ಪ್ರೇಕ್ಷಕನ ಕಿವಿಗೆ ಹೂ ಇಡುವ 'ಅರ್ಜುನ್'

ಸೋಮವಾರ, 18 ಆಗಸ್ಟ್ 2008 (16:35 IST)
MOKSHA
ಚಿತ್ರ: ಅರ್ಜುನ್
ನಿರ್ದೇಶನ: ಶಾಹುರಾಜ್ ಶಿಂಧೆ
ತಾರಾಗಣ: ದರ್ಶನ್, ಮೀರಾ ಚೋಪ್ರಾ, ಅನಂತ್‌ನಾಗ್, ಸುಮನ್, ಶರತ್ ಲೋಹಿತಾಶ್ವ

ದರ್ಶನ್ ಭಯಂಕರವಾದ ರೀತಿಯಲ್ಲಿ ಫೈಟ್ ಮಾಡಿದರೆ ಆ ಚಿತ್ರ ಗೆಲ್ಲುತ್ತದೆ ಎಂಬ ಸೂತ್ರಕ್ಕೆ ಜೋತು ಬಿದ್ದ ನಿರ್ದೇಶಕರು 'ಅರ್ಜುನ'ದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಚಿತ್ರದಲ್ಲಿ ಸಾಹಸ ಪ್ರಿಯರಿಗೆ ಮೈನವಿರೇಳಿಸುವಂತಹ ಸಾಹಸ ದೃಶ್ಯಗಳಿವೆ.

ಶ್ರೀಮಂತ ಹಿನ್ನೆಲೆಯಿಂದ ಬಂದ ನಿಷ್ಠಾವಂತ ಪೊಲೀಸ್ ಅಧಿಕಾರಿ ಲಂಚದ ಬಲೆಗೆ ಬೀಳದೇ ಯಾವ ರೀತಿ ದುಷ್ಟರನ್ನು ಮಟ್ಟ ಹಾಕುತ್ತಾನೆ ಎಂಬುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಚಿತ್ರದ ಪ್ರತಿಯೊಂದು ಫ್ರೇಮ್‌ನಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ.

ಜನ ನಂಬಲಾಗದಂತಹ ಕೆಲವು ದೃಶ್ಯಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಉದಾಹರಣೆಗೆ ವಿದ್ಯುತ್ ತಂತಿಯನ್ನು ಕೈಯಲ್ಲಿ ಹಿಡಿಯುವುದು, ರೌಡಿಗಳು ಬಿಟ್ಟ ಗುಂಡನ್ನು ಜಗಿಯುವುದು, ಐಪಿಎಸ್ ಅಧಿಕಾರಿಯೊಬ್ಬ ಭೂಗತ ಡಾನ್‌ಗೆ ರಕ್ಷಣೆ ನೀಡುವುದು ಇಂತಹ ಕೆಲವು ದೃಶ್ಯಗಳ ಮೂಲಕ ಪ್ರೇಕ್ಷಕನ ಕಿವಿಗೆ ಹೂ ಇಡುವ ಪ್ರಯತ್ನ ಮಾಡಿದ್ದಾರೆ. ಐಪಿಎಸ್ ಅಧಿಕಾರಿಯ ಸ್ಥಾನದ ಹಿನ್ನೆಲೆಯನ್ನು ತಿಳಿದುಕೊಳ್ಳದೇ ಚಿತ್ರ ಮಾಡಿದ ಪರಿಣಾಮ ಇಲ್ಲಿ ಎದ್ದು ಕಾಣುತ್ತದೆ.

ಕಮರ್ಷಿಯಲ್ ಚಿತ್ರದ ಸಿದ್ಧ ಸೂತ್ರಗಳಾದ ಫೈಟ್, ಐಟಂ ಸಾಂಗ್ ಹಾಗೂ ಹಾಸ್ಯಗಳನ್ನು ಚಾಚು ತಪ್ಪದೇ ನಿರ್ದೇಶಕರು ಪಾಲಿಸಿದ್ದಾರೆ. ವಿದೇಶಿ ಬಿಕಿನಿಯರ ಜೊತೆ ದರ್ಶನ್‌ರನ್ನು ಕುಣಿಸಿದರೆ ಚಿತ್ರ ಹಿಟ್ ಆಗುತ್ತದೆ ಎಂದು ನಿರ್ದೇಶಕರು ಭಾವಿಸಿದಂತಿದೆ.

