ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರದೇ ಇರುತ್ತಿದ್ದರೆ, 'ಸಾರಥಿ' ಸೂಪರ್ ಹಿಟ್ ಎಂದು ಈಗಲೇ ತೀರ್ಪು ನೀಡಬಹುದಿತ್ತು. ಇದು ದರ್ಶನ್ ಮತ್ತು ಅವರ ಸಿನಿಮಾಗಳ ವಿರೋಧಿಗಳೂ ಒಪ್ಪಿಕೊಳ್ಳುವ ಮತ್ತು ನಿರಾಕರಿಸಲು ಸಾಧ್ಯವೇ ಇಲ್ಲದ ಮಾತು!
ಇಡೀ ಸಿನಿಮಾ ಒಂದು ಮನರಂಜನೆಯ ಕೂಪ. ಅಷ್ಟೊಂದು ಸರಕುಗಳನ್ನು ನಿರ್ದೇಶಕ ದಿನಕರ್ ತೂಗುದೀಪ 'ಸಾರಥಿ'ಯಲ್ಲಿ ತುಂಬಿದ್ದಾರೆ. ಆರಂಭದಿಂದ ಅಂತ್ಯದವರೆಗೆ ಯಾವುದೇ ಹಂತದಲ್ಲೂ ಹುಳುಕುಗಳನ್ನು ಹುಡುಕಲು ಕಷ್ಟವೆನಿಸುವ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಈ ಹಿಂದೆ ಜೊತೆ ಜೊತೆಯಲಿ ಮತ್ತು ನವಗ್ರಹ ಎಂಬ ಭಿನ್ನ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದ ದಿನಕರ್, ತನ್ನ ತಮ್ಮನನ್ನು ಪ್ರತಿ ಫ್ರೇಮಿನಲ್ಲೂ ಮಿಂಚಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ತಾನು ಜೊಳ್ಳು ನಿರ್ದೇಶಕನಲ್ಲ ಎಂದು ಸ್ವಮೇಕ್ ಚಿತ್ರದೊಂದಿಗೆ ಸಾಬೀತು ಪಡಿಸಿದ್ದಾರೆ.
ನಿಜ ಜೀವನದಲ್ಲಿ ನೋಡುವುದು ಕಷ್ಟ ಎಂಬಂತಿರೋ ಆಟೋ ಡ್ರೈವರ್ ರಾಜಾ (ದರ್ಶನ್) ಪ್ರಾಮಾಣಿಕತೆಯಲ್ಲಿ ಅಪರಂಜಿ. ಹೀಗಿದ್ದವನು ರುಕ್ಮಿಣಿ (ದೀಪಾ ಸನ್ನಿಧಿ) ಪ್ರೀತಿಯ ಬಲೆಗೆ ಬೀಳುತ್ತಾನೆ. ಹಾಗೆ ಹುಡುಗಿಯ ಬೆನ್ನತ್ತಿ ಹೋದವನ ಬದುಕು ಬದಲಾಗುತ್ತದೆ. ಆಗಾಗ ಕಾಡುತ್ತಿದ್ದ ಭೂತಕಾಲದ ದರ್ಶನವಾಗುತ್ತದೆ. ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚುತ್ತವೆ.
ವಾಸ್ತವದಲ್ಲಿ ರಾಜಾ ಪಾಳೇಗಾರ ಸೂರ್ಯನಾರಾಯಣನ (ಶರತ್ ಕುಮಾರ್) ಮಗ. ಆತನ ಹೆಸರು ರಾಜಾ ಅಲ್ಲ, ಕೃಷ್ಣ. ಬಾಲ್ಯದಲ್ಲೇ ಪಿತೃಹತ್ಯೆಯ ಕಳಂಕ ಹೊತ್ತು ಮನೆಯಿಂದ ಮರೆಯಾದವನು. ಹಾಗೆ ಬೇರೊಂದು ಮನೆಯಲ್ಲಿ ತನ್ನ ಪೂರ್ವಾಪರ ಗೊತ್ತಿಲ್ಲದೆ ಬೆಳೆದಿದ್ದ ಕೃಷ್ಣ, ರಾಜಾ ಆಗಿ ಬದಲಾಗಿದ್ದ. ಕುಟುಂಬ ಕಲಹದ ಆಪತ್ತು ಊರಿನಿಂದ ನಾಪತ್ತೆಯಾಗಿದ್ದ ಬಾಲಕ ಕೃಷ್ಣನ ಹಣೆಗೆ ತಂದೆಯ ಕೊಲೆಯನ್ನು ಅಂಟಿಸಿತ್ತು.
