ಕಾಂಚಾಣ ಚಿತ್ರವಿಮರ್ಶೆ; ಹಣ ಪೋಲು ಮಾಡಬೇಡಿ!

PR


ಚಿತ್ರ: ಕಾಂಚಾಣ
ತಾರಾಗಣ: ದಿಗಂತ್, ರಾಗಿಣಿ
ನಿರ್ದೇಶನ: ಶ್ರೀಗಣೇಶ್
ಸಂಗೀತ: ಹೃಷಿಕೇಶ್ ಹರಿ

'ಪುತ್ರ', 'ತಾರೆ'ಗಳು ಬಿಡುಗಡೆಯಾದ ಬೆನ್ನಿಗೆ ತೆರೆಗೆ ಬಂದಿರುವ 'ಕಾಂಚಾಣ' ಸ್ವತಃ ದಿಗಂತ್‌ ನಿರೀಕ್ಷೆಗಳನ್ನು ಕಳೆದುಕೊಂಡಿರುವ ಚಿತ್ರ. ಅದು ಸರಿ ಎಂಬಂತೆ ನಿರ್ದೇಶಕರೂ ತನ್ನ ಚಾಕಚಕ್ಯತೆ ಮೆರೆದಿದ್ದಾರೆ. ಪ್ರೇಕ್ಷಕ ಮಹಾಪ್ರಭುಗಳು ಇವರಿಗಿಂತಲೂ ಬುದ್ಧಿವಂತರಾಗಿರುತ್ತಾರೆ. ಆದರೆ ನಿರ್ಮಾಪಕರ ಗತಿ?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದು ಈ ವಾರ ತೆರೆ ಕಂಡಿರುವ ದಿಗಂತ್-ರಾಗಿಣಿ ಪ್ರಮುಖ ಪಾತ್ರಗಳಲ್ಲಿರುವ 'ಕಾಂಚಾಣ' ಚಿತ್ರದ ವ್ಯಥೆ. ಟಿವಿಗಳಲ್ಲಿ ಯಾವತ್ತೋ ಬಂದು ಹೋದ ಬಕ್ರಾ ಕಾರ್ಯಕ್ರಮಗಳನ್ನೇ ಆಧಾರವಾಗಿಟ್ಟುಕೊಂಡು ಮಾಡಲಾಗಿರುವ ಎಡಬಿಡಂಗಿ ಸಿನಿಮಾ. ಒಂದು ಕಡೆಯಿಂದ ಭಟ್ಟರು ಮತ್ತು ಅವರ ಶಿಷ್ಯರ ಕ್ಯಾಂಪಿನಲ್ಲಿ ಒಳ್ಳೆ ಚಿತ್ರಗಳನ್ನೇ ನೀಡುತ್ತಾ ಬಂದಿರುವ ದಿಗಂತ್, ಕಳೆದ ಮೂರು ವಾರಗಳಿಂದ ಬಿಡುಗಡೆಯಾದ ಹ್ಯಾಟ್ರಿಕ್ ಕೆಟ್ಟ ಚಿತ್ರಗಳಿಂದ (ಇದ್ದುದರಲ್ಲಿ ರಿಮೇಕ್ 'ಪುತ್ರ' ವಾಸಿ) ಕಳೆದುಕೊಂಡಿರುವುದು ಬಹಳ.

ವೆಂಕಿ (ದಿಗಂತ್), ನಾಣಿ ಮತ್ತು ಸತೀಶ್ 'ಬಕ್ರಾ' ಕಾರ್ಯಕ್ರಮವನ್ನು ನಡೆಸುವವರು. ಅವರಿಗೊಬ್ಬ ತಲೆಕೆಟ್ಟ ಬಾಸ್. ವೆಂಕಿಗೊಬ್ಬಳು ಬೇಬಿ (ರಾಗಿಣಿ) ಎಂಬ ಪ್ರೇಯಸಿ. ಹಣದ ಹಿಂದೆ ಬೀಳುವ ಇವರು ಯಾವ್ಯಾವ ತೊಂದರೆಗಳನ್ನು ಎದುರಿಸುತ್ತಾರೆ ಅನ್ನೋದು ಕಥೆ. ಈ ನಡುವೆ ದಗಲ್ಬಾಜಿ, ಆರ್‌ಬಿಐ ಅಧಿಕಾರಿಗಳು, ಇನ್ನೊಂದು ಗ್ಯಾಂಗ್ ಬಂದು ಹೋಗುತ್ತದೆ. ಕೊನೆಗೆ ಚಿತ್ರವನ್ನು ಮುಗಿಸಬೇಕೆನ್ನುವಾಗ ನಿರ್ದೇಶಕರು ಏನೇನೋ ಮಾಡಿ ಎಂಡ್ ಅನ್ನೋದನ್ನು ತೋರಿಸುತ್ತಾರೆ.