ಚಿತ್ರದಲ್ಲಿ ದರ್ಶನ್ ಶ್ರೀಮಂತರೊಬ್ಬರ ಮಗನಾಗಿರುತ್ತಾರೆ. ದರ್ಶನ್‌ಗಾಗಿ ಅವರ ಅಪ್ಪ 150 ಕೋಟಿ ರೂ. ಇಟ್ಟಿರುತ್ತಾರೆ. ಹೀಗಿರುವಾಗ ಭ್ರಷ್ಟರ ಎಂಜಲಿಗೆ ಕೈಯೊಡ್ಡುವ ಪ್ರಮೇಯವೇ ಬರುವುದಿಲ್ಲ. ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬಹುದು ಎಂಬ ಪರಿಕಲ್ಪನೆಯನ್ನಿಟ್ಟು ನಿರ್ದೇಶಕ ಶಾಹುರಾಜ್ ಶಿಂಧೆ ಚಿತ್ರ ಮಾಡಿದ್ದಾರೆ. ಆದರೆ ಇದನ್ನೇ ಇನ್ನಷ್ಟು ಉತ್ತಮವಾಗಿ ನಿರೂಪಿಸಿದರೆ ಚಿತ್ರಕ್ಕೆ ಮತ್ತಷ್ಟು ಧಮ್ ಬರುತಿತ್ತು.

ರವಿವರ್ಮರ ನೂರನೇ ಚಿತ್ರವಾದ್ದರಿಂದ ಇಲ್ಲಿ ಅದ್ಬುತ ಸಾಹಸ ಸನ್ನಿವೇಶಗಳನ್ನ
MOKSHA
ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಬ್ಯಾಂಕಾಕ್, ಆಸ್ಟ್ರೀಯಾ, ಜರ್ಮನಿಗಳಲ್ಲಿ ಚಿತ್ರೀಕರಣ ಮಾಡಿದ್ದರಿಂದ ಒಂದೇ ಟಿಕೆಟ‌್‌ನಲ್ಲಿ ವಿದೇಶಕ್ಕೆ ಸುತ್ತಬಹುದು.

ದರ್ಶನ್ ಈ ಹಿಂದೆಯೂ ಅಯ್ಯ, ಸ್ವಾಮಿ ಚಿತ್ರಗಳಲ್ಲಿ ಪೊಲೀಸ್ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅರ್ಜುನದಲ್ಲಿನ ಅವರ ಭಂಗಿ ಆಕರ್ಷಕವಾಗಿದೆ. ಅವರ ನಿಲುವು, ನಟನೆ ಎಲ್ಲವೂ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ನಿರ್ದೇಶಕರು ಮನಸ್ಸು ಮಾಡಿದ್ದರೆ ದರ್ಶನ್‌ರಿಂದ ಇನ್ನಷ್ಟು ಅಭಿನಯವನ್ನು ಹೊರತೆಗಿಸಬಹುದಿತ್ತು.

ಮೀರಾ ಚೋಪ್ರಾ ವೈಯ್ಯಾರೆಯಂತೆ ಬಂದು ಹೋಗುತ್ತಾರೆ. ಹರಿಕೃಷ್ಣ ಸಂಗೀತ ಸಾಧಾರಣ. ಚಿತ್ರದಲ್ಲಿನ 'ನನ್ನ ಅರ್ಜುನ ಅನ್ನುತಾರೆ, ನನ್ನ ಅದ್ಬುತ ಅನುತಾರೆ' ಹಾಡೊಂದು ಚೆನ್ನಾಗಿದೆ. ಸಾಯಿಕೃಷ್ಣರ ಸಂಭಾಷಣೆ ಅಷ್ಟಕಷ್ಟೇ. ಛಾಯಾಗ್ರಹಣ ಓಕೆ.

ಚಿತ್ರವನ್ನು ಒಮ್ಮೆ ನೋಡಿ ಬಂದು, ಅದರ ಸಾಹಸವನ್ನು ಮಾಡಲು ಪ್ರಯತ್ನಿಸದಿದ್ದರೆ ಉತ್ತಮ.