ಮಿನುಗು: ಚಿತ್ರದೊಳಗಿನ ಚಿತ್ರದಲ್ಲಿ ಪೂಜಾ, ಸುನಿಲ್ ಕಲರವ

MOKSHA
ಚಿತ್ರ: ಮಿನುಗು
ತಾರಾಗಣ: ಸುನಿಲ್ ರಾವ್, ಪೂಜಾ ಗಾಂಧಿ, ಅಜಿತ್ ಹಂಡೆ
ನಿರ್ದೇಶನ: ಅಂಥೋಣಿ ಜಯವಂತ್
ಸಂಗೀತ: ಗೋಪು

ಚೊಚ್ಚಲ ಚಿತ್ರವೆಂದಾಗ ನಿರೀಕ್ಷೆಗಳು ಸಾಮಾನ್ಯ. ಆದರೆ ಅಂಥೋಣಿ ಜಯವಂತ್ ಆ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ. ಭಿನ್ನ ರೀತಿಯಲ್ಲಿ 'ಮಿನುಗು' ಚಿತ್ರವನ್ನು ನಿರೂಪಿಸುವ ಮೂಲಕ ಆಸಕ್ತಿ ಮೂಡಿಸುತ್ತಾರೆ.

ಅತ್ಯುತ್ತಮ ಕಥೆ ಮತ್ತು ಚಿತ್ರಕಥೆಯೇ ಯಶಸ್ಸಿನ ಮೊದಲ ಹೆಜ್ಜೆ ಎಂಬುದನ್ನು ಅರಗಿಸಿಕೊಂಡಿರುವ ಜಯವಂತ್ ಚಿತ್ರದುದ್ದಕ್ಕೂ ತನ್ನ ನಿಯಂತ್ರಣವನ್ನು ಸಾಬೀತುಪಡಿಸಿದ್ದಾರೆ.

ಆದಿತ್ಯ (ಸುನಿಲ್ ರಾವ್) ಮತ್ತು ಸಂಚಿತಾ (ಪೂಜಾ ಗಾಂಧಿ) ಕಾಲೇಜಿನಲ್ಲಿ ಗೆಳೆಯರಾಗಿದ್ದವರು. ಬಳಿಕ ಸಂಚಿತಾ ಚಿತ್ರರಂಗ ಪ್ರವೇಶಿಸಿ ನಾಯಕಿಯಾಗಿ ಮೆರೆಯುತ್ತಾರೆ. ಆದರೆ ಆದಿತ್ಯ ದಂಡಪಿಂಡದಂತೆ ತನ್ನ ಸಹೋದರಿಯ ಸಂಪಾದನೆಯನ್ನೇ ಅವಲಂಭಿಸಿರುತ್ತಾನೆ.

ಯಾವುದೇ ಗೊತ್ತು ಗುರಿಯಿಲ್ಲದೆ ಬಾಳ್ವೆ ನಡೆಸುವ ಆದಿತ್ಯನಿಗೆ ಸಂಚಿತಾಳನ್ನು ಕಂಡರೆ ಸಾಯುವಷ್ಟು ಪ್ರೀತಿ. ಇದನ್ನು ತಿಳಿದಿದ್ದರೂ ಸಂಚಿತಾ ಕೇವಲ ಗೆಳೆಯನಂತೆ ಮಾತ್ರ ಆತನನ್ನು ನೋಡುತ್ತಾಳೆ.

ಇದನ್ನೇ ವರ ಎಂದುಕೊಳ್ಳುವ ಸಿದ್ಧಾರ್ಥ (ಅಜಿತ್ ಹಂದೆ) ಸಂಚಿತಾಳ ಮೇಲೊಂದು ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ಅಡ್ಡ ದಾರಿ ಹಿಡಿಯುವ ಆತ ಸಂಚಿತಾಳ ಚಿತ್ರಜೀವನವನ್ನೇ ಬಲಿಕೊಡಲು ನಿರ್ಧರಿಸುತ್ತಾನೆ. ಇದಕ್ಕೆ ಕಾರಣ ಆದಿತ್ಯ ಎಂಬುದನ್ನೂ ಬಿಂಬಿಸುತ್ತಾನೆ.

ಊಹಿಸಿದಂತೆ ಎಲ್ಲವೂ ನಡೆದು ಮದುವೆ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ನಾಲಗೆ ಹೊರಳಿದಾಗ ಬಯಲಾದ ಸತ್ಯವನ್ನು ಅರಿತ ಸಂಚಿತಾಳು ಸಿದ್ಧಾರ್ಥನನ್ನು ಬಿಟ್ಟು ಆದಿತ್ಯನನ್ನೇ ಮನದಿನಿಯನಾಗಿ ಆರಿಸುತ್ತಾಳೆ. ಈ ನಡುವೆ ಹಲವು ತಿರುವು-ಮುರುವುಗಳು ಕಾಣ ಸಿಗುತ್ತವೆ.

ನಾಲ್ಕು ವರ್ಷಗಳ ಅಂತರದ ನಂತರ ಬೆಳ್ಳಿ ತೆರೆಗೆ ಮರಳಿರುವ ಸುನಿಲ್ ಅಚ್ಚರಿ ಮೂಡಿಸುವಷ್ಟು ತಣ್ಣಗಾಗಿದ್ದಾರೆ. ಪೂಜಾ ಸಿನಿಮಾದೊಳಗಿನ ಸಿನಿಮಾದ ನಾಯಕಿಯಾಗಿ ನಟಿಸಿ ಮೆಚ್ಚುಗೆ ಗಳಿಸುತ್ತಾರಾದರೂ, ಎರಡು ಸುತ್ತು ಹೆಚ್ಚೇ ದಪ್ಪಗಿದ್ದಾರೆ ಎಂದೆನಿಸದಿರದು. ಅಜಿತ್ ಪದಾರ್ಪಣೆ ಬಗ್ಗೆ ಕೊಂಕು ಬೇಕಿಲ್ಲ.

ಆದರೆ ಡೀಜೆ ಗೋಪು ಅವರಿಂದ ಅತ್ಯುತ್ತಮ ಹಾಗೂ ಸುಮಧುರ ಟ್ಯೂನ್‌ಗಳನ್ನು ಪಡೆಯುವಲ್ಲಿ ಜಯವಂತ್ ಎಡವಿರುವುದು ಕಣ್ಣಿಗೆ ರಾಚುತ್ತದೆ. ಸಂಗೀತವೂ ಅತ್ಯುತ್ತಮವಾಗಿರುತ್ತಿದ್ದರೆ ಚಿತ್ರ ಆಕಾಶದಲ್ಲೇ 'ಮಿನುಗು'ತ್ತಿತ್ತು.

ವೆಬ್ದುನಿಯಾವನ್ನು ಓದಿ