ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ ಅಪಕ್ವ ನಿರ್ದೇಶಕರ ಸಾಲಿಗೆ ಸುಧೀರ್ ಅತ್ತಾವರ ಕೂಡ ಸೇರ್ಪಡೆಯಾಗಿದ್ದಾರೆ! ಅವರು ಸಾಕಷ್ಟು ಕಷ್ಟಪಟ್ಟಿರುವ ಹೊರತಾಗಿಯೂ, ಕಮರ್ಷಿಯಲ್-ಆರ್ಟ್ ಸಿನಿಮಾಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೋಗಿ ಜಾರಿ ಬಿದ್ದಿದ್ದಾರೆ!
ಬ್ರಾಹ್ಮಣರ ಹುಡುಗ ಭಾರದ್ವಾಜ್ (ರಾಕೇಶ್ ಆಡಿಗ) ಲಂಬಾಣಿ ಹುಡುಗಿ ಪರಿ (ಸ್ಮಿತಾ ಆಲಿಯಾಸ್ ನಿವೇದಿತಾ) ನಡುವಿನ ಪ್ರೀತಿಯೇ 'ಪರಿ'ಯ ಕಥಾ ಹಂದರ. ಅಪ್ಪನ ಹಸಿ ಕಾಮದ ಕಸಿವಿಸಿ ಭಾರದ್ವಾಜನ ಬದುಕನ್ನು ಬದಲಿಸುವ ದಿಕ್ಸೂಚಿ. ಇಡೀ ಚಿತ್ರ ಕಾಮದ ಎಳೆಯಲ್ಲಿಯೇ ಸಾಗುತ್ತದೆ.
ಭಾರದ್ವಾಜನಿಗೆ ಬ್ರಾಹ್ಮಣ್ಯವೇ ಬೇಡವೆನಿಸುತ್ತದೆ. ಮತ್ತೆ ಬೇಕೆನಿಸುವುದರ ನಡುವೆ ಆತ ಲಂಬಾಣಿಗಳೊಳಗೆ ಲಂಬಾಣಿಯಾಗುತ್ತಾನೆ. ಆದರೂ ಪರಿಯನ್ನು ಪಡೆಯಲು ಅವನಿಗೆ ಸಾಧ್ಯವಾಗುವುದಿಲ್ಲ. ಕೆಲಸ ಕೊಟ್ಟು ಪ್ರೀತಿಯನ್ನೂ ಕೊಟ್ಟಳೆಂದುಕೊಂಡ ಸುಮೇಧಾ (ಹರ್ಷಿಕಾ ಪೂಣಚ್ಚ) ಇನ್ನೊಂದು ಸಿಡಿಲಾಗುತ್ತಾಳೆ.
ಸೋತೇ ಹೋದೆ ಎಂದು ಮನೆಯತ್ತ ಹೊರಟರೆ ಯಾರೋ ಗೆಲ್ಲುತ್ತಾರೆ. ಭಾರದ್ವಾಜ ಜೀವಚ್ಚವವಾಗುತ್ತಾನೆ. ಅದೇ ಸ್ಥಿತಿ ವಾಲಿಯಾನನ್ನು (ಸತ್ಯ) ಮದುವೆಯಾದ ಪರಿಯದ್ದಾಗಿರುತ್ತದೆ. ಕೊನೆಗೊಂದು ಯಾರೂ ನಂಬಲಾಗದ ಅಚ್ಚರಿ. ಅಲ್ಲಿಗೆ ಚಿತ್ರಮಂದಿರದಲ್ಲಿ 'ಹೊರಗೆ ಹೋಗಲು ದಾರಿ' ಎಂಬ ಬೋರ್ಡು ಕೆಂಪಗಾಗುತ್ತದೆ.
ಇದು ಸಂಪಣ್ಣ ಮುತಾಲಿಕ್ರ 'ಭಾರದ್ವಾಜ' ಕಾದಂಬರಿಯನ್ನು ಆಧರಿಸಿದ ಸಿನಿಮಾ. ಆದರೆ ಇದನ್ನು ಈ 'ಪರಿ'ಯಾಗಿ ಸಿನಿಮಾ ಮಾಡಲು ಹೊರಟು ನಿರ್ದೇಶಕ ಸುಧೀರ್ ಅತ್ತಾವರ ಸೋತಿದ್ದಾರೆ. ಅವರಲ್ಲಿನ ಅನುಭವ ಕೊರತೆಯೇ ಇದಕ್ಕೆ ಪ್ರಮುಖ ಕಾರಣ.