ನಿಜಕ್ಕೂ ನಡೆದಿರುವುದು ಏನು ಎಂಬುದನ್ನು ತಿಳಿದುಕೊಳ್ಳುವ ರಾಜಾ ಆಲಿಯಾಸ್ ಕೃಷ್ಣನದ್ದು ನಂತರ ಸೇಡಿನ ಮಾರ್ಗ. ನಾಯಕನೆಂದ ಮೇಲೆ ಅದರಲ್ಲಿ ಯಶಸ್ವಿಯೂ ಆಗುತ್ತಾನೆ. ಇದು ಚಿತ್ರದ ಕಥೆ.
ಇಷ್ಟೂ ಕಥೆಯಲ್ಲಿ ಹೊಸತನವಿಲ್ಲ ಎಂದು ನೀವು ಅಂದುಕೊಂಡಿದ್ದರೆ, ಅದು ನಿಜ. ಆದರೆ ಅದನ್ನು ತೆರೆಯ ಮೇಲೆ ತೋರಿಸಿರುವ ರೀತಿಯನ್ನು ಮೆಚ್ಚದೇ ಇರಲು ಸಾಧ್ಯವಿಲ್ಲ. ನಿರೂಪಣೆಯಲ್ಲಿ, ಫ್ಲ್ಯಾಶ್‌ಬ್ಯಾಕ್‌ಗಳನ್ನು ತೋರಿಸುವಲ್ಲಿ, ಆಕ್ಷನ್ ದೃಶ್ಯಗಳಲ್ಲಿ, ಹಾಡುಗಳಲ್ಲಿ, ನಟನೆಯಲ್ಲಿ -- ಹೀಗೆ ಯಾವುದರಲ್ಲೂ ಯಾರೂ ಹಿಂದೆ ಬಿದ್ದಿಲ್ಲ. ಇತರ ಯಾವುದೇ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುವಷ್ಟು ಮನರಂಜನೆಯ ಅಂಶಗಳಿವೆ.
ಶಂಕರ್‌ನಾಗ್ ಪುಣ್ಯತಿಥಿಯ ದಿನವೇ ಬಿಡುಗಡೆಯಾದ ಚಿತ್ರದಲ್ಲಿ ಅವರಿಗೆ ಹಾಡಿನ ಮೂಲಕ ಗೌರವ ಅರ್ಪಿಸಲಾಗಿದೆ. ದರ್ಶನ್ ಜತೆ ಇಲ್ಲಿ ಶಂಕರ್‌ನಾಗ್ ಕೂಡ ಕುಣಿಯುತ್ತಾರೆ. ಗ್ರಾಫಿಕ್ ಚಮತ್ಕಾರ ಕಣ್ಮನ ಸೆಳೆಯುವುದರೊಂದಿಗೆ, ಚಪ್ಪಾಳೆಯನ್ನೂ ಗಿಟ್ಟಿಸುತ್ತದೆ.
ದರ್ಶನ್ ಬಾಯಿಯಿಂದ ಹೊರ ಬರುವ ಕೆಲವು ಡೈಲಾಗ್‌ಗಳು ಈಗಿನ ಸ್ಥಿತಿಯಲ್ಲಿ ಹಾಸ್ಯಾಸ್ಪದವೆನಿಸುತ್ತವೆ. ಆದರೆ ಒಬ್ಬ ಕಲಾವಿದನಾಗಿ ಅವರ ನಟನೆಯನ್ನು ದೂರಲಾಗದು. ಅದು ಹೊಡೆ-ಬಡಿ ದೃಶ್ಯ, ಭಾವನಾತ್ಮಕ ಸನ್ನಿವೇಶ ಅಥವಾ ನೃತ್ಯವಿರಬಹುದು, ಯಾವುದರಲ್ಲೂ ದರ್ಶನ್ ಕಡಿಮೆಯೆನಿಸಿಲ್ಲ.
ದೀಪಾ ಸನ್ನಿಧಿಯ ದರ್ಶನಕ್ಕೆ 'ಪರಮಾತ್ಮ'ನೇ ಬರಬೇಕು ಎನ್ನುತ್ತಿದ್ದವರು ನಿರ್ಧಾರ ಬದಲಾಯಿಸಿಕೊಳ್ಳಬಹುದು. ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ಮೊದಲ ಚಿತ್ರದಲ್ಲೇ ಭರವಸೆಯ ಛಾಪನ್ನು ಬಲವಾಗಿ ಒತ್ತಿದ್ದಾರೆ.
ದರ್ಶನ್ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕರಾಗಿರುವ ಹರಿಕೃಷ್ಣರ ಮೂರು ಹಾಡುಗಳು ಸೂಪರ್. ಅಪ್ಪನ ಪಾತ್ರದಲ್ಲಿ ಶರತ್ ಕುಮಾರ್ ಅವರದ್ದು ಅಮೋಘ ಅಭಿನಯ. ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.