ಕಳ್ಳ ಸುಳ್ಳ ಮಳ್ಳ ಚಿತ್ರವಿಮರ್ಶೆ; ನಗದೆ ಬೇರೆ ದಾರಿಯಿಲ್ಲ!
PR
ಸತತ ಸೋಲುಗಳು ಮತ್ತು ಕಳಪೆ ಚಿತ್ರಗಳಿಂದ ಕಂಗೆಟ್ಟಿದ್ದ ಮೂವರು ನಾಯಕರಾದ ರವಿಚಂದ್ರನ್, ರಮೇಶ್ ಮತ್ತು ವಿಜಯ ರಾಘವೇಂದ್ರರಿಗೆ 'ಕಳ್ಳ ಸುಳ್ಳ ಮಳ್ಳ' ಜೀವದಾನ ನೀಡಿದೆ ಅಂತ ಕಣ್ಮುಚ್ಚಿ ಹೇಳಿ ಬಿಡುವಷ್ಟು ಚಿತ್ರ ಮಜಬೂತಾಗಿದೆ. ಥಿಯೇಟರಿನಿಂದ ಹೊರ ಬಂದ ಯಾವ ಪ್ರೇಕ್ಷಕನೂ ಜೊಳ್ಳು ಮೋರೆ ಹಾಕಿಕೊಂಡು ಹೋಗದೇ, ಸೂಪರ್ ಕಾಮಿಡಿ ಅಂತ ಹೇಳಿರುವುದೇ ಇದಕ್ಕೆ ಸಾಕ್ಷಿ.
ಹಿಂದಿಯ 'ನೋ ಎಂಟ್ರಿ' ರಿಮೇಕ್ ಕಳ್ಳ ಸುಳ್ಳ ಮಳ್ಳ. ಇಲ್ಲಿ ರಮೇಶ್ (ರಮೇಶ್) ಪತ್ರಕರ್ತ. ಆತನ ಪತ್ನಿಗೆ (ಯಜ್ಞಾ ಶೆಟ್ಟಿ) ಗಂಡನ ಮೇಲೆ ವಿಪರೀತ ಸಂಶಯ. ಇದ್ದೆಲ್ಲ ಹುಡುಗಿಯರ ಜತೆ ಸಂಬಂಧವಿದೆ ಅನ್ನೋ ಹುಳ ಯಾವತ್ತೂ ಕೊರೆಯುವ ತಲೆ ಆಕೆಯದ್ದು. ಆದರೆ ವಾಸ್ತವದಲ್ಲಿ, ರಮೇಶ್ ಇನ್ನೊಬ್ಬ ಹುಡುಗಿಯನ್ನು ಕಣ್ಣೆತ್ತಿಯೂ ನೋಡಿದವನಲ್ಲ.
ಆದರೆ ರವಿ (ರವಿಚಂದ್ರನ್) ಹಾಗಲ್ಲ. ಯಾವುದೇ ಸಮುದ್ರವನ್ನು ಈಜಿ ದಡ ಸೇರುವ ಜಾತಿಗೆ ಸೇರಿದವನು. ಅತ್ತ ಹೆಂಡತಿಗೆ (ಮಾಳವಿಕಾ) ತಾನು ಪ್ರಾಮಾಣಿಕ ಅಂತ ತೋರಿಸುತ್ತಲೇ, ಇತ್ತ ಪರಸ್ತ್ರೀಯರ ಜತೆ ಸರಸವಾಡುತ್ತಿದ್ದ. ಹೀಗಿದ್ದ ರವಿಯನ್ನು ಹೇಗಾದರೂ ಮಾಡಿ ರೆಡ್ ಹ್ಯಾಂಡಾಗಿ ಹಿಡಿಯಬೇಕು ಅನ್ನೋದು ರಮೇಶ್ ಬಯಕೆ.
ರಮೇಶ್ನ ಫೋಟೋಗ್ರಾಫರ್ ರಘು (ವಿಜಯ ರಾಘವೇಂದ್ರ) ಏನೋ ಮಾಡಲು ಹೋಗಿ ಸಂಜನಾ (ರಿಷಿಕಾ) ಅನ್ನೋ ಸೈಕಾಲಜಿ ವಿದ್ಯಾರ್ಥಿನಿಯ ಮೋಹದ ಪಾಶಕ್ಕೆ ಬೀಳುತ್ತಾನೆ.
