ಕೋ ಕೋ ಚಿತ್ರವಿಮರ್ಶೆ, ಕಿಟ್ಟಿ ಡಿಸ್ಟಿಂಕ್ಷನ್, ಚಂದ್ರು ಜಸ್ಟ್ ಪಾಸ್

PR


ಚಿತ್ರ: ಕೋ ಕೋ
ತಾರಾಗಣ: ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ, ಶ್ರೀಹರಿ, ರಂಗಾಯಣ ರಘು
ನಿರ್ದೇಶನ: ಆರ್. ಚಂದ್ರು
ಸಂಗೀತ: ರಮಣ ಗೋಕುಲ

ಗಾಂಧಿನಗರದಲ್ಲಿ ಮೊದಲ ಬಾರಿ ನಿರ್ದೇಶಕನ ಟೋಪಿ ಇಟ್ಟ ವ್ಯಕ್ತಿಯೊಬ್ಬನ ಚಿತ್ರ 'ಕೋ ಕೋ' ಆಗಿದ್ದಿದ್ದರೆ ಯಾರಾದರೂ ಮೆಚ್ಚಬಹುದೇನೋ? ಆದರೆ ಇಷ್ಟೊಂದು ಹಾ-ಹೂ ಅಂತ ಧಿಮಾಕಿನ ಪ್ರಚಾರ ಮಾಡಿದ ಆರ್. ಚಂದ್ರು ನಿರ್ದೇಶನದ ಸಿನಿಮಾ ಎಂದು ನೋಡಿ ಶಹಬ್ಬಾಸ್ ಅಂತ ಹೇಳುವುದು ಕಷ್ಟ. ಹಾಗಿದೆ ಕೋಳಿ ಕೋತಿಯ ಆಟ, ಪೀಕಲಾಟ!

ಕಿಟ್ಟಿ (ಶ್ರೀನಗರ ಕಿಟ್ಟಿ) ಮತ್ತು ಕಾವೇರಿಯ (ಪ್ರಿಯಾಮಣಿ) ಚೆಸ್ ಎಲ್ಲದಕ್ಕೂ ಕಾರಣ. ಅಲ್ಲಿ ಕಿಟ್ಟಿ ಗೆಲ್ಲುತ್ತಾನೆ, ಕಾವೇರಿ ಸೋಲುತ್ತಾಳೆ. ಇದನ್ನು ಸಹಿಸಿಕೊಳ್ಳುವುದು ಪೊಲೀಸ್ ಕಮೀಷನರ್ ಶ್ರೀಹರಿಪ್ರಸಾದ್‌ಗೆ (ಶ್ರೀಹರಿ) ಸಾಧ್ಯವಾಗುವುದಿಲ್ಲ. ಕಾರಣ, ಕಾವೇರಿ ಆತನ ತಂಗಿ. ಅಲ್ಲೇ ಸೇಡು ಹುಟ್ಟಿಕೊಳ್ಳುತ್ತದೆ.

ಆ ಸೇಡು ಎಲ್ಲಿಯವರೆಗೆ ಅಂದರೆ, ಕಿಟ್ಟಿಯನ್ನೇ ಮದುವೆಯಾಗುತ್ತೇನೆ ಅಂತ ಹೊತ್ತಲ್ಲದ ಹೊತ್ತಿನಲ್ಲಿ ಕಾವೇರಿ ಘೋಷಣೆ ಮಾಡುವವರೆಗೆ. ಇದು ಎಲ್ಲಿಗೆ ಮುಟ್ಟುತ್ತದೆ? ಶ್ರೀಹರಿ ಸೇಡು ತೀರಿಸಿಕೊಳ್ಳುತ್ತಾನಾ? ಕಿಟ್ಟಿ ಏನಾಗುತ್ತಾನೆ? ನಿಜಕ್ಕೂ ಈ ಮದುವೆ ನಡೆಯುತ್ತಾ? ಇದು ಚಿತ್ರದ ಉಳಿದ ಭಾಗ.

ತಾಜ್‌ಮಹಲ್, ಪ್ರೇಮ್ ಕಹಾನಿ, ಮೈಲಾರಿಯಂತಹ ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರು ಕೋ ಕೋದಲ್ಲಿ ಹೆಣೆದಿರುವ ಚಿತ್ರಕತೆ ಪೇಲವ ಅನ್ನದೆ ವಿಧಿಯಿಲ್ಲ. ಅವರು ಹೆಚ್ಚು ಗಮನ ಕೊಟ್ಟಿರುವುದು ತಾಂತ್ರಿಕತೆಗೆ. ಸಿನಿಮಾವನ್ನು ಸ್ಟೈಲಿಷ್ ಆಗಿ ಪ್ರೆಸೆಂಟ್ ಮಾಡಬೇಕೆಂಬ ಹಠಕ್ಕೆ ಬಿದ್ದು ಇತರ ವಿಚಾರಗಳನ್ನು ಕಡೆಗಣಿಸಿದ್ದಾರೆ.

ಇದುವರೆಗಿನ ಅವರ ಯಾವ ಚಿತ್ರದ ಹಾಡುಗಳೂ ಬೇಡವೆನಿಸುತ್ತಿರಲಿಲ್ಲ. ಆದರೆ ಈ ಚಿತ್ರದ ಹಾಡುಗಳನ್ನು ಒಮ್ಮೆ ನೋಡುವುದೇ ಕಷ್ಟ. ಎಲ್ಲಾ ಹಾಡುಗಳು ಅನಗತ್ಯ ಅನಿಸಿ ಬಿಡುತ್ತವೆ. ಬೇಕಂತ ತೆಲುಗಿನಿಂದ ಕರೆಸಿಕೊಂಡ ರಮಣ ಗೋಕುಲ ಅವರದ್ದು ವಿಶ್ರಾಂತ ಸಂಗೀತ. ಇಷ್ಟಾದರೂ ಚಂದ್ರಶೇಖರ್ ಛಾಯಾಗ್ರಹಣ ಇಷ್ಟವಾಗುತ್ತದೆ. ಇಡೀ ಚಿತ್ರವನ್ನು ಕಲರ್‌ಫುಲ್ ಆಗಿಸುವಲ್ಲಿ ಅವರ ಶ್ರಮವೇ ಎದ್ದು ಕಾಣುತ್ತದೆ.

ಶ್ರೀನಗರ ಕಿಟ್ಟಿ ಲವ್, ಸೆಂಟಿಮೆಂಟ್, ಆಕ್ಷನ್ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಹರ್ಷಿಕಾ ಪೂಣಚ್ಚ, ಸಂಜನಾ, ಅನು ಪ್ರಭಾಕರ್‌ಗೆ ಗಟ್ಟಿತನದ ಪಾತ್ರವಿಲ್ಲ.

ವಾರಾಂತ್ಯದಲ್ಲಿ ಟಾಕೀಸಿನತ್ತ ಹೋಗಬೇಕೆಂದಿದ್ದರೆ, ಖಂಡಿತಾ ಹೋಗಬಹುದು. ಚಿತ್ರಕತೆ ಇನ್ನಷ್ಟು ಬಿಗಿಯಾಗಿರಬೇಕಿತ್ತು ಅಂತ ಅನಿಸುವುದು ನಿಜವಾದರೂ, ಎಲ್ಲೂ ಬೋರ್ ಹೊಡೆಸುವುದಿಲ್ಲ ಅನ್ನೋದು ಕೂಡ ಅಷ್ಟೇ ನಿಜ.

ವೆಬ್ದುನಿಯಾವನ್ನು ಓದಿ