ವಿಸ್ಮಯ ಪ್ರಣಯ ಚಿತ್ರವಿಮರ್ಶೆ; ನೋಡೋ ಕಷ್ಟ ಬೇಕಿಲ್ಲ

ಚಿತ್ರ: ವಿಸ್ಮಯ ಪ್ರಣಯ
ತಾರಾಗಣ: ರಾಜ್ ಸಾಗರ್, ಮಯೂರಿ ಸೈನಿ, ಕಾವ್ಯಶ್ರೀ
ನಿರ್ದೇಶನ: ಮೋಹನ್ ಮಲ್ಲಪಳ್ಳಿ
ಸಂಗೀತ: ಮಾರುತಿ ಮಿರಾಜ್‌ಕರ್

'ವಿಸ್ಮಯ ಪ್ರಣಯ' ಶೀರ್ಷಿಕೆಯೇ ವಿಚಿತ್ರ. ಇನ್ನು ಚಿತ್ರ ಹೇಗಿರಬಹುದು ಎಂದು ಅಪ್ಪತಪ್ಪಿ ಟಿಕೆಟ್ ಕೊಂಡು ಸಿನಿಮಾ ಮಂದಿರ ಒಳಗೆ ಕಾಲಿಟ್ಟಿರೋ ನಿಮಗೆ ಖಂಡಿತವಾಗಿಯೂ ಕಾದಿದೆ ವಿಸ್ಮಯ.

ಪ್ರಣಯ ಸಿಗೋಲ್ಲ, ವಿಸ್ಮಯ ನಿಮ್ಮನ್ನು ಬಿಡೋಲ್ಲ. ಡಿಸೆಂಬರ್ 31 ವರ್ಷಾಂತ್ಯ. ಆದರೆ ಈ ಚಿತ್ರ ಬಿಡುಗಡೆಯಾಗಬೇಕಿದ್ದು ಏಪ್ರಿಲ್ 1 (ಫೂಲ್ಸ್ ಡೇ). ಕಾಸು ಕೊಟ್ಟವನಂತೂ ಒಂದು ರೀತಿ 'ಫೂಲ್' ಆಗಿದ್ದಾನೆ.

ನಿರ್ದೇಶಕ ಮೋಹನ್ ಮಲ್ಲಪಳ್ಳಿ, ಮೀರಾ (ಮಯೂರಿ) ಮತ್ತು ಅರ್ಪಿತಾ (ಕಾವ್ಯಶ್ರೀ) ಇಬ್ಬರು ಅಕ್ಕ ತಂಗಿಯರು, ಇವರೇ ಚಿತ್ರದ ನಾಯಕಿಯರು. ಪುರುಷ ದ್ವೇಷಿ ಅಕ್ಕ ಹಾಗೂ ಎಲ್ಲ ಗಂಡಸರು ಒಂದೇ ಥರದವರಲ್ಲ ಎಂಬ ಮನಸ್ಸಿ ತಂಗಿ. ಇವರ ಮಧ್ಯೆ ಅಡ್ರಸ್ ಇಲ್ಲದೆ ಬಂದು ಸೇರುವ ನಾಯಕ ಅಜಯ್ (ರಾಜ್ ಸಾಗರ್). ಆದರೆ, ಅರ್ಪಿತಾ ಅಜಯ್‌ನನ್ನು ಪ್ರೀತಿಸಿ ಮದುವೆಯಾಗುತ್ತಾಳೆ.

ಪ್ರಾರಂಭದಲ್ಲಿ ತಂಗಿಯ ಮದುವೆಯನ್ನು ವಿರೋಧಿಸಿದ್ದ ಅಕ್ಕ ನಂತರ ಒಪ್ಪಿಗೆ ನೀಡುತ್ತಾಳೆ. ಕ್ರಮೇಣ ಅಜಯ್ ಒಳ್ಳೆಯ ಗುಣಗಳಿಂದ ಈಕೆಯೂ (ಅಕ್ಕ) ಕೂಡ ಮನ ಸೋಲುತ್ತಾಳೆ. ಅಜಯ್‌ನನ್ನೇ ಮದುವೆಯಾಗಲು ಬಯಸುತ್ತಾಳೆ ಅಕ್ಕಾ ಮೀರಾ. ನಂತರದ್ದು ವಿಚಿತ್ರ ತಿರುವು. ತಂಗಿ ಅರ್ಪಿತಾ ಮತ್ತು ಅಜಯ್ ಮಧ್ಯೆ ದ್ವೇಷ ಹುಟ್ಟುವಂತೆ ಮಾಡಿ ಅವರಿಬ್ಬರನ್ನು ಬೇರ್ಪಡಿಸಿ ತಾನು ಮದುವೆಯಾಗಲು ಇಚ್ಛಿಸುತ್ತಾಳೆ. ಈ ಗೊಂದಲದಲ್ಲಿ ಪ್ರೇಕ್ಷಕರಿಗೆ ತಲೆಶೂಲೆಯಂತೂ ಹಿಡಿಸಿ ಕಳಿಸುವುದಂತೂ ನಿಜ.

ಚಿತ್ರದ ಕೊನೆಗೆ ತಂಗಿಯ ಮಗುವನ್ನು ಎತ್ತಿಕೊಂಡು ಸೂಸೈಡ್ ಪಾಯಿಂಟ್ಗೆ ಹೋಗಿ ತಾಳಿ ಕಟ್ಟಲು ಒತ್ತಾಯಿಸುತ್ತಾಳೆ. ಇಲ್ಲದಿದ್ದರೆ ಮಗುವನ್ನು ಕೆಳಗೆ ಹಾಕುವುದಾಗಿ ಬೆದರಿಕೆ ಒಡ್ಡುತ್ತಾಳೆ. ಮಾನಸಿಕ ಗೊಂದಲದಲ್ಲಿ ಸಿಲುಕಿರುವ ಪಾತ್ರದಲ್ಲಿ ಮೀರಾ ಓಕೆ. ಇನ್ನೂ ನಾಯಕ ರಾಜ್ ಸಾಗರ್ ಅಭಿನಯದಲ್ಲಿ ಸತ್ವವಿಲ್ಲ. ಸಂಭಾಷಣೆಗೂ ಅಭಿನಯಕ್ಕೂ ಒಂದಕ್ಕೊಂದು ಜೋಡಣೆಯಿಲ್ಲದ ನಟನೆ. ರಾಜ್ ಸಾಗರ್ ಬಾಡಿ ಲಾಂಗ್ವೇಜ್ ನಾಯಕನಂತಿಲ್ಲ. ಪೋಷಕ ಪಾತ್ರಕ್ಕೆ ಓಕೆ ಅನಿಸುತ್ತದೆ.

ನಾಯಕಿ ತಾಯಿ ಪಾತ್ರದಲ್ಲಿ ಬಂದುಹೋಗುವ ಹೇಮಾಚೌದರಿಯದು ಸಹಜ ಅಭಿನಯ. ಅನಗತ್ಯ ಹಾಸ್ಯ, ಫೈಟ್. ಚಿತ್ರದ ಸಂಗೀತಕ್ಕೆ ಒಂದು ಸ್ಟಾರ್ ಕೊಡಬಹುದು.

ಚಿತ್ರಕ್ಕೆ ಹೋಗುವ ಮುನ್ನಾ ತಲೆನೋವಿನ ಮಾತ್ರೆ ಜೊತೆಯಲ್ಲಿದ್ದರೆ ಸೂಕ್ತ.

ವೆಬ್ದುನಿಯಾವನ್ನು ಓದಿ