ಬೆಂಗಳೂರು: ಬದ್ಮಾಶ್.. ಹೆಸರೇ ಹೇಳುವ ಹಾಗೆ ಇದೊಂದು ಮಾಸ್ ಸಿನಿಮಾ. ದುಷ್ಟರ ಕಪಿ ಮುಷ್ಟಿಯಲ್ಲಿರುವ ವಜ್ರದ ಹರಳನ್ನು ಸರ್ಕಾರದ ಕೈಗೊಪ್ಪಿಸುವುದು ಒಟ್ಟಾರೆ ಕತೆ. ಒಟ್ಟಾರೆ ಪೊಲಿಟಿಕಲ್ ಡ್ರಾಮಾ..
ನಾಯಕ ಮೂಲತಃ ಒಬ್ಬ ಕ್ರಿಕೆಟಿಗ. ಹಣ ಗಳಿಸಲು ಡೀಲ್ ಮಾಡಿಕೊಳ್ಳುವ ಗಲ್ಲಿ ಕ್ರಿಕೆಟಿಗ. ಅವನಿಗೆ ಜತೆಯಾಗುವವಳು ರೇಡಿಯೋ ಜಾಕಿ ನಾಯಕಿ. ಅವರಿಬ್ಬರ ಪ್ರೀತಿ, ವಿರಹದಲ್ಲೇ ಫಸ್ಟ್ ಹಾಫ್ ಮುಗಿದು ಹೋಗುತ್ತದೆ. ಮೊದಲಾರ್ಧ ನೋಡಿದಾಗ ಇದು ಮಾಮೂಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸಿನಿಮಾವೇನೋ ಅನಿಸುವುದು.
ಆದರೆ ಬದಲಾದ ಸನ್ನಿವೇಶಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ನಾಯಕ ವೇಷ ಬದಲಾಯಿಸುತ್ತಾನೆ. ದ್ವಿತೀಯಾರ್ಧದಲ್ಲಿ ಬರುವ ವಜ್ರದ ಹರಳಿನ ಕತೆ ಚಿತ್ರಕ್ಕೆ ಟ್ವಿಸ್ಟ್ ಒದಗಿಸುತ್ತದೆ. ಕ್ಲೈಮ್ಯಾಕ್ಸ್ ಕುತೂಹಲ ಕೆರಳಿಸುತ್ತದೆ.
ಒಟ್ಟಾರೆಯಾಗಿ ಧನಂಜಯ್ ಗೆ ಹೇಳಿ ಮಾಡಿಸಿದಂತಹ ಪಾತ್ರವಿದು. ಅವರ ವ್ಯಕ್ತಿತ್ವಕ್ಕೂ ಖಡಕ್ ಪಾತ್ರಕ್ಕೂ ಹೊಂದಿಕೆಯಾಗುತ್ತದೆ. ಅವರ ಪಂಚಿಂಗ್ ಡೈಲಾಗ್ ಗಳು, ಫೈಟಿಂಗ್ ಶಿಳ್ಳೆ ಗಿಟ್ಟಿಸುತ್ತದೆ. ನಾಯಕಿ ಸಂಚಿತಾ ಶೆಟ್ಟಿ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಖಳನಟನಾಗಿ ಅಚ್ಯುತ್ ಕುಮಾರ್, ಹಾಸ್ಯ ನಟನಾಗಿ ಜಹಾಂಗೀರ್, ಪೋಷಕ ಪಾತ್ರದಲ್ಲಿ ರಮೇಶ್ ಪಂಡಿತ್, ಪ್ರಕಾಶ್ ಬೆಳವಾಡಿ, ಬಿ.ಸುರೇಶ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬದ್ಮಾಶ್ ನ ಅಬ್ಬರ ನೋಡಲು ಒಮ್ಮೆ ಥಿಯೇಟರ್ ಕಡೆಗೆ ಚಿತ್ತೈಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