ಸಾಗರ್ ಚಿತ್ರವಿಮರ್ಶೆ: ಬಣಗುಡದ ಬಣ್ಣದ ಲೋಕ

SUJENDRA


ಚಿತ್ರ: ಸಾಗರ್
ತಾರಾಗಣ: ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಹರಿಪ್ರಿಯಾ, ಸಂಜನಾ
ನಿರ್ದೇಶನ: ಎಂ.ಡಿ. ಶ್ರೀಧರ್
ಸಂಗೀತ: ಗುರುಕಿರಣ್

ಕೋಟಿ ರಾಮು ನಿರ್ಮಾಪಕರೆಂದ ಮೇಲೆ ಆ ಚಿತ್ರದ ಖದರ್ ಬೇರೆಯೇ ಆಗಿರುತ್ತದೆ. ಈ ಬಾರಿಯೂ ಅದು ಸುಳ್ಳಾಗಿಲ್ಲ. ರಾಮು ಭರವಸೆಗೆ ನಿರ್ದೇಶಕ ಎಂ.ಡಿ. ಶ್ರೀಧರ್ ಮೋಸ ಮಾಡದೆ, ಒಂದು ಅಚ್ಚುಕಟ್ಟಾದ ಕಮರ್ಷಿಯಲ್ ಚಿತ್ರವನ್ನು ನೀಡಿದ್ದಾರೆ.

ಕಥೆಯಲ್ಲೇನೂ ಅಂತಹ ವಿಶೇಷವಿಲ್ಲ. ವಿದೇಶದಲ್ಲಿ ಓದು ಮುಗಿಸಿ ಭಾರತಕ್ಕೆ ವಾಪಸಾಗುವ ಸಾಗರ್ (ಪ್ರಜ್ವಲ್ ದೇವರಾಜ್) ಊರಿನಲ್ಲಿ ಮನೆಯವರು ನಿಶ್ಚಯಿಸಿರುವ ಅತ್ತೆ ಮಗಳು ಪ್ರಿಯಾಂಕಾಳನ್ನು (ಹರಿಪ್ರಿಯಾ) ಮದುವೆಯಾಗಲು ಒಪ್ಪುವುದಿಲ್ಲ. ಆದರೆ ಅದನ್ನು ನೇರವಾಗಿ ಹೇಳದೆ ಸುತ್ತಿ ಬಳಸಿ ಯಾವುದೋ ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾನೆ.

ಒಂದಕ್ಕಿನ್ನೊಂದು ಸುಳ್ಳು ಹೇಳಿ ಕೊನೆಗೆ ಅದರಿಂದ ಎಂತಹ ಅಧ್ವಾನ ಸೃಷ್ಟಿಯಾಗುತ್ತದೆ ಅನ್ನೋದು ಮುಂದಿನ ಸ್ಟೋರಿ. ವಾಸ್ತವದಲ್ಲಿ ಸಾಗರ್‌ಗೆ ಪ್ರಿಯಾಂಕಾ ಇಷ್ಟವಿರುವುದಿಲ್ಲ ಅಷ್ಟೇ, ಆದರೆ ಯಾರ ಜತೆಗೂ ಸಂಬಂಧ ಇರುವುದಿಲ್ಲ. ಸಂಬಂಧವೇ ಇಲ್ಲದ ಕಾಜಲ್ (ರಾಧಿಕಾ ಪಂಡಿತ್) ಮನೆಗೂ ಬರುತ್ತಾಳೆ. ಅದಕ್ಕೆ ಕಾರಣ ಗೆಳತಿ ಜೆನ್ನಿಫರ್ (ಸಂಜನಾ). ನಂತರ ಅಲ್ಲಿ ಮಾಫಿಯಾ ಡಾನ್ ಎಂಟ್ರಿ ಆಗುತ್ತಾನೆ. ಮುಂದೇನಾಗುತ್ತದೆ ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಿ.

ಅಪರೂಪಕ್ಕೆಂಬಂತೆ ಸ್ವಮೇಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ ಶ್ರೀಧರ್. ಒಂದು ಕಮರ್ಷಿಯಲ್ ಚಿತ್ರದಲ್ಲಿ ಏನೆಲ್ಲ ಇರಬೇಕು ಎನ್ನುವುದನ್ನು ಚೆನ್ನಾಗಿಯೇ ಲೆಕ್ಕಾಚಾರ ಹಾಕಿದ್ದಾರೆ ನಿರ್ದೇಶಕರು. ಅವರ ಬೇಡಿಕೆಗಳಿಗೆಲ್ಲ ನಿರ್ಮಾಪಕ ರಾಮು ಹೂಂಗುಟ್ಟಿರುವುದು ಚಿತ್ರದುದ್ದಕ್ಕೂ ಗೋಚರವಾಗುತ್ತದೆ. ಆಕ್ಷನ್, ರೊಮ್ಯಾನ್ಸ್, ಸುಂದರ ತಾಣಗಳು, ಹಾಡುಗಳು, ಅದ್ಧೂರಿತನ ಹೀಗೆ ಯಾವುದರಲ್ಲೂ ಕಡಿಮೆಯೆನಿಸುವುದಿಲ್ಲ.