ತನ್ನ ಲೀಲೆಗಳನ್ನು ಪತ್ನಿಗೆ ಹೇಳಿದ್ದ ರಮೇಶ್ಗೆ ತಕ್ಕ ಪಾಠ ಕಲಿಸಲು ರವಿ ಮುಂದಾಗುತ್ತಾನೆ. ಆ ಹಾದಿಯಲ್ಲಿ ರಿಷಿಕಾ, ರಾಗಿಣಿ ಸಿಗುತ್ತಾರೆ. ನಂತರ ಪೇಚಿಗೆ ಸಿಲುಕುವ ಸರದಿ ರಮೇಶ್ನದ್ದು. ಒಂದು ಸುಳ್ಳನ್ನು ನಿಜವೆಂದು ತೋರಿಸಲು ಹೋಗಿ ನೂರು ಸುಳ್ಳು ಹೇಳುತ್ತಾನೆ. ಉಳಿದವರದ್ದೂ ಅದೇ ಕಥೆ. ಕೊನೆಗೂ ಕಳ್ಳ ಸುಳ್ಳ ಮಳ್ಳರ ನಿಜ ಬಣ್ಣ ಅವರ ಪತ್ನಿಯರಿಗೆ ತಿಳಿಯುತ್ತದೆ.
ಕಥೆಯೇನೂ ಹೊಸತಲ್ಲ. ಆದರೆ ನಿರೂಪನೆ, ಕಾಮಿಡಿ ಟೈಮಿಂಗ್ ಅತ್ಯುತ್ತಮವಾಗಿದೆ. ಸೀನಿಯರ್ ನಟರಿದ್ದರೂ, ಅವರನ್ನು ನಿರ್ದೇಶಕ ಉದಯ ಪ್ರಕಾಶ್ ಚೆನ್ನಾಗಿಯೇ ಮ್ಯಾನೇಜ್ ಮಾಡಿದ್ದಾರೆ. ತುಪ್ಪ ಬೇಕಾ ತುಪ್ಪಾ ಅಂತ ರಾಗಿಣಿ ಮೋಡಿ ಮಾಡಿದರೆ, ರಿಷಿಕಾ ಸಿಂಗ್ ಅವರಿಗೆ ಪೈಪೋಟಿ ನೀಡುತ್ತಾರೆ. ಅಲೆಕ್ಸ್ ಪೌಲ್ ಸಂಗೀತದಲ್ಲಿ ಮೂಡಿ ಬಂದಿರುವ ಎರಡು ಹಾಡುಗಳೂ ಇದಕ್ಕೆ ಕಾರಣ.
ರವಿಚಂದ್ರನ್, ರಮೇಶ್ ಮತ್ತು ವಿಜಯ ರಾಘವೇಂದ್ರರ ನಟನೆ ಬಗ್ಗೆ ಎರಡು ಮಾತಿಲ್ಲ. ಮೂವರೂ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇಲ್ಲಿ ಹಾಸ್ಯ ಉಕ್ಕಿಸುವ ಚುಟುಕು ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶ್ರನ್ನು ಮರೆಯಲಾಗದು.
ಚಿತ್ರಮಂದಿರದಲ್ಲಿದ್ದ ಅಷ್ಟೂ ಹೊತ್ತು ಬೋರ್ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ನಿರ್ದೇಶಕರು. ರಿಮೇಕ್ ಆಗಿದ್ದರೂ, ಮೊದಲ ಪ್ರಯತ್ನದಲ್ಲೇ ಉದಯ ಪ್ರಕಾಶ್ ಗೆದ್ದಿದ್ದಾರೆ. ಹಲವು ಸಮಯದ ನಂತರ ಉತ್ತಮ ಹಾಸ್ಯ ಚಿತ್ರವೊಂದನ್ನು ನೀಡಿದ್ದಾರೆ.
ಹೊಸದಾಗಿ ಮದುವೆಯಾದವರಿದ್ದರೆ, ಗಂಡ-ಹೆಂಡತಿಯ ನಡುವೆ ಸಂಶಯದ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕಿದ್ದರೆ, ಉತ್ತಮ ಸಂದೇಶವೊಂದು ಕೊನೆಗೆ ಬೇಕಿದ್ದರೆ ಥಿಯೇಟರಿನತ್ತ ದೌಡಾಯಿಸಬಹುದು.
ಚಿತ್ರ: ಕಳ್ಳ ಸುಳ್ಳ ಮಳ್ಳ ತಾರಾಗಣ: ರವಿಚಂದ್ರನ್, ರಮೇಶ್, ವಿಜಯ ರಾಘವೇಂದ್ರ, ರಾಗಿಣಿ, ರಿಷಿಕಾ, ಯಜ್ಞಾ ಶೆಟ್ಟಿ ನಿರ್ದೇಶನ: ಉದಯ ಪ್ರಕಾಶ್ ಸಂಗೀತ: ಅಲೆಕ್ಸ್ ಪೌಲ್