ಕಂಠೀರವ ಆಕ್ಷನ್ ಪ್ರಿಯರಿಗೆ, ವಿಜಯ್ ಅಭಿಮಾನಿಗಳಿಗೆ

PR
ಚಿತ್ರ: ಕಂಠೀರವ
ತಾರಾಗಣ: ವಿಜಯ್, ಶುಭಾ ಪೂಂಜಾ, ರಿಷಿಕಾ ಸಿಂಗ್
ನಿರ್ದೇಶನ: ತುಷಾರ್ ರಂಗನಾಥ್
ಸಂಗೀತ: ಚಕ್ರಿ

ದುನಿಯಾ ವಿಜಯ್ ಅಭಿನಯದ 'ಕಂಠೀರವ' ಪರಿಪೂರ್ಣ ಆಕ್ಷನ್, ಕಮರ್ಷಿಯಲ್ ಚಿತ್ರ. ಆಕ್ಷನ್ ಪ್ರಿಯ ಪ್ರೇಕ್ಷಕರಿಗೆ ಹಾಗೂ ವಿಜಯ್ ಅಭಿಮಾನಿಗಳಿಗೆ ರಸದೌತಣ. ಲವ್, ಸೆಂಟಿಮೆಂಟ್ ಚಿತ್ರದಲ್ಲಿರುವುದು ಪ್ಲಸ್ ಪಾಯಿಂಟ್. ವಿಜಯ್ ನಟನೆ ಬಗ್ಗೆ ಎರಡು ಮಾತಿಲ್ಲ.

ಕ್ರಿಯಾಶೀಲತೆಯನ್ನು ಬದಿಗೊತ್ತಿ ರಿಮೇಕ್ ಸುತ್ತಿರುವ ನಿರ್ದೇಶಕ ತುಷಾರ್ ರಂಗನಾಥ್ ಹಿಟ್ ಚಿತ್ರಕ್ಕೆ ಬೇಕಾದ ಎಲ್ಲಾ ಎಲಮೆಂಟ್‌ಗಳನ್ನೂ ಸೇರಿಸಿದ್ದಾರೆ. ಮೂಲ ಚಿತ್ರಕ್ಕಿಂತ ಯಾವುದರಲ್ಲೂ ಕಡಿಮೆಯಾಗದಂತೆ ನಿರೂಪಿಸಿದ್ದಾರೆ.

ಅವಿಭಕ್ತ ಕುಟುಂಬದ ಸುತ್ತ ಹೆಣೆದಿರುವ ಚಿತ್ರದಲ್ಲಿ ಕಂಠೀರವ (ವಿಜಯ್) ಒಬ್ಬ ಅನಾಥ. ಈ ಕುಟುಂಬದೊಡೆಯ ರಾಮಚಂದ್ರಪ್ಪ (ಶ್ರೀನಿವಾಸಮೂರ್ತಿ). ಆತನ ಮೊಮ್ಮಗಳು ಕಸ್ತೂರಿ (ರಿಷಿಕಾ), ಕಂಠೀರವನನ್ನು ಪ್ರೀತಿಸುತ್ತಾಳೆ. ಇದನ್ನು ಸಹಿಸದ ರಾಮಚಂದ್ರಪ್ಪ ಕಂಠೀರವನನ್ನು ಮನೆಯಿಂದ ಹೊರಹಾಕುತ್ತಾನೆ.