ಕಥೆಯಲ್ಲಿ ಹೊಸದಿಲ್ಲ ಎನ್ನುವುದನ್ನು ಕಂಪ್ಲೇಂಟಾಗಿ ಸ್ವೀಕರಿಸುವುದಕ್ಕಿಂತ, ನಿರೂಪನೆ ಚೆನ್ನಾಗಿದೆ ಎಂಬ ಕಾಂಪ್ಲಿಮೆಂಟನ್ನು ಒಪ್ಪಿಕೊಳ್ಳಬಹುದು. ಮೊದಲಾರ್ಧವಂತೂ ಸಾದಾಸೀದಾ. ಆದರೆ ದ್ವಿತೀಯಾರ್ಧದಲ್ಲೂ ಅದೇ ರೀತಿ ನೋಡಿಸಿಕೊಂಡು ಹೋಗುವ ಗುಣವಿಲ್ಲ. ಅಲ್ಲಲ್ಲಿ ಆಕಳಿಸುವಂತೆ ಮಾಡುತ್ತದೆ.

ಪ್ರಜ್ವಲ್ ನಿಜಕ್ಕೂ ಇಲ್ಲಿ ಸೂಪರ್ ಮ್ಯಾನ್. ಎಲ್ಲೂ ಯಾವುದರಲ್ಲೂ ಕಡಿಮೆಯಿಲ್ಲದಂತೆ ಅಭಿನಯಿಸಿದ್ದಾರೆ. ಅವರ ಸಾಹಸ ಶಿಳ್ಳೆ ಹೊಡೆಸಿದರೂ, ಅದಕ್ಕಿಂತ ರೊಮ್ಯಾನ್ಸೇ ವಾಸಿ ಎಂಬ ಭಾವನೆ ಹುಟ್ಟುತ್ತದೆ. ರಾಧಿಕಾ ಪಂಡಿತ್ ಕಣ್ಣುಗಳಲ್ಲೇ ಕೊಲ್ಲುತ್ತಾರೆ. ಹರಿಪ್ರಿಯಾ ಸುಂದರಿ ಮಾತ್ರವಲ್ಲ, ನಟನೆಗೂ ಸೈ ಎಂದು ನಿರೂಪಿಸಲು ಅವಕಾಶ ಸಿಕ್ಕಿದೆ. ಇನ್ನೊಬ್ಬ 'ಹೀರೋಯಿನ್' ಸಂಜನಾರದ್ದು ಈ ಹಿಂದೆ ಮಾಡಿದಂತೆ ಅದೇ ಪಾತ್ರ!

ಇನ್ನು ಕನ್ನಡಕ್ಕೆ ಮೊದಲ ಬಾರಿ ಬಂದಿರುವ ದೇವಗಿಲ್ ಇಲ್ಲಿ ಮಾಫಿಯಾ ಡಾನ್ ಪಾತ್ರ ಮಾಡಿದ್ದಾರೆ. ನಿರೀಕ್ಷೆ ದೊಡ್ಡದಿರುವುದರಿಂದಲೋ ಏನೋ, ಅವರ ಪಾತ್ರಕ್ಕೆ ಹೆಚ್ಚು ತೂಕವಿಲ್ಲ ಎನಿಸುತ್ತದೆ. ನಿರ್ದೇಶಕರ ಪ್ರಮಾದವೋ, ಭಾಷೆಯ ಸಮಸ್ಯೆಯೋ, ಅವರಿಂದ ಸೂಕ್ತ ಅಭಿನಯವೂ ಬಂದಿಲ್ಲ. ಅವರಿಗಿಂತ ತೆರೆಯ ಮೇಲೆ ಸ್ವಲ್ಪ ಹೊತ್ತಷ್ಟೇ ಕಾಣಿಸಿಕೊಳ್ಳುವ ಆದಿ ಲೋಕೇಶ್ ಓಕೆ. ಇನ್ನು ಹಾಸ್ಯಕ್ಕೆ ಪರಿಚಿತ ಮುಖಗಳಿಲ್ಲದೇ ಇರುವುದು ಕೊರತೆಯೆನಿಸುತ್ತದೆ.

ಗುರುಕಿರಣ್ ಮರಳಿ ಹಳಿಗೆ ಬಂದಂತಿದೆ. ಈಗಿನ ಟ್ರೆಂಡ್ ಫಾಲೋ ಮಾಡುವ ಟ್ಯೂನುಗಳನ್ನು ಹೊಸೆದು ಎರಡು-ಮೂರು ಹಾಡುಗಳಲ್ಲಿ ಕಾಲು ಕುಣಿಸುತ್ತಾರೆ.

ಒಟ್ಟಾರೆ ಇದೊಂದು ಫುಲ್ ಫ್ಯಾಮಿಲಿ ಪ್ಯಾಕೇಜ್. ಕುಟುಂಬ ಸಮೇತ ವೀಕೆಂಡ್ ಸವಿಯಲು ಹೊರಟರೆ ಮೋಸವಾಗದು.

ವೆಬ್ದುನಿಯಾವನ್ನು ಓದಿ