೀತಿಯಿಂದಲೇ ಓಂ ಪ್ರಕಾಶ್ ರಾವ್ ರಿಸ್ಕಿ ಕೆಲಸ ಬೇಡ ಎಂದು ಮಾಮೂಲಿ ಮಸಾಲೆಗೆ ಮೊರೆ ಹೋದಂತಿದೆ. ಆದರೆ ಶಿವಣ್ಣ ಇದು ತನ್ನ ಮಾಮೂಲಿ ಚಿತ್ರ ಎಂದು ಭಾವಿಸಿಲ್ಲ. ಎಂದಿನಂತೆ ಲೀಲಾಜಾಲವಾಗಿ ನಿರ್ದೇಶಕರ 18ರ ನಟನಾಗಿ ಹೊರ ಹೊಮ್ಮಿದ್ದಾರೆ.

ಶಿವಣ್ಣ ಅಭಿಮಾನಿಗಳಿಗೆ ನಿರಾಸೆಯಾಗುವ ಸಾಧ್ಯತೆ ಕಡಿಮೆ. ಅವರಿಗೆ ಬೇಕಾದ ಎಲ್ಲಾ ಸರಕುಗಳನ್ನೂ ಓಂ ತುಂಬಿದ್ದಾರೆ. ಕೆಚ್ಚಿನ ಸಂಭಾಷಣೆಗಳು, ಮಸ್ತ್ ಮಸ್ತ್ ಆಕ್ಷನ್ ದೃಶ್ಯಗಳು, ಸೊಗಸಾದ ಹಾಡುಗಳು, ಅದ್ಧೂರಿ ದೃಶ್ಯಗಳು -- ಹೀಗೆ ಇಡೀ ಚಿತ್ರ ಪವರ್‌ಫುಲ್ ಆಗಿಯೇ ಸಾಗುತ್ತದೆ. ಸುಮ್ಮನೆ ಪಾಪ್‌ಕಾರ್ನ್ ತಿನ್ನುತ್ತಾ ನೋಡುವವರಿಗೆ ಟೈಮ್ ಪಾಸ್ ಗ್ಯಾರಂಟಿ. ಇನ್ನು ಶಿವಣ್ಣ ತೆರೆಯ ಹಿಂದೆ ಮಾತ್ರವಲ್ಲ, ತೆರೆಯಲ್ಲೂ ತನ್ನ ವಿರುದ್ಧ ಮಾತನಾಡುವವರನ್ನು ಲೈಟಾಗಿ ತರಾಟೆಗೆ ತೆಗೆದುಕೊಂಡಂತಿದೆ. ಅಂತಹ ಸಂಭಾಷಣೆಗಳು ಚಿತ್ರದಲ್ಲಿ ಜಾಗ ಪಡೆದಿವೆ.

ರಾಗಿಣಿ ತುಂಬಾ ಸುಂದರವಾಗಿ, ಗ್ಲಾಮರಸ್ ಆಗಿ, ಸೆಕ್ಸಿಯಾಗಿ ಕಾಣುತ್ತಾರೆ. ನಟನೆಗೆ ಸಾಕಷ್ಟು ಅವಕಾಶವಿದೆ, ಅದನ್ನು ಅಷ್ಟೋ-ಇಷ್ಟೋ ಬಳಸಿಕೊಂಡಿದ್ದಾರೆ. ರಂಗಾಯಣ ರಘು, ರವಿಶಂಕರ್, ಗುರುದತ್ ವಿಭಿನ್ನರಾಗಿ ಕಾಡುತ್ತಾರೆ. ರವಿಕಾಳೆಗೆ ಇಲ್ಲೊಂದು ಬದಲಾವಣೆ. ಗುರುಕಿರಣ್ ನಿಧಾನವಾಗಿ ಮತ್ತೆ ಹಳಿಗೆ ಬರುತ್ತಿದ್ದಾರೆ.

ಅಭಿಮಾನಿಗಳಿಂದ (ನಿರ್ಮಾಪಕ ಶ್ರೀಕಾಂತ್ ಶಿವಣ್ಣ ಅಭಿಮಾನಿ), ಅಭಿಮಾನಿಗಳಿಗೆ, ಅಭಿಮಾನಿಗಳಿಗೋಸ್ಕರ ಸಿದ್ಧವಾಗಿರುವ 'ಶಿವ'ನನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಸ್ವಯಂಕೃತ ಅಪರಾಧವೆನಿಸುತ್ತದೆ. ಉಳಿದವರದ್ದು ಅವರವರ ಭಾವಕ್ಕೆ, ಅವರವರ ಭಕುತಿಗೆ ಬಿಟ್ಟದ್ದು!

ವೆಬ್ದುನಿಯಾವನ್ನು ಓದಿ