ಸಿನಿಮಾವನ್ನೂ ಜೆರಾಕ್ಸ್ ಮಾಡುವುದು ಸಾಧ್ಯವೇ? 'ಮರ್ಯಾದೆ ರಾಮಣ್ಣ' ಮೂಲಕ ಹೌದೆಂದು ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಪಿ.ವಿ.ಎಸ್. ಗುರುಪ್ರಸಾದ್. ಇದಕ್ಕಿರುವ ಅಪವಾದ ಏನೆಂದರೆ, ಕನ್ನಡದ ಹಾಡೊಂದಕ್ಕೆ ಪರಭಾಷಾ ಹುಡುಗಿಯನ್ನು ಕುಣಿಸಿರುವುದು.
ಸಾಮಾನ್ಯವಾಗಿ ಹೀರೋ ಅಂದರೆ ಒಂದಷ್ಟು ಜನರನ್ನು ಮುಷ್ಠಿಯಿಂದ ಮುಗಿಸಿ ಬಿಡುವವನು. ಆದರೆ ಇಲ್ಲಿ ನಮ್ಮ ರಾಮಣ್ಣ ಹಾಗಲ್ಲ. ಈತ ಪ್ರತಿ ಬಾರಿಯೂ ಹೊಡೆಸಿಕೊಳ್ಳುವವನು. ಹೀಗಿದ್ದ ರಾಮ ತನ್ನ ಜಮೀನು ಮಾರಲು ಗ್ರಾಮವೊಂದಕ್ಕೆ ಹೋಗುತ್ತಾನೆ. ಆಕಸ್ಮಿಕವಾಗಿ ರೌಡಿಯೊಬ್ಬನ ಮನೆಗೆ ಹೋಗಬೇಕಾಗುತ್ತದೆ. ಆತ ಹುಟ್ಟಾ ಕ್ರೂರಿ. ಆದರೆ ಮನೆಗೆ ಬಂದವರ ಪಾಲಿಗೆ ಅತಿಥಿ. ರಾಮುವನ್ನು ಉಳಿಸುವುದು ಕೂಡ ಅದೇ.
ವಾಸ್ತವದಲ್ಲಿ ರಾಮುವಿನ ತಂದೆ ಈ ರೌಡಿಯ ಸಹೋದರನನ್ನು ಕೊಂದಿರುತ್ತಾನೆ. ಇದು ತಿಳಿಯುತ್ತಿದ್ದಂತೆ ರಾಮುವನ್ನು ಕೊಲ್ಲಲು ರೌಡಿ ಹೊಂಚು ಹಾಕುತ್ತಾನೆ. ಆದರೆ ಮನೆಯಲ್ಲಿರುವಷ್ಟು ಹೊತ್ತು ಆತ ಏನೂ ಮಾಡಲಾರ. ಅಂತಹದ್ದೊಂದು ವಿಚಿತ್ರ ನಂಬಿಕೆಗೆ ರೌಡಿ ಅಂಟಿಕೊಂಡಿರುತ್ತಾನೆ. ಹಾಗೆಂದು ಮನೆಯೊಳಗೇ ಇರುವುದು ಹೇಗೆ ಸಾಧ್ಯ? ಕೋಮಲ್ ಆಟ ನಿಜಕ್ಕೂ ಇರುವುದು ಇಲ್ಲೇ. ಈ ನಡುವೆ ರೌಡಿಯ ಮಗಳು ರಾಮುವಿಗೆ ಇಷ್ಟವಾಗತೊಡಗುತ್ತಾಳೆ. ಮುಂದೇನಾಗುತ್ತದೆ?
ಮೊದಲಾರ್ಧದಲ್ಲಿ ತಿರುವುಗಳು ಬಿಡಿ, ಏನೂ ನಡೆಯುವುದಿಲ್ಲ. ಅಲ್ಲಿರುವುದು ಒಂದು ಹಾಡು ಮಾತ್ರ. ಉಳಿದ ಯಾವುದೂ ಕೋಮಲ್ ಇಮೇಜಿಗೆ ಹೊಂದಾಣಿಕೆಯಾಗುವುದಿಲ್ಲ. ಅವರು ಬೋರ್ ಹೊಡೆಸುವುದು ಈ ಹೊತ್ತಿನಲ್ಲೇ. ಆದರೆ ದ್ವಿತೀಯಾರ್ಧದಲ್ಲಿ ಪ್ರೇಕ್ಷಕರನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಕೋಮಲ್ ಯಶಸ್ವಿಯಾಗುತ್ತಾರೆ.
ಕೋಮಲ್ ಕೊಂಚ ದಪ್ಪಗಾಗಿರುವುದರಿಂದ ಸಪ್ಪೆಯಾಗಿ ಕಾಣುತ್ತಾರೆ ಎಂಬುದನ್ನು ಹೊರತುಪಡಿಸಿದರೆ, ಕೋಮಲ್ ಚಿತ್ರ ಪೂರ್ತಿ ಆವರಿಸಿಕೊಳ್ಳಲು ಯತ್ನಿಸಿದ್ದಾರೆ. ನಾಯಕಿ ನಿಶಾ ಹೀರೋಯಿನ್ ಆಯ್ಕೆಯಲ್ಲ.
ಎಸ್.ಎಸ್. ರಾಜಮೌಳಿಯವರ 'ಮರ್ಯಾದಾ ರಾಮಣ್ಣ' ತೆಲುಗು ಚಿತ್ರಕ್ಕೆ ಸಂಪೂರ್ಣ ನಿಷ್ಠೆ ನಿರ್ದೇಶಕರದ್ದು. ಸೈಕಲ್ಗೆ ಉಪೇಂದ್ರ ನೀಡಿರುವ ದನಿ ಗಮನ ಸೆಳೆಯುತ್ತದೆ. ಒಂದೆರಡು ಹಾಡುಗಳಲ್ಲಿ ಕೀರವಾಣಿ ಸಂಗೀತ ಕಿವಿಗೆ ತಟ್ಟುತ್ತದೆ.