ನಿರ್ದೇಶಕ ಶ್ರೀಗಣೇಶ್ ಅವರಿಗೆ ನಿರ್ದೇಶನದ ಗಂಧ ಗಾಳಿ ಇದ್ದಂತಿಲ್ಲ. ಬಹುತೇಕ ದೃಶ್ಯಗಳು ಬಿಡಿ ಬಿಡಿಯಾಗಿ ಕಾಣುತ್ತವೆ. ಬಕ್ರಾ ಕಾರ್ಯಕ್ರಮವನ್ನೇ ಚಿತ್ರಿಸಲು ಹೋಗಿರುವ ಶ್ರೀಗಣೇಶ್ ಸ್ವತಃ ತಾನೇ ಆಹಾರವಾಗಿದ್ದಾರೆ ಅಂದರೂ ಅತಿಶಯೋಕ್ತಿಯಲ್ಲ.

ಇಮೇಜ್‌ಗೆ ಒಂಚೂರೂ ಹೊಂದಿಕೊಳ್ಳದ ದಿಗಂತ್ ಪಾಲಿಗೆ ಈ ಚಿತ್ರ ಹತ್ತು ಪ್ಲಸ್ ಹನ್ನೊಂದು, ಅಷ್ಟೇ. ಗ್ಲಾಮರಸ್ ಕ್ವೀನ್ ಆಗಿ ಹೊರ ಹೊಮ್ಮಿರುವ ರಾಗಿಣಿಗೆ ಇದು ಮಹತ್ವದ ಹಿನ್ನಡೆ. ರಂಗಾಯಣ ರಘು, ಸತೀಶ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕಿರಣ್ ಪಾತ್ರದ ಔಚಿತ್ಯವನ್ನು ಸ್ವತಃ ನಿರ್ದೇಶಕರೇ ಹೇಳಬೇಕು.

ಋಷಿಕೇಶ್ ಹರಿ ಸಂಗೀತದ ಎರಡು ಹಾಡುಗಳು ಓಕೆ. ಸುಂದರನಾಥ ಸುವರ್ಣರ ಕ್ಯಾಮರಾ ಕಣ್ಣುಗಳು ಬಳಲಿದಂತಿವೆ. ಸಂಕಲನವೂ ಅಷ್ಟೇ.

ಕಾಂಚಾಣ ಎಂದರೆ ಹಣ. ಜೀವನದಲ್ಲಿ ಹಣ ಎಷ್ಟು ಮುಖ್ಯ ಎನ್ನುವುದನ್ನು ನಿರ್ದೇಶಕ ಶ್ರೀಗಣೇಶ್ ಹೇಳಲು ಹೊರಟಿದ್ದಾರೆ. ಇದನ್ನು ಸಾಕಾರಗೊಳಿಸಲು ಹಣ ಸುರಿದಿರುವುದು ಬಿ.ಎನ್. ಶ್ರೀನಾಥ್ ರೆಡ್ಡಿ. ಟಿವಿ ಹಕ್ಕುಗಳಿಗಾಗಿಯೇ ನಿರ್ಮಿಸಿರುವ ಚಿತ್ರ ಇದು ಅನ್ನುವುದು ಖಾತ್ರಿ. ಇಲ್ಲದೇ ಇದ್ದರೆ ನಿರ್ಮಾಪಕರನ್ನು ದೇವರೇ ಕಾಪಾಡಬೇಕಿತ್ತು!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