ಗಂಗಾಕಾವೇರಿಯಲ್ಲಿ 'ಹಿಮಾಲಯದ ಮನಮೋಹಕ ದೃಶ್ಯ'

ಆತ ಛಾಯಾಗ್ರಾಹಕ. ತಾನು ಒಮ್ಮೆ ಕಂದಕದಲ್ಲಿ ಬಿದ್ದಿದ್ದಾಗ ರಕ್ಷಿಸಿದ ಗಂಗಾಳನ್ನು ಮೆಚ್ಚಿ ಮದುವೆಯಾಗುತ್ತೇನೆ ಎಂದು ಆಣೆ ಮಾಡಿ ಬಂದಿರುತ್ತಾನೆ. ಇತ್ತ ಊರಿನಲ್ಲಿ ಕಾವೇರಿ ಎಂಬ ಹುಡುಗಿಯೊಂದಿಗೆ ಮದುವೆ ನಿಶ್ಚಯ ಕೂಡಾ ಆಗಿರುತ್ತದೆ. ಫೋಟೋಗ್ರಫಿ ಮಾಡಿಕೊಂಡು ಬರುತ್ತೇನೆ ಎಂದು ಹಿಮಾಲಯಕ್ಕೆ ಹೋದ ಅರ್ಜುನನ ಪತ್ತೆಯೇ ಇರುವುದಿಲ್ಲ. ಅಲ್ಲದೇ ಮದುವೆ ಬೇರೆ ನಿಶ್ಚಯವಾಗಿದೆ, ಕಾವೇರಿಗೂ ಚಿಂತೆ ಆರಂಭವಾಗುತ್ತದೆ.

ಇಷ್ಟು ಕಥೆ ಹೇಳಿದ ಮೇಲೆ ಇದೊಂದು ತ್ರಿಕೋನ ಪ್ರೇಮಕಥೆ ಎಂದು ಕಣ್ಣುಮುಚ್ಚಿ ಹೇಳಬಹುದು. ನಿರ್ದೇಶಕ ವಿಷ್ಣುಕಾಂತ್ ಸ್ವಲ್ಪ ಹೊಸತನ ಪ್ರದರ್ಶಿಸಲು ಪ್ರಯತ್ನಿಸಿದ್ದಾರೆ. ನಿಜ ಹೇಳಬೇಕೆಂದರೆ ಇದೊಂದು ಛಾಯಾಗ್ರಾಹಕರ ಹಾಗೂ ಸಂಗೀತ ನಿರ್ದೇಶಕರ ಚಿತ್ರ.

MOKSHENDRA

ಕಲಾವಿದರಿಗಿಂತ ಹೆಚ್ಚಾಗಿ ಛಾಯಾಗ್ರಾಹಕ ವೇಣು ತಮ್ಮ ಪ್ರತಿಭೆಯನ್ನು ಇಲ್ಲಿ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಚಿತ್ರದ ಪ್ರತಿ ದೃಶ್ಯಗಳು ಮನಮೋಹಕ. ಚಿತ್ರ ನೋಡುತ್ತಿದ್ದಂತೆ ಚುಮು ಚುಮು ಚಳಿಯ ಅನುಭವ ನಿಮಗಾದರೆ ಅದು ಛಾಯಾಗ್ರಾಹಕ ವೇಣು ಅವರ ಕೈ ಚಳಕ. ನಿರ್ದೇಶಕರು ಹಿಮಾಲಯದಂತಹ ಪ್ರದೇಶದಲ್ಲೂ ಯಶಸ್ವಿ ಚಿತ್ರೀಕರಣ ನಡೆಸಿ ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಬಡಿಸಿದ್ದಾರೆ.

ಇಲ್ಲಿ ಮಧುರ ಸಂಗೀತ ಸಂಯೋಜಿಸಿದ ಕಲ್ಯಾಣ್ ಪಾತ್ರ ಕೂಡಾ ಮಹತ್ವದ್ದು. ಇಂಪಾದ ಹಾಡುಗಳನ್ನು ನೀಡಿದ್ದಾರೆ. ಅಂಬರದಂಬರದಾಚೆ... ಹಾಡು ವೇಣು ಕ್ಯಾಮರಾದಲ್ಲಿ ಸೆರೆ ಸಿಕ್ಕಿ ನವಿರಾಗಿ ಮೂಡಿಬಂದಿದೆ.

MOKSHENDRA

ನಾಯಕ ಅಕ್ಷಯ್ ತಮ್ಮ ಮೊದಲ ಪ್ರಯತ್ನದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಅಭಿನಯಕ್ಕಿಂತ ಕುಣಿತಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ನಾಯಕಿಯರಾದ ಮಾಹಿ ಹಾಗೂ ಮಲ್ಲಿಕಾ ಕಪೂರ್‌‌ದಂತದ ಗೊಂಬೆಗಳಂತೆ ಮುದ್ದಾಗಿ ಕಾಣಿಸಿಕೊಂಡು ಮರೆಯಾಗುತ್ತಾರೆ. ಉಳಿದಂತೆ ಅನಂತ್‌ನಾಗ್, ರಮೇಶ್ ಭಟ್, ಚಿತ್ರಾ ಶೆಣೈ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸಣ್ಣಪುಟ್ಟ ಕೊರತೆಗಳನ್ನು ಬಿಟ್ಟರೆ ಗಂಗಾ ಕಾವೇರಿ ಉತ್ತಮ ಚಿತ್ರ. ತ್ರಿಕೋನ ಪ್ರೇಮಕಥೆಯ ಅನೇಕ ಚಿತ್ರಗಳು ಬಂದಿದ್ದರೂ ಇದು ಅವೆಲ್ಲಕ್ಕಿಂತ ಭಿನ್ನವಾಗಿದೆ.