ತೆರೆಯ ಮೇಲೆ ಬಹುಹೊತ್ತು ಕಾಣುವ ಎಲ್ಲಾ ಪಾತ್ರಗಳಿಗೂ ಅತ್ತಾವರ ಕಾಮದಾಹವನ್ನು ತುಂಬಿಸಿ, ಸಿನಿಮಾದ ವ್ಯಾಪಾರೀಕರಣ ಮಾಡಲು ಹೋಗಿರುವುದು ಅವರ ಎಡವಿರುವ ಇನ್ನೊಂದು ಕಲ್ಲು. ಅದೂ ಇಲ್ಲ ಇದೂ ಇಲ್ಲ ಎಂದಾಗಲೆಲ್ಲ ಸುಮ್ಮನೆ ರೊಮ್ಯಾನ್ಸ್. ಬಿಡಿಬಿಡಿಯಾದ ಕಥೆಯನ್ನು ಸಾಲಾಗಿ ಜೋಡಿಸುವಲ್ಲೂ, ಚುರುಕಿನ ಸಂಭಾಷಣೆಯಲ್ಲೂ ಹಿಂದೆ. ಇವೆಲ್ಲದರ ನಡುವೆ ಆಗಾಗ ಎದುರಾಗಿ ಗೊಂದಲ ಕೂಪಕ್ಕೆ ತಳ್ಳುವ ಫ್ಲ್ಯಾಶ್ಬ್ಯಾಕ್ಗಳು.
ಇಷ್ಟಾದ ಹೊರತಾಗಿಯೂ 'ಪರಿ' ಇಷ್ಟವಾಗಿದ್ದರೆ, ಅದಕ್ಕೆ ಕಾರಣ ವೀರ ಸಮರ್ಥ್ ಸಂಗೀತ ಮತ್ತು ಸುಧೀರ್ ಅತ್ತಾವರ ಹಾಡುಗಳ ಆಯ್ಕೆ. ಮೂರು ಹಾಡುಗಳು ಮಧುರವಾಗಿ ಕಿವಿ ತುಂಬುತ್ತವೆ. 'ನಿನ್ನ ಪ್ರೇಮದ ಪರಿ...' ಇಡೀ ಚಿತ್ರದಲ್ಲಿ ಇರಬಾರದಿತ್ತೇ ಎಂದು ಹೇಳಿಸುತ್ತದೆ.
ಇನ್ನು ಸ್ಮಿತಾಗೆ ನಟಿಸಲು ಸಿಕ್ಕಿರುವ ಅವಕಾಶವೇ ಕಡಿಮೆ. ಚೆಲ್ಲುಚೆಲ್ಲಾಗಿ ಜಿಗಿಯಲು ಸಿಕ್ಕಾಗಲೆಲ್ಲ ಅವರು ಆವರಿಸಿಕೊಳ್ಳುತ್ತಾರೆ. ರಾಕೇಶ್ ಆಡಿಗ ಇಲ್ಲಿ ನಾಯಕರಾಗಿ ಹೆಚ್ಚು ಸ್ಕೋರ್ ಮಾಡುವುದಿಲ್ಲ. ಡಿಸ್ಟಿಲರಿ ಕಂಪನಿಯ ಒಡತಿಯಾಗಿ ಹರ್ಷಿಕಾ ಪೂಣಚ್ಚ ಇನ್ನೂ ದೊಡ್ಡವರಾಗಬೇಕಿತ್ತು. ನಾಗಕಿರಣ್ ಶೋರೂಮಿನ ಸುಂದರ ಬೊಂಬೆ.
'ಪರಿ'ಯನ್ನು ಸತ್ ಪರಿಣಾಮದ ನಿರೀಕ್ಷೆಯಲ್ಲಿ ನೋಡಿದರೆ ಕೆಟ್ಟ ಪರಿಣಾಮವೇ ಜಾಸ್ತಿ!