ಡೂಪ್ಲಿಕೇಟ್‌ ಅಲ್ಲದಿದ್ದರೂ ಸಹನೀಯ ಚಿತ್ರ; ಮಿಸ್ಟರ್ ಡೂಪ್ಲಿಕೇಟ್‌

EVENT
ನಂದಕುಮಾರ್ (ಪ್ರಜ್ವಲ್‌ ದೇವರಾಜ್‌) ಎಂಬ ಸೋಗುಗಾರ ಕಥಾನಾಯಕಿ ಪೂರ್ಣಿಮಾ (ಶೀತಲ್‌) ಮನೆಗೆ ಬಂದಾಗ ಅವನನ್ನೇ ವಿಕ್ರಮ್‌ (ದಿಗಂತ್‌) ಎಂದು ತಪ್ಪಾಗಿ ಭಾವಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ. ಪೂರ್ಣಿಮಾಳನ್ನು ಪ್ರೀತಿಸತೊಡಗುವ ನಂದಕುಮಾರ್‌ಗೆ ಈ ನಿಟ್ಟಿನಲ್ಲಿ ತಂದೆ ರಾಮ್‌ಪ್ರಸಾದ್‌ನ (ದೇವರಾಜ್‌) ಬೆಂಬಲ ದಕ್ಕುತ್ತದೆ. ಆದರೆ ಮಧ್ಯಂತರದ ವೇಳೆಗೆ ವಿಕ್ರಮ್‌ನ ಆಗಮನವಾಗುತ್ತದೆ ಮತ್ತು ಪೂರ್ಣಿಮಾ ಮನೆಯಲ್ಲಿ ತಾನಿರಬೇಕಿದ್ದ ಜಾಗದಲ್ಲಿ ನಂದಕುಮಾರ್ ಇದ್ದಾನೆಂಬ ಸಂಗತಿ ವಿಕ್ರಮ್‌ಗೆ ಅರ್ಥವಾಗುತ್ತದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಂದಕುಮಾರ್ ಮತ್ತು ವಿಕ್ರಮ್‌ ಕಾಲೇಜು ದಿನಗಳಿಂದಲೂ ಶತ್ರುಗಳಾಗಿರುತ್ತಾರೆ. ಯಾವುದೇ ಪೈಪೋಟಿಯ ಸಂದರ್ಭದಲ್ಲೂ ಕುತಂತ್ರವನ್ನು ಬಳಸಿ ಗೆಲ್ಲುತ್ತಲೇ ಹೋಗುವುದು ನಂದಕುಮಾರ್‌ಗೆ ಆಗಿನಿಂದಲೂ ಅಭ್ಯಾಸವಾಗಿರುತ್ತದೆ. ಆದರೆ ಈಗ ಸುಸ್ಥಿತಿಯಲ್ಲಿರುವ ವಿಕ್ರಮ್‌ ಸಂದರ್ಭವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ ಮತ್ತು ನಂದಕುಮಾರ್‌ಗೆ ಅವಮಾನವಾಗುವಂಥ ಸನ್ನಿವೇಶಗಳನ್ನು ನಿರ್ಮಿಸುತ್ತಾನೆ.

ಇನ್ನೇನು ಸತ್ಯಸಂಗತಿಯೆಲ್ಲಾ ಹೊರಬಿದ್ದು ವಿಕ್ರಮ್‌ ಮತ್ತು ಪೂರ್ಣಿಮಾರ ಮದುವೆಯ ಮಾತುಕತೆಗಳು ನಡೆಯಬೇಕೆನ್ನುವಾಗ ನಂದಕುಮಾರ್‌ನ ತಂದೆ ಸತ್ಯಸಂಗತಿಯನ್ನು ಹೇಳಲು ಬರುತ್ತಾನಾದರೂ ಅವನನ್ನು ಹೊರಗೆ ಕಳಿಸಲಾಗುತ್ತದೆ.

