'ಮತ್ತೊಂದು ಮದುವೆನಾ!' ಅಥವಾ ಎರಡನೇ ಮದುವೆ ಮುಂದುವರಿಕೆನಾ..?!

PR
ಹಾಸ್ಯಕ್ಕೆ ಒತ್ತುಕೊಟ್ಟು ನಿರ್ದೇಶಕ ದಿನೇಶ್ ಬಾಬು ಮತ್ತೊಂದು ಮದುವೆ ಮಾಡಿದ್ದಾರೆ. ಮದುವೆಯ ಬಳಿಕ ಬೆಳೆಯುವ ಇನ್ನೊಂದು ಸಂಬಂಧ, ಆ ಕುರಿತಾದ ಗುಮಾನಿ ದಿನೇಶ್ ಬಾಬು ಅವರಿಗೆ ಬಹು ಪ್ರೀಯವಾದ ಕಥಾ ವಸ್ತುಗಳು. ಇನ್ನೊಂದು ಮದುವೆ ಕುರಿತಾದ ಅನುಮಾನ, ಈ ಅನುಮಾನದ ಸುಳಿಯ ಬೆನ್ನು ಹತ್ತಿದಾಗ ಏಳುವ ಸುಂಟರಗಾಳಿಯನ್ನು ಬಳಸಿಕೊಂಡು ಸಿನಿಮಾಗಳನ್ನು ನಿರ್ದೇಶಿಸುವುದು ದಿನೇಶ್ ಬಾಬು ಶೈಲಿ.

'ಮತ್ತೊಂದು ಮದುವೆನಾ!' ಕೂಡ ಇದೇ ಬಗೆಯ ಚಿತ್ರ. ಕೆಲವು ಸಮಯದ ಹಿಂದೆ ತೆರೆ ಕಂಡ ಇದೇ ನಿರ್ದೇಶಕರ 'ಎರಡನೇ ಮದುವೆ'ಯ ಎರಡನೆಯ ಭಾಗವಿದು ಎಂದರೂ ನಡೆಯುತ್ತದೆ. ಅಲ್ಲಿನದೇ ಪಾತ್ರಗಳೂ ಇಲ್ಲಿಯೂ ಇವೆ.

ಗಂಡನ ಮೇಲೆ ಸಂಶಯ ಪಡುವ ಹೆಂಡತಿ, ಆಕೆಯ ಪ್ರವೃತ್ತಿಗೆ ಕವಡೆ ಕಿಮ್ಮತ್ತೂ ಕೊಡದ ಗಂಡ, ಇದರಿಂದ ಹಾದಿ ತಪ್ಪುವ ಸಂಸಾರ ಅನುಭವಿಸುವ ಜಂಜಾಟಗಳಿಗೆ ಹಾಸ್ಯ ಲೇಪನ ಹಚ್ಚಿ ಇದು 'ಮತ್ತೊಂದು ಮದುವೆನಾ...' ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತಾರೆ ನಿರ್ದೇಶಕ ದಿನೇಶ್ ಬಾಬು.

ಅನಂತ್‌ನಾಗ್ ಮತ್ತು ಸುಹಾಸಿನಿ ಇಲ್ಲಿ ಪತಿ-ಪತ್ನಿ. ನವೀನ್‌ ಕೃಷ್ಣ ಹಾಗೂ ಪ್ರಿಯಾಂಕ ಇವರಿಗೆ ಅಳಿಯ, ಮಗಳು. ಒಂದು ರೀತಿಯಲ್ಲಿ 'ಎರಡನೆ ಮದುವೆ'ಯ ಈ ಮುಂದುವರಿದ ಭಾಗದಲ್ಲಿ ಅಡುಗೆ ಮನೆ ಸಹಾಯಕಿಯಾಗಿ ತಾರಾ ಕೂಡಾ ತಮ್ಮ ಪಾತ್ರವನ್ನು ಮುಂದುವರಿಸಿದ್ದಾರೆ.

ಚಿತ್ರವನ್ನು ನೋಡುವಾಗ ಕೆಲವೊಮ್ಮೆ ಹಳಸಿದ ಮಾಲು ಎಂಬ ಭಾವನೆ ಬಂದರೂ ಪ್ರೇಕ್ಷಕನನ್ನು ನಗಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಅನುಭವಿ ಕಲಾವಿದರು ದಿನೇಶ್ ಬಾಬು ಅವರ ಕಲ್ಪನೆಗೆ ಜೀವ ತುಂಬಿದ್ದಾರೆ.

ಅನಂತ್‌ನಾಗ್, ಸುಹಾಸಿನಿ, ತಾರಾ, ಶರಣ್ ತೆರೆಯ ಮೇಲಿರುವಷ್ಟೂ ಹೊತ್ತು ಪ್ರೇಕ್ಷಕರನ್ನು ನಗಿಸುತ್ತಾರೆ. ಗಂಭೀರ ಪಾತ್ರದಿಂದ ಕೊಂಚ ದೂರ ಸರಿದು ಪೆದ್ದು ಪೆದ್ದಾಗಿ ನಟಿಸಿದ ಅನಂತ್‌ನಾಗ್ ಅವರ ಪಾತ್ರ ಇಷ್ಟ ಆಗುವುದರಲ್ಲಿ ಸಂಶಯವಿಲ್ಲ.

ಆದರೆ ಪ್ರಿಯಾಂಕ ಅಭಿನಯ ಇನ್ನಷ್ಟು ಪಕ್ವವಾಗಬೇಕಿದೆ. ಗಿರಿಧರ್ ದೀವಾನ್ ಸಂಗೀತದಲ್ಲಿ ಒಂದೇ ಹಾಡಿದ್ದರೂ ಅದನ್ನು ಸಂದರ್ಭಕ್ಕೆ ತಕ್ಕಂತೆ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣ ದಿನೇಶ್ ಬಾಬು ಅವರ ಛಾಯಾಗ್ರಹಣದ ಶೈಲಿಯನ್ನೇ ನೆನಪಿಸುತ್ತದೆ.

ಒಟ್ಟಿನಲ್ಲಿ ಮನರಂಜನೆಯ ದೃಷ್ಟಿಯಿಂದ ಚಿತ್ರ ಮಜ ನೀಡುತ್ತದೆ. ಮದುವೆ ಊಟದ ಬಫೆ ಪದ್ಧತಿಯಂತೆ ಬೇಕಾದ್ದನ್ನಷ್ಟೇ ಹಾಕಿಕೊಂಡು ಬೇಡದುದರ ಬಗ್ಗೆ ನಿರಾಸಕ್ತಿ ತೋರುವ ಓದಾರ್ಯ ನಿಮ್ಮಲ್ಲಿದೆಯಾದರೆ ನಿಮ್ಮ ನೆಚ್ಚಿನ ನಟ ನಟಿಯರನ್ನೊಮ್ಮೆ ನಿರಾಳವಾಗಿ ನೋಡಿ ನಕ್ಕು ಹೊರ ಬರಬಹುದು.

ವೆಬ್ದುನಿಯಾವನ್ನು ಓದಿ