ಕೊರೊನಾ ಎಫೆಕ್ಟ್: ವಿದೇಶದಿಂದ ಬಂದವರ ಮಾಹಿತಿ ಕಲೆ ಹಾಕೋಕೆ ಮುಂದಾದ ಜಿಲ್ಲಾಡಳಿತ
ಬುಧವಾರ, 18 ಮಾರ್ಚ್ 2020 (19:06 IST)
ಕೊರೋನಾ ನಿಯಂತ್ರಣಕ್ಕೆ ರಾಜ್ಯದ ಗಡಿ ಪ್ರದೇಶದ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಿಗೆ ಹೊರ ದೇಶದಿಂದ ಬರುವ ವಿದೇಶಿಗರ ಮಾಹಿತಿ ಸಂಗ್ರಹ ಅವಶ್ಯಕ.
ಈ ನಿಟ್ಟಿನಲ್ಲಿ ಗೃಹ ಸಚಿವಾಲಯದ ಬ್ಯೂರೋ ಆಫ್ ಇಮ್ಮಿಗ್ರೇಷನ್ ಆಯುಕ್ತರಿಗೆ ಜಿಲ್ಲಾಡಳಿತದಿಂದ ಪತ್ರ ಬರೆದು ಮಾಹಿತಿ ಪಡೆಯಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭಾರತಿಯ ಪ್ರಜೆ ಅಲ್ಲದ ವಿದೇಶದ ಪ್ರಜೆಗಳು ಜಿಲ್ಲೆಗೆ ಆಗಮಿಸಿದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಇದನ್ನು ಜಿಲ್ಲಾ ಪೆÇಲೀಸ್ ಅಧೀಕ್ಷಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದಲ್ಲದೆ ಕಳೆದ 15-20 ದಿನಗಳಿಂದ ವಿದೇಶದಿಂದ ಮರಳಿದವರ ಮಾಹಿತಿ ಸಹ ಕಲೆಹಾಕಿ ಅವರ ಮೇಲೆ ನಿಗಾ ವಹಿಸಿರಿ ಎಂದರು.
ಗಡಿ ಜಿಲ್ಲೆ ಬೀದರ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಹೊಂದಿಕೊಂಡಿದ್ದು, ಪುಣೆ, ಹೈದ್ರಾಬಾದ, ಮುಂಬೈನಿಂದ ಹೆಚ್ಚಿನ ಜನ ಬರುತ್ತಾರೆ. ಇಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಬೀದರ ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವಪ್ಪ ಅವರಿಗೆ ಕಪಿಲ್ ಮೋಹನ ಅವರು ಸೂಚಿಸಿದರು.
ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರೋಗ ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಸ್ತುತ ಇರುವ ಸರ್ಕಾರಿ ವ್ಯವಸ್ಥೆಗಳ ಜೊತೆಗೆ ಖಾಸಗಿ ಅಸ್ಪತ್ರೆ ಮತ್ತು ಮೆಡಿಕಲ್ ಸಂಸ್ಥೆಗಳ ಸಹಾಯ ಅವಶ್ಯಕ. ಹೀಗಾಗಿ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಸಿ ಅವರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಅವರ ಸೇವೆ ಪಡೆಯಲು ಅಗತ್ಯ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಿ ಎಂದು ಡಿ.ಸಿ.ಗಳಿಗೆ ನಿರ್ದೇಶನ ನೀಡಿದರು.