ಕಂಠೀರವ ಊರು ಬಿಟ್ಟು ತಿರುವನಂತಪುರಕ್ಕೆ ಹೋಗುತ್ತಾನೆ. ಅಲ್ಲಿ ಕಥೆ ಹೊಸ ತಿರುವು ತೆಗೆದುಕೊಳ್ಳುತ್ತದೆ. ರಾಮಚಂದ್ರಪ್ಪನ ಮಗಳು ಸರಸ್ವತಿ (ಯಮುನಾ) ಅಲ್ಲಿ ಎದುರಾಗುತ್ತಾಳೆ. ತಂದೆ ರಾಮಚಂದ್ರಪ್ಪನ ಇಷ್ಟಕ್ಕೆ ವಿರೋಧವಾಗಿ ಅರವಿಂದ್‌(ಭಾನುಚಂದರ್)ನನ್ನು ಪ್ರೀತಿಸಿ ಮದುವೆಯಾಗಿ ತಿರುವನಂತಪುರ ಸೇರಿದ್ದವಳು ಸರಸ್ವತಿ. ಹೇಗಾದರೂ ಮಾಡಿ ಈ ತಂದೆ-ಮಗಳನ್ನು ಒಂದುಗೂಡಿಸಬೇಕೆಂದು ನಿರ್ಧರಿಸುತ್ತಾನೆ ಕಂಠೀರವ.

ಇಲ್ಲಿ ಸರಸ್ವತಿಯ ಮಗಳು ಇಂದಿರಾಳನ್ನು (ಶುಭಾ ಪೂಂಜಾ) ಭೇಟಿಯಾಗುತ್ತಾನೆ. ಕಂಠೀರವನನ್ನು ಇಂದಿರಾ ಪ್ರೀತಿಸಲು ಶುರು ಮಾಡುತ್ತಾಳೆ. ಆದರೆ, ಈ ಮಧ್ಯೆ ಪರಿಸ್ಥಿಯ ಒತ್ತಡದಲ್ಲಿ ಭೂಗತಲೋಕದ ದೊರೆ ಬಾಲನ್ ನಾಯರ್ ಮತ್ತು ಆತನ ಸಹೋದರ ಭಯ್ಯಾ ಸಾಬ್ ಸುಳಿಯಲ್ಲಿ ಕಂಠೀರವ ಸಿಕ್ಕಿಕೊಳ್ಳುತ್ತಾನೆ.

ಮುಂದೆ ಕಂಠೀರವ ಭೂಗತಲೋಕದಿಂದ ಹೇಗೆ ಹೊರಬರುತ್ತಾನೆ? ಇಬ್ಬರ ಪ್ರೀತಿಯ ಬಲೆಯಲ್ಲಿ ಯಾರಿಂದ ಬಿಡಿಸಿಕೊಂಡು ಯಾರನ್ನು ವರಿಸುತ್ತಾನೆ? ತಂದೆ-ಮಗಳನ್ನು ಒಟ್ಟಿಗೆ ಸೇರಿಸುತ್ತಾನಾ? ರಾಮಚಂದ್ರಪ್ಪ ಮತ್ತೆ ಕಂಠೀರವನನ್ನು ಮನೆಗೆ ಸೇರಿಸಿಕೊಳ್ಳುತ್ತಾನಾ? ಇದನ್ನು ಪ್ರೇಕ್ಷಕರು ಬೆಳ್ಳಿಪರದೆ ಮೇಲೆ ನೋಡಬೇಕು.

ಒಟ್ಟಾರೆ ಚಿತ್ರದಲ್ಲಿ ಮನರಂಜನೆ ಸರಕನ್ನು ತುಂಬಲಾಗಿದೆ. ಶುಭಾ ಪೂಂಜಾ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಿಷಿಕಾ ಪ್ರಥಮ ಎಂಟ್ರಿಯಲ್ಲೇ ಇಂಪ್ರೆಸ್ ಆಗಿದ್ದಾರೆ. ಶ್ರೀನಿವಾಸಮೂರ್ತಿ ಹಿರಿಯ ನಟ ಪಾತ್ರಕ್ಕೆ ಜೀವ ತುಂಬಿದ್ದಾರೆ. ಛಾಯಾಗ್ರಹಣ ಉತ್ತಮ. ಚಕ್ರಿ ಸಂಗೀತ ಚೆನ್ನಾಗಿದೆ. ಒಂದು ಬಾರಿ ನೋಡಬಹುದಾದ ಚಿತ್ರವಿದು.

ವೆಬ್ದುನಿಯಾವನ್ನು ಓದಿ