ಆಗ ನಂದಕುಮಾರ್ ತಪ್ಪು ತನ್ನಿಂದ ಮಾತ್ರವೇ ಆಗಿಲ್ಲ, ಪೂರ್ಣಿಮಾಳಿಂದಲೂ ಆಗಿದೆ ಎಂಬ ಸಂಗತಿಯನ್ನು ಹೊರಗೆಡವಿದಾಗ, 'ತ್ಯಾಗರಾಜ'ನ ಸ್ವರೂಪವನ್ನು ತಳೆಯುವ ವಿಕ್ರಮ್‌, ಪೂರ್ಣಿಮಾಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಮದುವೆಯ ಶಾಸ್ತ್ರಗಳಿಗೆ ಮುಂಚೆಯೇ ಅವಳ ಕೈಯನ್ನು ನಂದಕುಮಾರ್ ಕೈಯಲ್ಲಿರಿಸಿ ನೀನು ಜೀವನದಲ್ಲೂ ಗೆದ್ದೆ ಎನ್ನುತ್ತಾ, ಒಬ್ಬರನ್ನು ಪ್ರೀತಿಸಿ ಇನ್ನೊಬ್ಬರನ್ನು ಮದುವೆಯಾಗುವುದು ತರವಲ್ಲ ಎಂಬ ಭಾವವನ್ನು ಹೊರಹೊಮ್ಮಿಸುತ್ತಾನೆ.

ಕೌಟುಂಬಿಕ ಮೌಲ್ಯಗಳನ್ನು ಪರಿಗಣನೆಯಲ್ಲಿಟ್ಟುಕೊಂಡು ನಿರ್ದೇಶಕ ಕೋಡ್ಲು ರಾಮಕೃಷ್ಣ ಈ ಚಿತ್ರವನ್ನು ಸಹನೀಯವಾಗಿ ರೂಪಿಸಿದ್ದಾರಾದರೂ ಚಿತ್ರವನ್ನು ಮತ್ತಷ್ಟು ರಂಜನೀಯವಾಗಿ ಕಟ್ಟಿಕೊಡಲು ಸಾಧ್ಯವಿತ್ತು ಅನಿಸುತ್ತದೆ. ಏಕೆಂದರೆ ದೃಶ್ಯಗಳನ್ನು ಕಟ್ಟಿರುವ ರೀತಿ ಕೆಲವೊಮ್ಮೆ ಕೃತಕ ಎನ್ನಿಸುವಂತಿರುವುದು ಕಣ್ಣಿಗೆ ರಾಚುವ ದೋಷ.

ಅಪ್ಪ-ಮಗನಾಗಿ ದೇವರಾಜ್‌-ಪ್ರಜ್ವಲ್‌ ಅಭಿನಯ ಚೆನ್ನಾಗಿದೆ. ದಿಗಂತ್‌ ಕೂಡಾ ಪಾತ್ರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗಿದ್ದಾರೆ. ಚಿತ್ರದ ನಿರ್ಮಾಣ ಮೌಲ್ಯಗಳು ಹಾಗೂ ಚಿತ್ರೀಕರಣದ ತಾಣಗಳನ್ನು ಚಿತ್ರದ ಮತ್ತಷ್ಟು ಪ್ಲಸ್‌ ಪಾಯಿಂಟ್‌ಗಳೆಂದು ಪರಿಗಣಿಸಬಹುದು. ಒಂದೆರಡು ಹೊಡೆದಾಟದ ದೃಶ್ಯಗಳಿವೆಯಾದರೂ ಅದು ವ್ಯಾಪಾರಿ ಉದ್ದೇಶಗಳಿಗೆ ಸೇರಿಸಿದಂಥವು ಎಂಬುದು ಅರ್ಥವಾಗುತ್ತದೆ. ಛಾಯಾಗ್ರಹಣ ಮತ್ತು ಸಂಕಲನ ಕಾರ್ಯಗಳು ಸಮರ್ಪಕವಾಗಿವೆ.

ಆದರೆ ಒಂದು ಹಾಡನ್ನು ಹೊರತುಪಡಿಸಿದರೆ ಸಂಗೀತ ನಿರ್ದೇಶಕ ಮನೋಮ‌ೂರ್ತಿ ನಿರಾಸೆಗೊಳಿಸುತ್ತಾರೆ. ಈ ಕುರಿತು ಮತ್ತಷ್ಟು ಗಮನ ಹರಿಸಬೇಕಿತ್ತು ಎಂಬ ವಿಷಾದ ಚಿತ್ರಮಂದಿರದಿಂದ ಹೊರಬರುವಾಗ ಮ‌ೂಡುತ್ತದೆ. ಒಟ್ಟಿನಲ್ಲಿ ಇದೊಂದು ಸಹನೀಯ ಚಿತ್ರ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