ವಿಕ್ರಾಂತ್ ರೋಣ ಸಿನಿಮಾ ಹೇಗಿದೆ? ಫಸ್ಟ್ ಡೇ ಫಸ್ಟ್ ಶೋ ಬಳಿಕ ಇಲ್ಲಿದೆ ವಿಮರ್ಶೆ
ಗುರುವಾರ, 28 ಜುಲೈ 2022 (09:30 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೂ ಭರ್ಜರಿಯಾಗಿ ಎನ್ನುತ್ತಿದ್ದಾರೆ ಸುದೀಪ್ ಫ್ಯಾನ್ಸ್. ವಿಕ್ರಾಂತ್ ರೋಣ ಮೊದಲ ದಿನದ ಮೊದಲ ಶೋ ನೋಡಿದ ಬಳಿಕ ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಈ ಮೂಲಕ ಪ್ಯಾನ್ ಇಂಡಿಯಾ ಹಿಟ್ ಸಿನಿಮಾಗಳ ಸಾಲಿಗೆ ವಿಕ್ರಾಂತ್ ರೋಣ ಸೇರ್ಪಡೆಯಾಗಲಿದೆ ಎನ್ನುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ಸುದೀಪ್ ಆವರಿಸಿಕೊಂಡಿದ್ದಾರೆ. ಅವರ ಆಕ್ಷನ್, ಥ್ರಿಲ್ಲಿಂಗ್ ಕತೆ ಜೊತೆಗೆ 3ಡಿ ಇಫೆಕ್ಟ್ ನಲ್ಲಿ ನೋಡುವ ಮಜಾ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದಿದೆ.
ಕತೆಗೆ ತಕ್ಕ ಹಿನ್ನಲೆ ಸಂಗೀತಕ್ಕೆ ಫುಲ್ ಮಾರ್ಕ್ಸ್ ನೀಡುವಂತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಕತೆ ಸಾಗುತ್ತದೆ. ಕೆಲವು ದೃಶ್ಯಗಳು ಅನಗತ್ಯ ಎನಿಸಿದರೂ ಅದನ್ನು ನಿರ್ದೇಶಕರು ಬೇಗನೇ ಮರೆಸಿಬಿಡುತ್ತಾರೆ. ಕತೆ, ಸ್ಕ್ರೀನ್ ಪ್ಲೇ, ಸಂಗೀತದ ಜೊತೆಗೆ ಕ್ಯಾಮರಾ ಕೈಚಳಕವೂ ಅತ್ಯುತ್ತಮವಾಗಿದೆ. ಎರಡನೇ ಭಾಗ ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲದಲ್ಲಿರಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ 3 ಡಿ ವರ್ಷನ್ ನಲ್ಲಿ ಬಂದ ಅತ್ಯುತ್ತಮ ಸಿನಿಮಾಗಳಲ್ಲಿ ಇದೂ ಕೂಡಾ ಒಂದಾಗಲಿದೆ ಎನ್ನಬಹುದು. 3 ಡಿ ಇಫೆಕ್ಟ್, ಹಿನ್ನಲೆ ಸಂಗೀತದ ಇಫೆಕ್ಟ್ ಜೊತೆಗೆ ಸಿನಿಮಾದ ಮಜಾ ಪಡೆಯಬೇಕೆಂದರೆ ಥಿಯೇಟರ್ ಗೇ ಹೋಗಿ ವೀಕ್ಷಿಸುವುದು ಉತ್ತಮ.